ಉಡುಪಿ: ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಶಾಂಕ್ “ಹನುಮಾನ್ ಚಾಲೀಸ್’ ಅನ್ನು 47 ಸೆಕೆಂಡ್, 87 ಮಿಲಿ ಸೆಕೆಂಡ್‌ನಲ್ಲಿ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2022ರಲ್ಲಿ ವಿಶೇಷ ದಾಖಲೆ ಸೃಷ್ಟಿಸಿದ್ದಾನೆ.
ಕುಂಜಿಬೆಟ್ಟಿನ ಅಶೋಕ್ ಸಾಲ್ಯಾನ್ ಮತ್ತು ಭಾರತಿ ದಂಪತಿಯ ಪುತ್ರ ಶಶಾಂಕ್, 2021ರ ಎಪ್ರಿಲ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹರಿಯಾಣದ ಅನಿತಾ ಅವರ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದ. ಅನಿತಾಗಿಂತ 13 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಹನುಮಾನ್ ಚಾಲೀಸ್ ಪಠಿಸಿದ್ದನು.
ಈತ ಹನುಮಾನ್ ಚಾಲೀಸ್‌ನ 40 ಶ್ಲೋಕಗಳನ್ನು ನಿತ್ಯವೂ ಪಠಿಸುತ್ತಿದ್ದಾನೆ.
ಎರಡು ವರ್ಷದ ಹಿಂದೆ ಪಾಲಕರೊಂದಿಗೆ ಶ್ರೀ ಕೃಷ್ಣಮಠಕ್ಕೆ ತೆರಳಿ ಪೂಜೆ ಪೂರೈಸಿ ವಾಪಾಸ್ ಮನೆಗೆ ಹೋಗುವ ಸಂದರ್ಭದಲ್ಲಿ “ಯಾರೋ ಒಬ್ಬರು ಇದನ್ನು ಓದು’ ಎಂದು ಬಾಲಕನ ಕೈಗೆ ಹನುಮಾನ್ ಚಾಲೀಸ್ ಪುಸ್ತಕ ನೀಡಿದ್ದರು. ಅಂದಿನಿಂದ ಶಶಾಂಕ್ ನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು, ಸ್ನಾನ ಮುಗಿಸಿ ದೇವರ ಶ್ಲೋಕ, ಭಜನೆ ಮಾಡಿದ ಅನಂತರ ಹನುಮಾನ್ ಚಾಲೀಸ್ ಪಠಿಸುತ್ತಿದ್ದಾನೆ.
ಶಾಲೆಯ ಪಾಠ, ಪಠ್ಯೇತರ ಚಟುವಟಿಕೆಯಲ್ಲೂ ಶಶಾಂಕ್ ಚುರುಕಿದ್ದಾನೆ. ಜತೆಗೆ ಕಲೆಯಲ್ಲೂ ತನ್ನ ಪ್ರತಿಭೆ ತೋರಿಸುತ್ತಿದ್ದಾನೆ. ದೈವಭಕ್ತಿ ಇದ್ದುದ್ದರಿಂದಲೇ ಇದು ಸಾಧ್ಯವಾಗಿದೆ. ವಿದ್ಯಾಭ್ಯಾಸ ಜತೆಯಲ್ಲೇ ಮುಂದಿನ ದಿನಗಳಲ್ಲಿ ಹನುಮಾನ್ ಚಾಲೀಸ್ ಪಠಣದಲ್ಲಿ ವರ್ಲ್ಡ್ ರೆಕಾರ್ಡ್ಸ್‌ಗಾಗಿ ಶ್ರಮಿಸುವ ಗುರಿ ಹೊಂದಿದ್ದಾನೆ .
ಎಂದು ಶಶಾಂಕ್ ತಾಯಿ ಭಾರತಿ ಅವರು ಉದಯವಾಣಿಗೆ ತಿಳಿಸಿದ್ದಾರೆ. ಹನುಮಾನ್ ಚಾಲೀಸ್ ಪಠಿಸುವುದಕ್ಕೆ ನನ್ನ ತಂದೆ-ತಾಯಿಯೇ ಸ್ಫೂರ್ತಿ ಎಂದು ಹೇಳುತ್ತಾನೆ ಬಾಲಕ ಶಶಾಂಕ್.