ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಬುಧವಾರ ಮಧ್ಯರಾತ್ರಿವರೆಗೂ ನಿದ್ದೆ ಮಾಡಿರಲಿಲ್ಲ. ಬುಧವಾರ ರಾತ್ರಿ ನೋಂದಣಿ ಕೊಠಡಿಯಲ್ಲೇ ಇದ್ದ ಶಶಿಕಲಾ ಏಕಾಂಗಿಯಾಗಿ ಗಾಢ ಚಿಂತೆಯಲ್ಲಿ ಮುಳುಗಿ ಮಧ್ಯರಾತ್ರಿವರೆಗೂ ನಿದ್ರಿಸಿರಲಿಲ್ಲ. ಆ ನಂತರ ನಿದ್ರೆಗೆ ಜಾರಿದ್ದರು ಎಂದು ಜೈಲು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾತ್ರಿ ಊಟಕ್ಕೆ ನಿಗದಿಯಾದಂತೆ 2 ಚಪಾತಿ ಹಾಗೂ ಒಂದು ಕಪ್ ರೈಸ್ ಹಾಗೂ ಸಾಂಬಾರು, ಮೊಸರು ನೀಡಲಾಗಿತ್ತು. ರಾತ್ರಿ 11 ಗಂಟೆಯಾದರೂ ಶಶಿಕಲಾ ಊಟ ಮಾಡದೆ ಮೌನಕ್ಕೆ ಶರಣಾಗಿದ್ದರು. ಆಗ ಇಳವರಸಿ ಬಲವಂತಪಡಿಸಿದ ನಂತರ ಮೊಸರನ್ನ ಸೇವಿಸಿದರು. ಗುರುವಾರ ಮುಂಜಾನೆ 5.30ರ ಸುಮಾರಿಗೆ ಎಚ್ಚರಗೊಂಡ ಶಶಿಕಲಾ, ಕಾರಾಗೃಹದ ಕೊಠಡಿಯಲ್ಲೇ ವಾಯುವಿಹಾರ ಮಾಡಿದರು.
6.30ಕ್ಕೆ ಸಿಬ್ಬಂದಿ ಕಾಫಿ ನೀಡಿದ್ದು, ತಿಂಡಿಗೆ ಪೊಂಗಲ್ ನೀಡುವಂತೆ ಶಶಿಕಲಾ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅದರಂತೆ ಪೊಂಗಲ್ ನೀಡಲಾಯಿತು. ನ್ಯಾಯಾಲಯ ಅನುಮತಿ ನೀಡಿರುವಂತೆ ತಮಿಳು ಪತ್ರಿಕೆ ಮತ್ತು ಇಂಗ್ಲೀಷ್ ಪತ್ರಿಕೆಗಳನ್ನು ಓದಲು ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಕೈದಿ ಸಮವಸ್ತ್ರ ಧರಿಸದ ಶಶಿಕಲಾ ಗುರುವಾರ ಜೈಲು ಸಿಬ್ಬಂದಿ ನೀಡಿದ್ದ ಸಮವಸ್ತ್ರ ಧರಿಸಿದರು.
ಶಶಿಕಲಾಗೆ ಬಿಗಿಭದ್ರತೆ: ಜೈಲಿನಲ್ಲಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಶಿಕಲಾ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಜೈಲಿನ ಕೊಠಡಿ ಸುತ್ತಮುತ್ತ ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಸಾಮಾನ್ಯ ಕೈದಿಯಾಗಿದ್ದರೂ ಸುರಕ್ಷತೆ ದೃಷ್ಟಿಯಿಂದ ಭದ್ರತೆ ನೀಡಲಾಗಿದೆ. ಒಂದೊಮ್ಮೆ ಅಹಿತಕರ ಘಟನೆ ನಡೆದರೆ ಕರ್ನಾಟಕ ಜೈಲು ಸುರಕ್ಷಿತವಲ್ಲ ಎಂದು ಚೆನ್ನೈ ಕಾಧಿರಾಗೃಹಕ್ಕೆ ವರ್ಗಾಯಿಸುವಂತೆ ಶಶಿಕಲಾ ಕಾನೂನು ಮೊರೆಹೋಗಬಹುದು.
ಹೀಗಾಗಿ, ಸಾಕಷ್ಟು ಭದ್ರತೆ ನೀಡಲಾಗಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಶಶಿಕಲಾ ಅವರು ತಮ್ಮ ವಕೀಲರ ಮೂಲಕ ಚೆನ್ನೈ ಕಾರಾಗೃಹಕ್ಕೆ ತಮ್ಮನ್ನು ವರ್ಗಾಯಿಸುವಂತೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇದೆ ಎನ್ನಲಾಗಿದೆ.
ಭೇಟಿಗೆ ನಕಾರ
ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿಯಾಗುವ ಸಲುವಾಗಿ ಗುರುವಾರ ಮಾಜಿ ಶಾಸಕ ಗೋಪಾಲಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿನಿಂದ ಆಗಮಿಸಿದ್ದರು. ಆದರೆ ಭದ್ರತೆ ಹಿನ್ನೆಲೆಯಲ್ಲಿ ಪ್ರವೇಶ ದ್ವಾರದ ಬಳಿಯೇ ಪೊಲೀಸರು ಅವರು ತಡೆದರು.
ಶಶಿಕಲಾ ಅವರ ಭೇಟಿಗೆ ಬಂದಿದ್ದ ಕರ್ನಾಟಕದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪುಗಳೇಂದಿ, ಮಾಜಿ ಶಾಸಕ ಗೋಪಾಲಸ್ವಾಮಿ, ಕಾರ್ಮಿಕ ಘಟಕದ ಅಧ್ಯಕ್ಷ ಮಲಾರ್ ವೇಂದನ್, ಮಹೇಂದ್ರನ್ ಮತ್ತು ಆಸೈತಂಬಿ ಅವರಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಹೀಗಾಗಿ, ಬೆಂಬಲಿಗರು ನಿರಾಸೆಯಿಂದ ಹಿಂದಿರುಗುವಂತಾಯಿತು. ಗುರುವಾರ ಬೆಳಗ್ಗೆ ಶಶಿಕಲಾ ಅವರೊಂದಿಗೆ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚಿಸಲು ಆಗಮಿಸಿದ್ದ ಅವರ ವಕೀಲ ಮೂರ್ತಿ ಅವರಿಗೂ ಜೈಲು ಅಧಿಕಾರಿಗಳು ಅವಕಾಶ ಕಲ್ಪಿಸಿಲ್ಲ ಎಂದು ಹೇಳಲಾಗಿದೆ.