Advertisement

ಮಗಳಿಗೆ ಪಾಲು: ಕಾನೂನಿನ ನವ ರೂಪ

12:33 AM Nov 04, 2020 | sudhir |

ನಾವೀಗ ಬದಲಾವಣೆಗಳ ಯುಗದಲ್ಲಿ ಇದ್ದೇವೆ. ಎಲ್ಲ ರಂಗಗಳಲ್ಲಿಯೂ ಬದಲಾವಣೆ ಇರುವಂತೆ ಕಾನೂ ನಿನಲ್ಲೂ ಆಗುತ್ತಿದೆ. ಹಿಂದೂಗಳ ವೈಯಕ್ತಿಕ ಕಾನೂನು ಸ್ತ್ರೀಪರವಾಗಿ ಬದಲಾಗುತ್ತಿದೆ. ಈ ಮೊದಲು ಹೇಗಿತ್ತು ಎಂದು ನೋಡೋಣ…
ರಾಜಕೀಯವಾಗಿ ನಾವು ಸ್ವತಂತ್ರರಾದರೂ ನಮ್ಮ ಕಾನೂನು ಮತ್ತು ಕೋರ್ಟಿನ ವ್ಯವಸ್ಥೆಯು ಬ್ರಿಟಿಷರ ಬಳುವಳಿ. ಅದೆಷ್ಟೋ ಕಾನೂನುಗಳು ಬ್ರಿಟಿಷರ ಕಾಲದಿಂದ ಬಂದವುಗಳು. ಹಿಂದೂಗಳ ವೈಯ ಕ್ತಿಕ ಕಾನೂನು ಇದರಿಂದ ಹೊರತಲ್ಲ. ಧರ್ಮಶಾಸ್ತ್ರಗಳ ಆಧಾರದಿಂದಲೂ ಆಚರಣೆಯ ಮತ್ತು ಪದ್ಧತಿಯ ಸಾಕ್ಷ್ಯಗಳ ಆಧಾರದಲ್ಲಿಯೂ ಬ್ರಿಟಿಷರ ಕಾಲದ ನ್ಯಾಯಾಂಗದ ತೀರ್ಮಾನದಂತೆ ಈ ಕಾನೂನು ರೂಪು ಗೊಂಡಿತು. ಸಾಮಾನ್ಯವಾಗಿ ಭಾರತದಲ್ಲಿ ಬಂಗಾ ಲವನ್ನು ಹೊರತುಪಡಿಸಿ ಇತರ ಎಲ್ಲಾ ಭಾಗಗಳಲ್ಲಿ ಹಿಂದೂಗಳಿಗೆ ಇರುವ ವೈಯಕ್ತಿಕ  ಕಾನೂನನ್ನು ಮಿತಾಕ್ಷರ ಕಾನೂನು ಎಂದು ತಿಳಿಯಲಾಗಿದೆ. ಬಂಗಾಲದಲ್ಲಿ ದಾಯಭಾಗ ಪದ್ಧತಿ ಇದೆ. ಮಿತಾ ಕ್ಷರದ ಪ್ರಕಾರ ಹಿಂದಿನ ತಲೆಮಾರಿನಿಂದ ಬಂದ ಆಸ್ತಿಯು ಕುಟುಂಬದ ಆಸ್ತಿ ಎಂದಾಗುತ್ತದೆ.

