ಕಾಸರಗೋಡು: ಕಾದಿರುವರು ಹೊಸಮನೆಯಲ್ಲಿ ಶರ್ಮಿಳಾ ಸಹೋದರಿಯ ಬರೋಣಕ್ಕಾಗಿ… ರಾಜ್ಯ ಸರಕಾರದ ಜನಪರ ಯೋಜನೆಗಳಲ್ಲಿ ಒಂದಾಗಿರುವ ಲೈಫ್ ಮಿಷನ್ ಮೂಲಕ ನೂತನ ನಿವಾಸ ನಿರ್ಮಿಸಿಕೊಂಡಿರುವ ಶರ್ಮಿಳಾ ಅವರು ನೂತನ ಮನೆಗೆ ತಮ್ಮ ಸಹೋದರಿಯ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಕಲ್ಲಿಕೋಟೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿರುವ ಸೋದರಿ ಶೀಘ್ರದಲ್ಲಿ ನೂತನ ಮನೆಗೆ ಬರುವ ನಿರೀಕ್ಷೆಯಲ್ಲಿ ಶರ್ಮಿಳಾ ಇದ್ದಾರೆ. ಕಾರಡ್ಕ ನೀರೋಳಿಪ್ಪಾರೆ ಪರಿಶಿಷ್ಟ ಪಂಗಡ ಕಾಲನಿಯಲ್ಲಿ ಇವರಿಗೆ ನೂತನ ಮನೆ ನಿರ್ಮಾಣವಾಗಿದೆ.
ಕೆಲವು ವರ್ಷಗಳ ಹಿಂದೆಯೇ ಹೆತ್ತವರನ್ನು ಕಳೆದುಕೊಂಡಿದ್ದ ಇವರು ತಮ್ಮ ಸೋದರಿ ಶೋಭಾ ಅವರೊಂದಿಗೆ ಹಳೆಯ ಶಿಥಿಲ ಮನೆಯಲ್ಲಿ ವಾಸವಾಗಿದ್ದರು. ಮನೆಯ ದುಸ್ಥಿತಿಯ ಹಿನ್ನೆಲೆಯಲ್ಲಿ ಅವರನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳೀಯ ಟಿ.ವಿ. ಶೆಡ್‌ಗೆ ಸ್ಥಳಾಂತರಿಸಿದ್ದರು. ಮಾನಸಿಕ ಅಸ್ವಸ್ಥತೆ ಹೊಂದಿದ್ದ ಸೋದರಿ ಶೋಭಾ ಅವರು ಶರ್ಮಿಳಾ ಅವರಿಗೆ ದೈಹಿಕ ಹಿಂಸೆಯನ್ನು ನೀಡುತ್ತಿದ್ದ ಹಿನ್ನೆಲೆಯಲ್ಲಿ, ಅವರನ್ನು ಕಲ್ಲಿಕೋಟೆಯ ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಡಹುಟ್ಟಿದವಳು ಆಸ್ಪತ್ರೆಗೆ ದಾಖಲಾದ ಮೇಲೆ ಶರ್ಮಿಳಾ ಏಕಾಂಗಿ ಬದುಕನ್ನು ಸವೆಸಬೇಕಾಗಿ ಬಂದಿತ್ತು.
ಹಲವು ಸಮಸ್ಯೆಗಳ ನಡುವೆಯೂ ಲೈಫ್ ಮಿಷನ್ ಮೂಲಕ ನೂತನ ಸುರಕ್ಷಿತ ನಿವಾಸವೊಂದು ಲಭಿಸಿರುವುದು ಶರ್ಮಿಳಾರ ಬದುಕಿಗೆ ಹೊಸ ಆಶಾಕಿರಣವಾಗಿದೆ. ಲೈಫ್ ಮಿಷನ್ ಯೋಜನೆ ಮೂಲಕ 4 ಲಕ್ಷ ರೂ., ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಿಂದ 2 ಲಕ್ಷ ರೂ. ಲಭಿಸಿದ ಹಿನ್ನೆಲೆಯಲ್ಲಿ ಒಟ್ಟು 6 ಲಕ್ಷ ರೂ.ನಲ್ಲಿ ಸುಭದ್ರ ನಿವಾಸ ನಿರ್ಮಾಣವಾಗಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕತನ ನಡೆಸುವ ಮೂಲಕ ಇವರು ಜೀವನ ನಡೆಸುತ್ತಿದ್ದಾರೆ.
ಸೋದರಿಯೂ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮರಳಿದರೆ ಈ ಮನೆಯಲ್ಲಿ ನೆಮ್ಮದಿಯಿಂದ ಬಾಳಬಹುದು ಎಂಬ ನಿರೀಕ್ಷೆಯಲ್ಲಿ ಶರ್ಮಿಳಾ ಅವರಿದ್ದಾರೆ.