ಬಾಗಲಕೋಟೆ: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರೆದಿದ್ದು, ಹಳ್ಳಿ ಹಾಗೂ ನಗರದ ಜನರಿಗೆ ತರಕಾರಿ ಪೂರೈಸುವ ಮೂಲಕ ವಿಶಿಷ್ಟ ಸೇವೆಗೆ ನಗರದ ಯುವ ರೈತ ಸಮೂಹ ಮುಂದಾಗಿದೆ.
ತಾಲೂಕಿನ ಮನ್ನಿಕಟ್ಟಿ ಯುವ ರೈತ ಮಂಜುನಾಥ ವಾಸನದ ಹಾಗೂ ಸ್ನೇಹಿತರು, ಪ್ರತಿ ವರ್ಷ ವಿವಿಧ ತರಕಾರಿ ಬೆಳೆಯುತ್ತಿದ್ದು, ಅವುಗಳನ್ನು ಹೈದ್ರಾಬಾದ್, ಬೆಂಗಳೂರು ಸಹಿತ ವಿವಿಧೆಡೆ ಪೂರೈಸುತ್ತಿದ್ದರು. ಆದರೆ, ಈ ಬಾರಿ ಸುತ್ತಲಿನ ಗ್ರಾಮಸ್ಥರಿಗೆ ಉಚಿತವಾಗಿ ನೀಡುತ್ತಿದ್ದು, ಬಾಗಲಕೋಟೆಯ ಜನರಿಗೆ ಕಡಿಮೆ ಬೆಲೆಗೆ ತರಕಾರಿ ನೀಡಲು ತೀರ್ಮಾನಿಸಿದ್ದು, ಇದರಿಂದ ಜನರಿಗೆ ಅನುಕೂಲವಾಗುತ್ತಿದೆ.
ದಲ್ಲಾಳಿಗಳಿಗೆ ಲಾಭ: ಲಾಕ್‌ಡೌನ್ ಘೋಷಣೆಯೇ ಬಂಡವಾಳ ಮಾಡಿಕೊಂಡ ಕೆಲವು ದಲ್ಲಾಳಿಗಳು, ವ್ಯಾಪಾರಸ್ಥರು ಕಡಿಮೆ ಬೆಲೆಗೆ ವಿವಿಧ ತರಕಾರಿ ಖರೀದಿಸಿ, ನಗರದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಈ ಬೆಲೆ ಕಷ್ಟಪಟ್ಟು ಬೆಳೆದ ರೈತರಿಗೆ ಮಾತ್ರ ದೊರೆಯುತ್ತಿಲ್ಲ. ಹೀಗಾಗಿ ಯುವ ರೈತರು, ಜಿಲ್ಲಾಡಳಿತದಿಂದ ತರಕಾರಿ ಪೂರೈಕೆಗೆ ಅನುಮತಿ ಪಡೆದಿದ್ದು, ಎಲ್ಲ ಮುಂಜಾಗ್ರತಾ ಕ್ರಮದೊಂದಿಗೆ ಮನೆ ಮನೆಗೆ ತಲುಪಿಸುವ ವ್ಯವಸ್ಥೆಗೆ ಮುಂದಾಗಿದ್ದಾರೆ.
ಮನ್ನಿಕಟ್ಟಿ ಗ್ರಾಮದಲ್ಲಿ ಟೊಮ್ಯಾಟೊ, ಬದನೆಕಾಯಿ, ಚವಳಿ, ಸವತೆ, ಬೆಂಡೆಕಾಯಿ ಹೀಗೆ ವಿವಿಧ ತರಕಾರಿ ಬೆಳೆದಿದ್ದು, ನಗರದ ಬಾಗವಾನರು (ವ್ಯಾಪಾರಸ್ಥರು) ರೈತರ ಹೊಲಕ್ಕೆ ಬಂದು ಕಡಿಮೆಗೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಅದನ್ನೇ ನಗರಕ್ಕೆ ತಂದು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದು, ಇದನ್ನು ತಪ್ಪಿಸಲು ಯುವ ರೈತರೇ, ನಗರದ ಮನೆ ಮನೆಗೆ ತರಕಾರಿ ತಲುಪಿಸಲು ಪರವಾನಗಿ ನೀಡಿರುವ ಜತೆಗೆ ಪಾಸ್ ನೀಡುವಂತೆ ಕೇಳಿದ್ದಾರೆ.