Advertisement

ಸಾಂಪ್ರದಾಯಿಕವಾಗಿ ಮೂಡಿಬಂದ ಈ ಕಾನೂನಿನಲ್ಲಿ ಮಗನಿಗೆ ಕುಟುಂಬದ ಆಸ್ತಿಯಲ್ಲಿ ಜನ್ಮಸಿದ್ಧ ಹಕ್ಕು ಇದೆ. ಸ್ವಯಾರ್ಜಿತದ ಆಸ್ತಿಗೂ ವಾರಸು ಹಕ್ಕು ಕೂಡಾ ಮಗನಿಗೆ ಸೀಮಿತವಾಗಿತ್ತು; ಮಗಳು ತಂದೆಯ ಆಸ್ತಿಗೆ ವಾರಸುದಾರಳಾಗಿರಲಿಲ್ಲ. ಅಂದಿನ ಕಾಲದಲ್ಲಿ ಸ್ವಯಾರ್ಜಿತ ಆಸ್ತಿಯೂ ಅಷ್ಟಾಗಿ ಇರುತ್ತಿರಲಿಲ್ಲ. ಕುಟುಂಬ ಪದ್ಧತಿ ಸಾಮಾನ್ಯವಾಗಿತ್ತು. ಧರ್ಮಶಾಸ್ತ್ರಗಳ ಪ್ರಕಾರ ನ್ಯಾಯಾಂಗವು ತೀರ್ಮಾನಿಸಿದಂತೆ, ಯಾರು ಪಿತೃವಿಗೆ ಪಿಂಡವನ್ನು ಹಾಕಲು ಹಕ್ಕುಳ್ಳವನೋ ಅವನೇ ವಾರಸುದಾರನೂ ಆಗಿದ್ದನು. ಹೀಗೆ ಹೆಣ್ಣು ಮಕ್ಕಳಿಗೆ ವಾರಿಸು ಹಕ್ಕು ಇಲ್ಲವಾಗಿತ್ತು.

ಕಾಯಿದೆಯಿಂದಾದ ಬದಲಾವಣೆ: ಈ ವೈಯ ಕ್ತಿಕ ಕಾನೂನಿನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಬ್ರಿಟಿಷರ ಕಾಲದಲ್ಲಿ ಆಗಿದ್ದ ಕಾಯಿದೆಗಳಿಂದಾಗಿ ಆಗಿತ್ತು. ಉದಾಹರಣೆಗೆ 1937ರಿಂದ ವಿಧವೆಗೆ ಆಸ್ತಿಯಲ್ಲಿ ಹಕ್ಕನ್ನು ನೀಡಲಾಯಿತು. ಆದರೆ ಮಹತ್ತರ ಬದಲಾವಣೆ ಆದುದು 1956ರ ಹಿಂದೂ ವಾರಸು ಕಾಯಿದೆ ಮತ್ತು ಇನ್ನಿತರ ಸಂಬಂಧಿತ ಕಾಯಿದೆಗಳು ಜಾರಿಗೆ ಬಂದಾಗಲೇ.
1956ರಿಂದ ಮಗಳಿಗೂ ವಾರಸು ಹಕ್ಕು ಬಂತು: ಒಬ್ಬ ಹಿಂದೂ ಗಂಡಸಿನ ಸ್ವಯಾರ್ಜಿತ ಆಸ್ತಿಗೆ ಆತನ ಹೆಂಡತಿ ಮತ್ತು ಮಗಳು ಮಗನಷ್ಟೆ ಸಮಾನ ಹಕ್ಕು ದಾರರು ಎಂಬುದು ಈ 1956ರ ಕಾಯಿದೆ ಮಾಡಿದ ಮಹತ್ತರ ಬದಲಾವಣೆ. ಅಲ್ಲದೆ ಪಿತ್ರಾರ್ಜಿತ ಆಸ್ತಿಯಲ್ಲೂ ಗತಿಸಿದ ಗಂಡಸಿನ ಅವಿಭಜಿತ ಹಕ್ಕಿಗೆ ಆತನ ಹೆಂಡತಿ ಮತ್ತು ಮಗಳನ್ನು ಮಗನೊಂದಿಗೆ ಸಮಾನ ಹಕ್ಕಿನ ವಾರಸುದಾರರನ್ನಾಗಿ ಮಾಡ ಲಾಯಿತು. ಉದಾಹರಣೆಗೆ ಓರ್ವ ಹಿಂದೂ ಗಂಡಸು ಮತ್ತು ಅವನಿಗೆ ಒಬ್ಬ ಮಗ ಇದ್ದರೆ, ಆ ಗಂಡಸಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಮಗನಿಗೆ ಸಿದ್ಧಿಸಿ ಆತನು ಪೂರ್ಣ ಹಕ್ಕುದಾರ ನಾಗುವ ಹಳೆಯ ಕಾನೂನಿನ ಬದಲಿಗೆ, ಆ ಗಂಡಸಿನ ಅರ್ಧಾಂಶ ಹಕ್ಕು ಅವನ ಹೆಂಡತಿ, ಮಗಳು ಮತ್ತು ಮಗನಿಗೆ ಸಮಾನವಾಗಿ ಸಿದ್ಧಿಸುವಂತೆ ಮಾಡಲಾಯಿತು.

