Advertisement

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

11:41 PM Oct 17, 2021 | Team Udayavani |

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಲ್ಪಸಂಖ್ಯಾಕ ಹಿಂದೂಗಳು ಮತ್ತು ಸಿಕ್ಖರನ್ನು ಗುರಿಯಾಗಿಸಿ ದಾಳಿ ನಡೆಸಿ ನಿರ್ದಯವಾಗಿ ಹತ್ಯೆಗೈಯ್ಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕಳೆದೊಂದು ವಾರದಿಂದೀಚೆಗೆ ಉಗ್ರರು ಭದ್ರತಾ ಪಡೆಗಳ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಇದರ ಹೊರತಾಗಿಯೂ ಗಡಿಯಲ್ಲಿ ಪಾಕ್‌ ಪ್ರೇರಿತ ನುಸುಳುಕೋರರು ಒಳನುಸುಳಲೆತ್ನಿಸುವುದು ಮಾತ್ರ ನಿಂತಿಲ್ಲ. ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿ ಸದೆಬಡಿಯುತ್ತಲೇ ಇದ್ದರೂ ಬೇರೆ ಬೇರೆ ಮಾರ್ಗದಲ್ಲಿ ಒಳ ನುಸುಳಿ ದುಷ್ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿರುವುದೇ ಅಲ್ಲದೆ ಅಲ್ಪಸಂಖ್ಯಾಕ ಸಮು ದಾಯದವರನ್ನೇ ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಅಲ್ಲಿನ ಜನರ ನಡುವಣ ಒಗ್ಗಟ್ಟನ್ನು ಮುರಿಯುವ ಪ್ರಯತ್ನದಲ್ಲಿ ಉಗ್ರರು ತೊಡಗಿದ್ದಾರೆ. ಇಂತಹ ಕೃತ್ಯಗಳ ಮೂಲಕ ಪಾಕಿಸ್ಥಾನವು ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿ ಕಾಶ್ಮೀರ ವಿಷಯವನ್ನು ಮತ್ತೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಷಡ್ಯಂತ್ರದಲ್ಲಿ ನಿರತ ವಾಗಿರುವುದನ್ನು ಈ ಬೆಳವಣಿಗೆಗಳು ಸಾಬೀತುಪಡಿಸಿವೆ.

ಕಳೆದೊಂದು ವಾರದಿಂದೀಚೆಗೆ ಜಮ್ಮುವಿನ ಗಡಿ ಭಾಗದ ಪೂಂಛ ಮತ್ತು ರಜೌರಿ ಅರಣ್ಯ ಪ್ರದೇಶಗಳಲ್ಲಿ ಉಗ್ರರು ನಿರಂತರವಾಗಿ ಭಾರತೀಯ ಯೋಧರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದಾರೆ. ವಾರದ ಅವಧಿಯಲ್ಲಿ ನಡೆದ ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಒಂಬತ್ತು ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ವರ್ಷದ ಜೂನ್‌ನಿಂದೀಚೆಗೆ ಜಮ್ಮು ವಲಯದ ರಜೌರಿ ಮತ್ತು ಪೂಂಛ ಪ್ರದೇಶದಲ್ಲಿ ಉಗ್ರರು ಸತತವಾಗಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದು ಈ ವೇಳೆ ಭಾರತೀಯ ಯೋಧರು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಂಬತ್ತು ಮಂದಿ ಉಗ್ರರು ಹತ್ಯೆಗೀಡಾಗಿದ್ದರು. ಉಗ್ರರು ಮತ್ತೆ ತಮ್ಮ ಆಟಾಟೋಪವನ್ನು ಪ್ರದರ್ಶಿಸಲಾರಂಭಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾಕ ಸಮುದಾಯದವರ ಮನದಲ್ಲಿ ಭೀತಿ ಮನೆಮಾಡಿದ್ದು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆಯಲಾರಂಭಿಸಿದ್ದಾರೆ.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರು ಮತ್ತು ಉಗ್ರರ ಬಗೆಗೆ ಅನುಕಂಪ ತೋರಿ ಆಶ್ರಯ ನೀಡುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ಸದೆ ಬಡಿಯಲಾಗುವುದು ಎಂದು ಹೇಳುವ ಮೂಲಕ ಉಗ್ರರ ವಿಚಾರದಲ್ಲಿ ಸರಕಾರದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಉಗ್ರರನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರದ ಶಾಂತಿಯನ್ನು ಕದಡುವ ಪ್ರಯತ್ನವನ್ನು ತತ್‌ಕ್ಷಣ ನಿಲ್ಲಿಸುವಂತೆ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಸಮುದಾಯ ಎಚ್ಚರಿಕೆ ನೀಡಬೇಕು. ಇದರ ಹೊರತಾಗಿಯೂ ಪಾಕಿಸ್ಥಾನ ತನ್ನ ಚಾಳಿಯನ್ನು ಬಿಡದೇ ಹೋದಲ್ಲಿ ಅದರ ವಿರುದ್ಧ ಕಠಿನ ನಿರ್ಬಂಧಗಳನ್ನು ಹೇರಬೇಕು. ಇಲ್ಲವಾದಲ್ಲಿ ಭಾರತ ತನ್ನ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಪಾಕಿಸ್ಥಾನದ ವಿರುದ್ಧ ತೀಕ್ಷ್ಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next