Advertisement

ಶಶಿಕಲಾ ಸೆರೆವಾಸಕ್ಕೆ; ಕೋರ್ಟ್‌ಗೆ ಶರಣಾದ ಮೂವರು ಅಪರಾಧಿಗಳು

03:45 AM Feb 16, 2017 | Team Udayavani |

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌, ಜೆ.ಇಳವರಸಿ ಮತ್ತು ಜಯಲಲಿತಾ ಅವರ ದತ್ತುಪುತ್ರ ವಿ.ಎನ್‌.ಸುಧಾಕರನ್‌ ಬುಧವಾರ ಸಂಜೆ ಶರಣಾಗಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಆರಂಭವಾಗಿದೆ.

Advertisement

ಶಶಿಕಲಾ ಅವರಿಗೆ ಕೈದಿ ಸಂಖ್ಯೆ- 9234, ಇಳವರಸಿಗೆ-ಕೈದಿ ಸಂಖ್ಯೆ 9235 ಹಾಗೂ ವಿ.ಎನ್‌.ಸುಧಾಕರನ್‌ಗೆ 9236 ಕೈದಿ ಸಂಖ್ಯೆ ನೀಡಲಾಗಿದೆ.

ಜೈಲಿನ ನಿಯಮದಂತೆ ಶಶಿಕಲಾ ಮತ್ತು ಇಳವರಿಸಿ ಅವರಿಗೆ ಮಹಿಳಾ ವಾರ್ಡ್‌ ನಿಗದಿ ಪಡಿಸಿದ್ದು, ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕೈದಿಯಾಗಿ ಕಳೆದಿದ್ದ ಸೆಲ್‌ನಲ್ಲಿಯೇ ಇವರಿಬ್ಬರನ್ನು ಇರಿಸಲಾಗಿದೆ. ಸುಧಾಕರನ್‌ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ವಿಶೇಷ ನ್ಯಾಯಾಲಯದಿಂದ  ಹೊರಗೆ ಬಂದಾಗ ಶಶಿಕಲಾ ಅವರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ಅವರ ಬಳಿ ಇದ್ದ ಪತಿ ನಟರಾಜನ್‌ ಅವರ ಮುಖ ನೋಡಿ ಭಾವುಕರಾದ ಶಶಿಕಲಾ ಕಣ್ಣೀರು ಸುರಿಸಿದರು. ಈ ವೇಳೆ ಪತಿ ನಟರಾಜನ್‌ ಅವರು ಶಶಿಕಲಾ ಅವರನ್ನು ಸಮಾಧಾನ ಪಡಿಸಿದರು.

ಸುಪ್ರೀಂ ಕೋರ್ಟ್‌ ಆದೇಶದಂತೆ ಫೆ.14ರಂದೇ ಶಶಿಕಲಾ ನಟರಾಜನ್‌ 36ನೇ ಹೆಚ್ಚುವರಿ ಸತ್ರ ವಿಶೇಷ ನ್ಯಾಯಾಲಯಕ್ಕೆ ಶರಣಬೇಕಿತ್ತು. ಆದರೆ, ಮಂಗಳವಾರ ಚೆನ್ನೈನಲ್ಲೇ ಉಳಿದುಕೊಂಡಿದ್ದ ಅವರು ನ್ಯಾಯಾಲಯಕ್ಕೆ ಶರಣಾಗಿರಲಿಲ್ಲ. ಬುಧವಾರ ಸಂಜೆ 5.30ರ ಸುಮಾರಿಗೆ ಶಶಿಕಲಾ ನಟರಾಜನ್‌, ಜೆ.ಇಳವರಸಿ, ಸುಧಾಕರನ್‌ ವಿಶೇಷ ನ್ಯಾಯಾಲಯದ ನ್ಯಾ.ಅಶ್ವತ್‌ನಾರಾಯಣ್‌ ಅವರ ಮುಂದೆ ಶರಣಾದರು.