ಪಿತ್ರಾರ್ಜಿತ ಆಸ್ತಿಯಲ್ಲಿ ಮಗನ ಹಕ್ಕು ಊರ್ಜಿತ: ಹಿಂದೂ ಮಿತಾಕ್ಷರ ಕುಟುಂಬದ ಪಿತ್ರಾರ್ಜಿತ ಆಸ್ತಿ ಯಲ್ಲಿ ತಂದೆಯು ಜೀವಂತ ಇರುವಾಗಲೇ ತನ್ನ ಭಾಗದ ಆಸ್ತಿಯನ್ನು ವಿಭಾಗಿಸಿ ಪಡೆಯುವ ಹಕ್ಕು ಮಗನಿಗೆ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. 1956ರ ಹಿಂದೂ ವಾರಸು ಕಾಯಿದೆ ಯಲ್ಲೂ ಈ ಹಕ್ಕನ್ನು ಕಾಪಾಡಲಾಗಿತ್ತು. ಆ ಕಾಲದಲ್ಲಿ ಮಗಳನ್ನು ಮಗನಷ್ಟೆ ಹಕ್ಕುದಾರಳಾಗಿಸುವಷ್ಟು ಕಾನೂನು ಪುರೋಗಾಮಿಯಾಗಲಿಲ್ಲ.

ಮಗಳನ್ನು ಮಗನಿಗೆ ಸಮಾನವಾಗಿಸಿದ ಹೊಸ ಕಾನೂನು: ನಮ್ಮ ಸಂವಿಧಾನದ ಕಣ್ಣಲ್ಲಿ ಸ್ತ್ರೀ- ಪುರುಷರು ಸಮಾನರು ಹಾಗೂ ಕಾನೂನಿನ ಭೇದವು ಸಲ್ಲದು. ಹೀಗಾಗಿ ಮಗಳನ್ನೂ ಸಹಾ ಮಗನಷ್ಟೇ ಹಕ್ಕುದಾರಳನ್ನಾಗಿಸಬೇಕು ಎಂಬುದು ಬೇಡಿಕೆ. ಕರ್ನಾಟಕದ ಮಟ್ಟದಲ್ಲಿ ಈ ಕಾನೂನು ಮದುವೆ ಯಾಗದ ಹೆಣ್ಣು ಮಕ್ಕಳಿಗೆ ಸೀಮಿತವಾಗಿ 1994ರಿಂದ ಜಾರಿಯಲ್ಲಿತ್ತು. ಆದರೆ ಕೇಂದ್ರ ಸರಕಾರವು 2005 ರಿಂದ ಜಾರಿ ಮಾಡಿದ ಕಾನೂನು ಇಂತಹ ಯಾವುದೇ ನಿರ್ಬಂಧ ಇಲ್ಲದೆ ಎಲ್ಲ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಷ್ಟೆ ಹಕ್ಕುದಾರರನ್ನಾಗಿಸಿತು.

