ಮುಂಬಯಿ: ಕುಸಿತದ ವಹಿವಾಟು ನಡೆಸುತ್ತಿದ್ದ ಮುಂಬಯಿ ಷೇರುಪೇಟೆ ಶುಕ್ರವಾರ (ಏಪ್ರಿಲ್ 08) ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ ಪರಿಣಾಮ 400ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಹಿಂದಿ ಭಾಷೆಯ ಗುಲಾಮಗಿರಿ ಸಾಧ್ಯವಿಲ್ಲ: ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 412.23 ಅಂಕಗಳಷ್ಟು ಏರಿಕೆಯೊಂದಿಗೆ 59,447.18 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ನಿಫ್ಟಿ ಕೂಡಾ 144.80 ಅಂಕ ಏರಿಕೆಯಾಗಿದ್ದು, 17,784.35 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಐಟಿಸಿ, ಡಾ.ರೆಡ್ಡೀಸ್ ಲ್ಯಾಬೋರೇಟರಿ, ಮಹೀಂದ್ರ ಆ್ಯಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಟೆಕ್ ಮಹೀಂದ್ರ, ಮಾರುತಿ, ಎನ್ ಟಿಪಿಸಿ, ಎಚ್ ಸಿಎಲ್ ಟೆಕ್ನಾಲಜೀಸ್, ಸನ್ ಫಾರ್ಮಾ, ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ.
ರಷ್ಯಾ, ಉಕ್ರೇನ್ ನಡುವಿನ ಯುದ್ಧದಿಂದಾಗಿ ಹಣದುಬ್ಬರ ಏರಿಕೆಯಾಗುತ್ತಿದ್ದು, ಆರ್ಥಿಕ ಪ್ರಗತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಆರ್ ಬಿಐನ ಹಣಕಾಸು ನೀತಿ ಮಂಡಳಿ ಸತತ 11ನೇ ಬಾರಿಗೆ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಾಗಿ ತಿಳಿಸಿತ್ತು.