ಹೊಸದಿಲ್ಲಿ : ಪತ್ನಿ ಸುನಂದಾ ಪುಷ್ಕರ್ ಳ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ, ಪತಿ, ಶಶಿ ತರೂರ್ ಅವರು ದಿಲ್ಲಿ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಯಾಚಿಸಿದ್ದಾರೆ.
ದಿಲ್ಲಿ ನ್ಯಾಯಾಲಯ ಈಗಾಗಲೇ ತರೂರ್ ಅವರಿಗೆ ಈ ಪ್ರಕರಣದ ಓರ್ವ ಆರೋಪಿಯಾಗಿ ಸಮನ್ಸ್ ಜಾರಿ ಮಾಡಿದೆ.
ತರೂರ್ ಅವರು ಇಂದು ತಮ್ಮ ಜಾಮೀನು ಕೋರಿಕೆ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರಿಗೆ ಸಲ್ಲಿಸಿದರು. ನ್ಯಾಯಾಧೀಶರು ಈ ಬಗ್ಗೆ ದಕ್ಷಿಣ ದಿಲ್ಲಿ ಪೊಲೀಸರ ಪ್ರತಿಕ್ರಿಯೆಯನ್ನು ಕೋರಿ ಅರ್ಜಿಯ ವಿಚಾರಣೆಯನ್ನು ನಾಳೆ ಬುಧವಾರಕ್ಕೆ ನಿಗದಿಸಿದರು.
ಸುನಂದಾ ಪುಷ್ಕರ್ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಹಾಗೂ ಆಕೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ತರೂರ್ ಅವರಿಗೆ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಆರೋಪಿಯಾಗಿ ಕೋರ್ಟಿಗೆ ಹಾಜರಾಗುವಂತೆ ಆದೇಶಿಸಿ ಸಮನ್ಸ್ ಜಾರಿ ಮಾಡಿತ್ತು.
ನ್ಯಾಯವಾದಿ ವಿಕಾಸ್ ಪಾಹ್‌ವಾ ಮೂಲಕ ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಯಲ್ಲಿ ತರೂರ್ ಅವರು “ಬಂಧನ ಕೈಗೊಳ್ಳದೆ ಚಾರ್ಜ್ ಶೀಟ್ ದಾಖಲಿಸಲಾಗಿದೆ; ವಿಶೇಷ ತನಿಖಾ ತಂಡ ಈಗಾಗಲೇ ಪ್ರಕರಣದ ತನಿಖೆ ಮುಗಿಸಿರುವುದಾಗಿ ಹೇಳಿದ್ದು ಕಸ್ಟಡಿಯಲ್ಲಿ ಪ್ರಶ್ನಿಸುವ ಅಗತ್ಯ ಇಲ್ಲ ಎಂದು ಹೇಳಿದೆ’ ಎಂದುನಿವೇದಿಸಿಕೊಂಡಿದ್ದಾರೆ.