Advertisement

ಸ್ವಯಾರ್ಜಿತದ ಆಸ್ತಿಗೆ ಮೊದಲೇ ವಾರಸು ಹಕ್ಕು ನೀಡಿದ ಕಾರಣ, ಹೊಸ ಕಾನೂನು ಕುಟುಂಬದ ಆಸ್ತಿಗೆ ಸೀಮಿತವಾಗಿದೆ. ಕುಟುಂಬದ ಆಸ್ತಿಯಲ್ಲಿ ಅಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಈಗ ಮಗಳೂ ಮದುವೆ ಆದ ಅಗದ ಭೇದ ಇಲ್ಲದೆ- ಮಗನಷ್ಟೆ ಜನ್ಮಸಿದ್ಧ ಹಕ್ಕುದಾರಳಾಗಿದ್ದಾಳೆ.

1956ರ ಹಿಂದೂ ವಾರಸು ಕಾಯಿದೆಯಲ್ಲಿ ಇದ್ದ 6ನೇ ಸೆಕ್ಷನನ್ನು ತೆಗೆದು ಹಾಕಿ, ಮಗಳಿಗೂ ಜನ್ಮಸಿದ್ಧ ಹಕ್ಕನ್ನು ನೀಡುವ ಬದಲಾವಣೆಯನ್ನು ಈ ತಿದ್ದುಪಡಿ ಯಲ್ಲಿ ಮಾಡಲಾಗಿದೆ. ಉದಾಹರಣೆಗೆ, ಪಿತ್ರಾರ್ಜಿತ ಆಸ್ತಿಹೊಂದಿರುವ ತಂದೆಗೆ ಒಬ್ಬ ಮಗ ಮತ್ತು ಓರ್ವ ಮಗಳಿದ್ದರೆ, ಮೊದಲಿನಂತೆ ಅರ್ಧ ಹಕ್ಕು ತಂದೆಗೆ ಇರುವ ಬದಲಿಗೆ ಈಗ ಮೂರನೆ- ಒಂದು ಇರುವುದು. ತಂದೆ ಜೀವಂತ ಇರುವಾಗಲೇ ಪಿತ್ರಾ ರ್ಜಿತ ಆಸ್ತಿಯಲ್ಲಿ ಮಗನಂತೆಯೇ ಮಗಳೂ ಸಹಾ ವಿಭಾಗವನ್ನು ಕೋರಬಹುದು.

ಚರ್ಚಾಸ್ಪದ ವಿಷಯ: ಯಾವುದೇ ಹೊಸ ಕಾನೂನು ಜಾರಿಯಾದಾಗ ಆ ಕಾನೂನಿನ ಬಗ್ಗೆ ದಾವೆಗಳಲ್ಲಿ ಬರುವ ಪ್ರಶ್ನೆಗಳನ್ನು ನ್ಯಾಯಾಂಗದ ತೀರ್ಮಾನಕ್ಕೆ ಒರೆ ಒಡ್ಡುವುದು ಸರ್ವೇ ಸಾಮಾನ್ಯ. 6ನೆ ಸೆಕ್ಷನ್‌ ಇದರಿಂದ ಹೊರತಾಗಲಿಲ್ಲ. ಈ ಕಾನೂನು ಜಾರಿಗೆ ಬರುವ ಮೊದಲು ಹುಟ್ಟಿದ ಹೆಣ್ಣು ಮಕ್ಕಳಿಗೆ ಇದು ಲಗಾವು ಆಗುವುದೆ? ಕಾನೂನು ಬರುವ ಮೊದಲೇ ಮದುವೆ ಆಗಿ ಹೋದವರಿಗೆ ಇದು ಲಗಾವು ಆಗುವುದೇ?

