ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮಂಗಳವಾರ (ಡಿಸೆಂಬರ್ 07) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಭರ್ಜರಿ 887 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ
ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಕ್ಷಿಪ್ರವಾಗಿ ಹರಡಬಲ್ಲದು, ಆದರೆ ಈ ಹಿಂದಿನ ಡೆಲ್ಟಾ ಸೋಂಕಿಗಿಂತ ಹೆಚ್ಚು ಅಪಾಯಕಾರಿಯಲ್ಲ ಎಂಬ ತಜ್ಞರ ಹೇಳಿಕೆಯ ನಂತರ ಜಾಗತಿಕ ಷೇರುಮಾರುಕಟ್ಟೆಯಲ್ಲಿ ವಹಿವಾಟು ವೇಗ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 886.51 ಅಂಕಗಳಷ್ಟು ಏರಿಕೆಯಾಗಿದ್ದು, 57,633.65 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 264.45 ಅಂಕ ಜಿಗಿತ ಕಂಡಿದ್ದು, 17,176.70 ಅಂಕಗಳ ಗಡಿ ತಲುಪಿದೆ.
ಟಾಟಾ ಸ್ಟೀಲ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಎಸ್ ಬಿಐ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಶೇ.4ರಷ್ಟು ಲಾಭಗಳಿಸಿದೆ. ಮತ್ತೊಂದೆಡೆ ಏಷ್ಯನ್ ಪೇಂಟ್ಸ್ ಷೇರು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 444.17 ಅಂಕಗಳಷ್ಟು ಏರಿಕೆ ಕಂಡಿದ್ದು, 57,191.31 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 131.60 ಅಂಕ ಏರಿಕೆಯೊಂದಿಗೆ 17,043.85 ಅಂಕಗಳ ಗಡಿ ತಲುಪಿತ್ತು.