Advertisement

ಮನೆ ಊಟಕ್ಕೆ ಮನವಿ:
ವಿಶೇಷ ನ್ಯಾಯಾಲಯದಲ್ಲಿ ಶಶಿಕಲಾ ಅವರು ಮೂರು ಬೇಡಿಕೆಯ ಮನವಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಶರಣಾಗಲು ಎರಡು ವಾರ ಕಾಲಾವಕಾಶ ಕೊಡಿ. ಮನೆ ಊಟಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಎ ದರ್ಜೆ ಕೈದಿ ಎಂದು ಪರಿಗಣಿಸಿ ವ್ಯವಸ್ಥೆ ನೀಡಬೇಕು ಎಂದು ಮನವಿ ಮಾಡಿದರು.

ನ್ಯಾ.ಅಶ್ವತ್‌ನಾರಾಯಣ್‌ ಅವರು, ಮೊದಲ ಎರಡು ಬೇಡಿಕೆಗಳನ್ನು ಈಡೇರಿಸಲು ತಿರಸ್ಕರಿಸಿದರು. ಮೂರನೇ ಬೇಡಿಕೆ ನಮ್ಮ ಪರಿಧಿಗೆ ಬರುವುದಿಲ್ಲ. ಜೈಲು ಅಧಿಕಾರಿಗಳ ಬಳಿ ಕೇಳಿಕೊಳ್ಳುವಂತೆ ಸೂಚನೆ ನೀಡಿದರು. ಆದರೆ ದಿನಪತ್ರಿಕೆ ಓದಲು ಅವಕಾಶ ನೀಡಿದ್ದು, ಗ್ರಂಥಾಲಯ ವ್ಯವಸ್ಥೆಗೆ ನ್ಯಾಯಾಧೀಶರು ಅವಕಾಶ ಕಲ್ಪಿಸಿದರು. ಬಳಿಕ ಅಪರಾಧಿಗಳನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಪೊಲೀಸರು ಕೇಂದ್ರ ಕಾರಾಗೃಹಕ್ಕೆ ಶಶಿಕಲಾ ಮತ್ತು ಇಳವರಸಿ ಅವರನ್ನು ಕರೆದೊಯ್ದು, ಜೈಲಿನ ಸಿಬ್ಬಂದಿ ವಶಕ್ಕೆ ಒಪ್ಪಿಸಿದರು.

ಈ ಸೆಲ್‌’ನಲ್ಲಿ ಶಶಿಕಲಾ ಅವರ ಭದ್ರತೆಗೆ 10 ಮಂದಿ ಮಹಿಳಾ ಸಿಬ್ಬಂದಿಯನ್ನು ನಿಯೋಜನೆಗೆ ನಿರ್ಧರಿಸಿದ್ದು, 24 ತಾಸು ಶಸ್ತ್ರಸಜ್ಜಿತವಾಗಿ ಕಾರ್ಯ ನಿರ್ವಸಹಿಸಲಿದ್ದಾರೆ. ಜೈಲಿನಲ್ಲಿ ಮಾಡುವ ಕೆಲಸಗಳನ್ನು ಪರಿಗಣಿಸಿ ನೀಡುವ ಟೋಕನ್‌ಗಳನ್ನು ತೆಗೆದುಕೊಂಡು, ಕಾರಾಗೃಹದಲ್ಲಿರುವ ಅಂಗಡಿಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಅವಕಾಶಗಳಿವೆ. ಭಾನುವಾರ ಶಶಿಕಲಾ ಅವರಿಗೆ ನಿಯೋಜಿಸುವ ಕೆಲಸದ ಬಗ್ಗೆ ನಿರ್ಧರಿಸಲಾಗುವುದು ಎಂದು ಜೈಲಿನ ಅಧೀಕ್ಷಕ ಕೃಷ್ಣಕುಮಾರ್‌ ತಿಳಿಸಿದ್ದಾರೆ. ಆದರೆ ಮೂಲಗಳ ಪ್ರಕಾರ, ಅವರಿಗೆ ಕ್ಯಾಂಡಲ್‌ ಮಾಡುವ ಕೆಲಸ ನೀಡಲಿದ್ದು, ದಿನಕ್ಕೆ 50 ರೂ. ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೂವರಿಗೂ ಕೊಠಡಿ ಹಂಚಿಕೆಯಾಗಿದ್ದರೂ ಬುಧವಾರ ರಾತ್ರಿ ನೋಂದಣಿ ಆವರಣದಲ್ಲೇ ತಾತ್ಕಾಲಿಕವಾಗಿ ಇರಿಸಿ ಗುರುವಾರದಿಂದ ನಿಗದಿಪಡಿಸಿರುವ ಸೆಲ್‌ಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ. ಶಶಿಕಲಾ ಅವರನ್ನು ಇರಿಸಲಾಗುವ ಸೆಲ್‌ ಪಕ್ಕದಲ್ಲೇ ಸರಣಿ ಹಂತಕಿ ಸೈನೇಡ್‌ ಮಲ್ಲಿಕಾ ಸೆಲ್‌ ಇದೆ ಎಂದು ಮೂಲಗಳು ತಿಳಿಸಿವೆ.