1 ಕ್ವಿಂಟಲ್ ಬದನೆ ಉಚಿತ: ಮೂಲತಃ ಖಜ್ಜಿಡೋಣಿ ಗ್ರಾಮದ ಮಂಜುನಾಥ ವಾಸನದ, ಮನ್ನಿಕಟ್ಟಿ ಗ್ರಾಮದಲ್ಲೂ ಭೂಮಿ ಹೊಂದಿದ್ದು, ತಲಾ 2 ಎಕರೆ ಬದನೆ, ಟೊಮ್ಯಾಟೋ ಬೆಳೆದಿದ್ದು, ಸೋಮವಾರ ಒಂದೇ ದಿನ 25 ಟ್ರೇಗಳಲ್ಲಿ ಒಟ್ಟು 100 ಕೆ.ಜಿ. ಬದನೆಕಾಯಿ ಉಚಿತವಾಗಿ ಜನರಿಗೆ ತಲುಪಿಸಿದ್ದಾರೆ. ಮನ್ನಿಕಟ್ಟಿ, ಗುಂಡನಪಲೆÂ ಹಾಗೂ ಸಂಗಮ ಕ್ರಾಸ್ ಬಳಿ ಸೇವೆ ಸಲ್ಲಿಸುವ ಪೊಲೀಸರು ಸಹಿತ ವಿವಿಧ ಜನರಿಗೆ ಉಚಿತವಾಗಿ ಪೂರೈಸಿದ್ದಾರೆ. ಮಂಗಳವಾರದಿಂದ ಬಾಗಲಕೋಟೆ ನಗರದಲ್ಲೂ ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ತರಕಾರಿ ನೀಡಲು ಮುಂದಾಗಿದ್ದಾರೆ.
ವ್ಯಾಪಾರಸ್ಥರು ತರಕಾರಿಯ ಕೃತಕ ಅಭಾವ ಸೃಷ್ಟಿಸಿದ್ದಾರೆ. ರೈತರ ಹೊಲಕ್ಕೆ ಹೋಗಿ ಖರೀದಿಸಿ, ನಗರ ಪ್ರದೇಶದ ಜನರಿಗೆ ಹೆಚ್ಚಿನ ಬೆಲೆಗೆ ಕೊಡುತ್ತಿದ್ದಾರೆ. ಹೀಗಾಗಿ ನಾನು ಈಗಾಗಲೇ 1 ಕ್ವಿಂಟಲ್‌ನಷ್ಟು ಉಚಿತವಾಗಿ ಹಳ್ಳಿ ಜನರಿಗೆ ನೀಡಿದ್ದೇನೆ. ನಗರದ ಜನರಿಗೆ ಕಡಿಮೆ ಬೆಲೆಗೆ ಕೊಡಲು ಜಿಲ್ಲಾಧಿಕಾರಿಗಳು ಮೌಖೀಕವಾಗಿ ಪರವಾನಗಿ ನೀಡಿದ್ದು, ಪಾಸ್‌ಗಾಗಿ ಕಾಯುತ್ತಿದ್ದೇನೆ. ನಾಳೆ ಪಾಸ್ ನೀಡಿದ್ದಲ್ಲಿ ಜನರಿಗೆ ವ್ಯಾಪಾರಸ್ಥರು ಕೊಡುವ ಅರ್ಧ ಬೆಲೆಗೂ ಕಡಿಮೆ ದರಕ್ಕೆ ತರಕಾರಿ ಪೂರೈಕೆ ಮಾಡಲಾಗುವುದು. –
ಮಂಜುನಾಥ ವಾಸನದ, ಮನ್ನಿಕಟ್ಟಿಯ ಯುವ ರೈತ
-ವಿಶೇಷ ವರದಿ