ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ವಿ.ನಟರಾಜನ್‌ಗೆ ಐಷಾರಾಮಿ ಸೌಲಭ್ಯ ನೀಡವಾಗಿದೆ ಎಂಬ ಡಿಐಜಿ ರೂಪಾ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ.
ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಶಶಿಕಲಾ ನಟರಾಜನ್‌ಗೆ ಏನೆಲ್ಲ ಸೌಲತ್ತು
ನೀಡಲಾಗಿದೆ. ಜೈಲಿನಲ್ಲಿ ಯಾವ ವಸ್ತುಗಳನ್ನು ಬಳಸಲು ಕೊಡಲಾಗಿದೆ ಎಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಮಾಹಿತಿ ನೀಡಿರುವ ಕಾರಾಗೃಹ ಇಲಾಖೆ ಅಧಿಕಾರಿಗಳು, ಶಶಿಕಲಾ ನಟರಾಜನ್‌ಗೆ ಯಾವುದೇ ಐಷಾರಾಮಿ ಸೌಲಭ್ಯ ನೀಡಿಲ್ಲ. ಸಾಮಾನ್ಯ ಕೈದಿಗಳಿಗೆ ಕೊಡುವಷ್ಟೇ ಸೌಲಭ್ಯವನ್ನು ಕೊಡಲಾಗಿದೆ ಎಂದು ಉತ್ತರ ನೀಡಿದ್ದಾರೆ. ಶಶಿಕಲಾಗೆ ಒಂದು ಸ್ಟೀಲ್ ತಟ್ಟೆ, ಸ್ಟೀಲ್ ಲೋಟ, ಸ್ಟೀಲ್ ಕಠೊರ, ಸ್ಟೀಲ್ ಚೊಂಬು, ಬೆಡ್ ಕಾಪೆìಟ್, ಎರಡು ಬೆಡ್‌ಶೀಟ್, ಕಂಬಳಿ, ಬಿಳಿ ರವಿಕೆ, ಬಿಳಿ ಸೀರೆ, ಲಂಗ ನೀಡಲಾಗಿದೆ. ಶಶಿಕಲಾ ನಟರಾಜನ್ ಖರೀದಿಸಿರುವ ಯಾವುದೇ ವಸ್ತುಗಳು ಜೈಲಿನಲ್ಲಿ ಇಲ್ಲ. ಬಳಕೆಗೂ ಅವಕಾಶವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೂಪಾ ಆರೋಪ: ಕಾರಾಗೃಹ ಇಲಾಖೆಯ ಡಿಐಜಿಯಾಗಿದ್ದ ಡಿ.ರೂಪಾ ಅವರು, ಜೈಲಿನಲ್ಲಿ ಶಶಿಕಲಾ ನಟರಾಜನ್‌ಗೆ ಐಷಾರಾಮಿ ಸೌಲಭ್ಯ ನೀಡಿದ್ದು, ಇದಕ್ಕಾಗಿ ಜೈಲಿನ ಅಧಿಕಾರಿಗಳಿಗೆ 2 ಕೋಟಿ ರೂ. ಲಂಚ ಕೊಡಲಾಗಿದೆ ಎಂಬ ಆರೋಪವಿದೆ ಎಂದು ಜೈಲಿನ ಸಿಸಿಟಿವಿ ದೃಶ್ಯಾವಳಿಗಳ ಸಮೇತ ಎರಡು ಪ್ರತ್ಯೇಕ ವರದಿಗಳನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಐಜಿ ಡಿ.ರೂಪಾ,ಆರ್‌ಟಿಐ ಕಾರ್ಯಕರ್ತರು ಪಡೆದುಕೊಂಡಿರುವ ಮಾಹಿತಿ ಬಗ್ಗೆ ಗೊತ್ತಿಲ್ಲ. ಇಲಾಖೆಯ ಅಧಿಕಾರಿಯಾಗಿ ನಾನು ನೋಡಿದ್ದನ್ನು ವರದಿಯಲ್ಲಿ ಉಲ್ಲೇಖೀಸಿ ನೀಡಿದ್ದೇನೆ. ಜತೆಗೆ ಪ್ರಕರಣದ ತನಿಖೆ ನಡೆಸಿದ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಸಲ್ಲಿಸಿರುವ ವರದಿ ಬಗ್ಗೆ ಮಾಹಿತಿ ನೀಡುವಂತೆ ಗೃಹ ಇಲಾಖೆಯ ಅಧೀನ ಕಾರ್ಯ ದರ್ಶಿಗೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದೇನೆ. ಸುಪ್ರಿಂಕೋರ್ಟ್ ನಿಯಮದ ಪ್ರಕಾರ 45 ದಿನದೊಳಗೆ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಬೇಕು ಅಥವಾ ಪ್ರಕರಣ ಪೂರ್ಣಗೊಳಿಸಬೇಕು. ಆದರೆ, ಇಲ್ಲಿ ಎರಡೂ ಕೂಡ ಆಗಿಲ್ಲ. ಹೀಗಾಗಿ ಮಾಹಿತಿ ಕೇಳಿದ್ದೇನೆ ಎಂದು ತಿಳಿಸಿದರು.