ಸಂಗೀತ ಪರಿಷತ್ ಮಂಗಳೂರು ಇದರ ರಜತೋತ್ಸವದಂಗವಾಗಿ ಮೇ 20ರಂದು ಚೆರ್ತಲ ರಂಗನಾಥ ಶರ್ಮ ಅವರ ಸಂಗೀತ ಕಛೇರಿ ಮಂಗಳೂರಿನ ರಾಮಕೃಷ್ಣ ಮಠದ ವಿವೇಕಾನಂದ ಸಭಾಭವನದಲ್ಲಿ ನಡೆಯಿತು.
ರೀತಿಗೌಳದ ವರ್ಣದೊಂದಿಗೆ ಪ್ರಾರಂಭವಾಗಿ ಮುತ್ತುಸ್ವಾಮಿ ದೀಕ್ಷಿತರ ಜನರಂಜನಿ ರಾಗದ ಗಣಪತೇ ಸುಗುಣನಿಧೇ ಕೃತಿಯಿಂದ ಮುಂದುವರೆಯಿತು. ನಂತರ ಚಲ ನಾಟರಾಗದ ಆಲಾಪನೆಯೊಂದಿಗೆ ಕೋಟೀಶ್ವರ ಅಯ್ಯರ್ ಅವರ ಏದಯ್ನಾ ಗತಿ ಕೃತಿಯೂ ಉತ್ತಮ ನೆರೆವಲ್ ಹಾಗು ಸ್ವರ ಪ್ರಸ್ತಾರದೊಂದಿಗೆ ಮೂಡಿಬಂತು. ಹಮೀರ್ ಕಲ್ಯಾಣಿಯಲ್ಲಿ ಮುತ್ತುಸ್ವಾಮಿ ದೀಕ್ಷಿತರ ಪರಿಮಳ ರಂಗನಾಥಂ ಭಜೇ ಕೃತಿಯನ್ನು ಉತ್ತಮವಾಗಿ ಪ್ರಸ್ತುತ ಪಡಿಸಲಾಯಿತು. ಮುಂದೆ ಶ್ರೀರಂಜನಿ ರಾಗದ ತ್ಯಾಗರಾಜರ ಕೀರ್ತನೆ ಮಾರುಬಲ್ಕ ರಂಜಿಸಿತು.
ಕಛೇರಿಯ ಮುಖ್ಯರಾಗ ಮುಖಾರಿಯ ವಿಸ್ತಾರ ಆಲಾಪನೆಯ ನಂತರ ತ್ಯಾಗರಾಜರ ಮುರಿಪೇಮು ಗಲಿಗೆಗದಾ ರಾಮ ಕೀರ್ತನೆಯನ್ನು ನೆರವಲ್, ಸ್ವರಪ್ರಸ್ತಾರದೊಂದಿಗೆ ಪ್ರಸುತ ಪಡಿಸಲಾಯಿತು. ಪುರಂದರದಾಸರ ಇನ್ನು ದಯಬಾರದೆ… ಕಲ್ಯಾಣ ವಸಂತರಾಗದ ಆಲಾಪನೆಯೊಂದಿಗೆ ಹೃದಯಸ್ಪರ್ಶಿಯಾಗಿತ್ತು. ನಂತರ ಮಾಂಡ್ ರಾಗದಲ್ಲಿ ಕನಕದಾಸರ ಬಾರೋ ಕೃಷ್ಣಯ್ಯ…ವನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಲಾಯಿತು. ದೇವರನಾಮಗಳ ಭಾವಪೂರ್ಣ ಪ್ರಸ್ತುತಿ ದಿ| ಎಮ್.ಎಲ್. ವಸಂತಕುಮಾರಿಯವರ ನೆನಪು ತಂದಿತು.
ರಂಗನಾಥ ಶರ್ಮ ಅವರ ಉತ್ತಮ ಶಾರೀರ, ಕೃತಿಗಳ ವಿದ್ವತ್ ಪೂರ್ಣ ಪ್ರಸ್ತುತಿ, ಉತ್ಕೃಷ್ಟ ಮನೋಧರ್ಮ ಮಂಗಳೂರಿನ ಶ್ರೋತೃಗಳ ಮನಸೆಳೆಯುವಲ್ಲಿ ಯಶಸ್ವಿಯಾದವು. ಲಾಲ್ಗುಡಿ ಜಯರಾಮನ್ ರವರ ಭಾಗೇಶ್ರೀ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಕಛೇರಿ ಮುಕ್ತಾಯವಾಯಿತು. ಪಿಟೀಲಿನಲ್ಲಿ ಎಡಪಳ್ಳಿ ಅಜಿತ್, ಮೃದಂಗದಲ್ಲಿ ನಾಂಜಿಲ್ ಅರುಳ್ ಮತ್ತು ಘಟಂನಲ್ಲಿ ಶ್ರೀಜಿತ್ ಸಹಕಾರ ನೀಡಿದರು.
ಬೇಲೂರು ಶ್ರೀಧರ್