1956ರ ಕಾನೂನು ಜಾರಿಯಾಗಿ ತಂದೆ ಗತಿಸಿ ಒಮ್ಮೆ ವಾರಸು ಹಕ್ಕು ದೊರಕಿದ ಮಗಳು ತಂದೆಯ ಆಸ್ತಿಯನ್ನು ಪಿತ್ರಾರ್ಜಿತ ಎಂದು ಪರಿಗಣಿಸಿ ಗಂಡಿನಷ್ಟೇ ಜನ್ಮಸಿದ್ಧ ಹಕ್ಕು ಸಿಗಬೇಕು ಎಂದು ವಾದಿಸಬಹುದೇ? ಹೀಗೆ ಹಲವು ಆಯಾಮ ಗಳಲ್ಲಿ ವಾದ-ವಿವಾದಗಳು ರೂಪುಗೊಂಡವು.

ನ್ಯಾಯ ನಿರ್ಣಯಗಳ ವರಸೆ: ಆರಂಭದಲ್ಲಿ 2016ರಲ್ಲಿ ಬಂದ ಪ್ರಕಾಶ್‌ ವಿ. ಪುಲವತಿ ತೀರ್ಮಾನ ದಲ್ಲಿ ಸುಪ್ರೀಂ ಕೋರ್ಟಿನವರು ತಿದ್ದುಪಡಿಯಾದ ಕಾನೂನನ್ನು ಅನುಸರಿಸಬೇಕಾದರೆ ತಂದೆ ಮತ್ತು ಮಗಳು ಇಬ್ಬರೂ ತಿದ್ದುಪಡಿಯು ಜಾರಿಯಾದ ದಿನಾಂಕದಂದು (09-09-2005) ಜೀವಿಸಿರಬೇಕು ಎಂಬುದಾಗಿ ತೀರ್ಮಾನಿಸಿದರು. ಈ ಪ್ರಕರಣದಲ್ಲಿ ತಂದೆಯು 1988ರಲ್ಲಿ ಗತಿಸಿದ್ದರು. ಮಗಳು ಪುಲವತಿಯು 1992ರಲ್ಲಿ ಪಾಲಿನ ದಾವೆಯನ್ನು ಮಾಡಿದ್ದಳು. ಆದ ಕಾರಣ ತಿದ್ದುಪಡಿಯ ಕಾನೂನು ಆಕೆಗೆ ಲಭ್ಯವಾಗದು ಎಂದು ತಿರ್ಮಾನವಾಯಿತು.

2018ರಲ್ಲಿ ದಾನಮ್ಮ ವಿ. ಅಮರ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನವರು ಇನ್ನೊಮ್ಮೆ ಈ ಸಮಸ್ಯೆ ಯನ್ನು ತೀರ್ಮಾನಿಸಬೇಕಾಯಿತು. 2001ರಲ್ಲಿ ತಂದೆ ತೀರಿ ಹೋದ ಕಾರಣ, 2002ರಲ್ಲಿ ಆದ ಪಾಲಿನ ದಾವೆಯಲ್ಲಿ 2005ರಲ್ಲಿ ಜಾರಿಯಾದ ಕಾನೂನಿನ ಪ್ರಕಾರ ಹೆಣ್ಣು ಮ ಕ್ಕ ಳಿ ಗೆ ಮಗನಷ್ಟೆ ಹಕ್ಕು ಸಿದ್ಧಿಸ ಬಹುದೇ ಎಂಬುದು ಇದರಲ್ಲಿ ಉದ್ಭವಿಸಿದ ವಾದ. ತಂದೆ ಗತಿಸಿದ ತಾರೀಖೀಗೆ ಮಹತ್ವ ಇಲ್ಲ ಎಂದೂ 2005ರಲ್ಲಿ ಜೀವಂತ ಇರುವ ಮಗಳು ಮಗನಷ್ಟೆ ಹಕ್ಕುದಾರಳು ಎಂದೂ ಈ ಪ್ರಕರಣದಲ್ಲಿ ತೀರ್ಮಾನ ಆಯಿತು.