ಮುದ್ದೆ,ಮೊಟ್ಟೆ,ಚಪಾತಿ,ಬೇಳೆ ಸಾರು!
ಶಶಿಕಲಾ ಅವರಿಗೆ 3 ಬಿಳಿಸೀರೆ, 1 ತಟ್ಟೆ, 1 ಚೆಂಬು, 1 ಜಮಖಾನ, 1 ದಿಂಬು, 1 ಬ್ಲಾಂಕೆಟ್‌ಗಳನ್ನು ನೀಡಲಾಗಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗಿರುವ ಸವಲತ್ತುಗಳನ್ನೇ ಶಶಿಕಲಾ ಅವರಿಗೂ ನೀಡಲಾಗಿದೆ. ಶಶಿಕಲಾ ನಟರಾಜನ್‌ ಅವರನ್ನು ನೋಡಿಕೊಳ್ಳಲು ಇಬ್ಬರು ಮಹಿಳಾ ಪೇದೆಗಳನ್ನು ನಿಯೋಜಿಸಲಾಗಿದೆ. ಆದರೆ, ಬೆಳಗ್ಗೆ 6.30ಕ್ಕೆ ಎರಡು ಮೊಟ್ಟೆ ರೈಸ್‌, ಮಧ್ಯಾಹ್ನ 11.30ಕ್ಕೆ ಊಟವಾಗಿ 2 ಚಪಾಟಿ ಅಥವಾ ರಾಗಿ ಮುದ್ದೆ,  150 ಎಂಎಲ್‌ ಬೇಳೆ ಸಾರು.  ಸಂಜೆ 6.30ಕ್ಕೆ ಮೊಟ್ಟೆ ಚಪಾತಿ ನೀಡಲಾಗುತ್ತದೆ.

ಸದ್ಯದ ರಾಜಕೀಯ ಸ್ಥಿತಿಯನ್ನು ಗಮನಿಸಿದರೆ, ಪನ್ನೀರ್‌ಸೆಲ್ವಂ ಅಥವಾ ಎಐಎಡಿಎಂಕೆಯ ಬೇರೆ ಯಾರಾದರೂ  ಸರ್ಕಾರ ರಚಿಸಿದರೂ ಅದು ಅಸ್ಥಿರವಾಗುವುದು ಖಚಿತ. ಹಾಗಾಗಿ, ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆಯೇ ಹೆಚ್ಚು.
– ಎಂ ಕೆ ಸ್ಟಾಲಿನ್‌, ಡಿಎಂಕೆ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next