ತೆರೆ ಎಳೆಯುವ ತೀರ್ಪು: ಇಂತಹ ಚರ್ಚೆಯ ವಿಷಯ ಗಳು ಅಡಕವಾಗಿರುವ ತುಂಬಾ ಪ್ರಕರಣ ಗಳು ಸುಪ್ರೀಂ ಕೋರ್ಟಿನಲ್ಲಿ ಇದ್ದ ಕಾರಣ ಹಾಗೂ ಈ ಮೇಲೆ ಹೇಳಿದ ತೀರ್ಮಾನಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಮೂವರು ನ್ಯಾಯಾಧೀಶರನ್ನು ಒಳ ಗೊಂಡ (ನ್ಯಾ| ಅರುಣ್‌ ಮಿಶ್ರಾ, ಎಸ್‌ ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌.ಶಾ) ವಿಸ್ತೃತ ಪೀಠದ ತಿರ್ಮಾನಕ್ಕೆ ಒಳಪಡಿಸಲಾಯಿತು. 2020ರಲ್ಲಿ ಈ ಪೀಠದವರು ನೀಡಿದ ವಿನೀತ ಶರ್ಮ ವಿ. ರಾಕೇಶ್‌ ಶರ್ಮ ಎಂಬ ತೀರ್ಮಾನವು ಈ ವಿಚಾರದಲ್ಲಿ ಆರಂಭದಲ್ಲಿ ಇದ್ದ ಗೊಂದಲಗಳನ್ನೆಲ್ಲ ನಿವಾರಿಸಿ ಹೊಸ ಕಾನೂನಿನ ಪ್ರಕಾರ ಲಭಿಸಿದ ಹೆಣ್ಣು ಮಕ್ಕಳ ಜನ್ಮಸಿದ್ಧ ಹಕ್ಕನ್ನು ಭದ್ರಪಡಿಸಿದೆ ಎನ್ನಬಹುದು.

09-09-2005ರಿಂದ ಕಾನೂನು ಜಾರಿಯಾದರೂ ಮಗಳಿಗೆ ಮಗನಷ್ಟೆ ಹಕ್ಕು ಇರುತ್ತದೆಂತಲೂ, ಮಗಳಿಗೆ ಹಕ್ಕು ಸಿದ್ಧಿಸಲು ಆ ದಿನಾಂಕದವರೆಗೆ ತಂದೆ ಜೀವಂತ ಇರಬೇಕಾಗಿಲ್ಲವೆಂತಲೂ ತಂದೆ ಗತಿಸಿದಾಗ ಉಂಟಾ ಗುವ ಕಾನೂನಿನ ಕಲ್ಪನೆಯ ವಿಭಾಗವು ನೈಜ ವಿಭಾಗವಲ್ಲದ ಕಾರಣ ಕುಟುಂಬವು ಮುಂದುವರಿ ಯು ತ್ತದೆಂದೂ, ಬಾಯ್ದರೆ ವಿಭಾಗವಾಗಿದೆ ಎಂಬುದಾಗಿ ವಾದಿಸಿ ಮಗಳ ಹಕ್ಕನ್ನು ಹರಣ ಮಾಡಲು ಸಾಧ್ಯವಿಲ್ಲವೆಂತಲೂ ಅಂತಿಮವಾಗಿ ತೀರ್ಮಾನವಾಗಿ ಮೊದಲಿದ್ದ ಗೊಂದಲಕ್ಕೆ ತೆರೆ ಬಿತ್ತು. ಹೀಗಾಗಿ ಈಗ ಮಗಳೂ ಸಹಾ ಪಿತ್ರಾರ್ಜಿತ ಆಸ್ತಿಯಲ್ಲಿ ಮಗನಷ್ಟೆ ಹಕ್ಕುದಾರಳಾಗುತ್ತಾಳೆ. ಈಗ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಪಾಲು ಕೊಡಬೇಕು.

ಯಂ.ವಿ ಶಂಕರ ಭಟ್‌, ನ್ಯಾಯವಾದಿ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next