ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ನೀರಸ ವಹಿವಾಟು ಹಾಗೂ ರಷ್ಯಾ, ಉಕ್ರೇನ್ ನಡುವಿನ ಯುದ್ಧ ಮುಂದುವರಿದ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಭಾರೀ ಪತನ ಕಂಡಿದ್ದು, 1,172.19 ಅಂಕಗಳ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 22: ಉತ್ತಮ ಕ್ಯಾಮರಾ, ಆಕರ್ಷಕ ಪರದೆ, ಅತ್ಯುತ್ತಮ ವಿನ್ಯಾಸ
1,000ಕ್ಕೂ ಅಧಿಕ ಅಂಕಗಳಷ್ಟು ಇಳಿಕೆ ಕಂಡ ಪರಿಣಾಮ ಷೇರು ಹೂಡಿಕೆದಾರರಿಗೆ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,172.19 ಅಂಕ ಇಳಿಕೆಯಾಗಿದ್ದು, 57,166.74 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಷೇರುಪೇಟೆಯ ಮಧ್ಯಂತರ ವಹಿವಾಟಿನಲ್ಲಿ 1,496.54 ಅಂಕ ಕುಸಿತ ಕಂಡಿದ್ದು, 56,842.39 ಅಂಕಗಳಲ್ಲಿ ವಹಿವಾಟು ನಡೆದಿತ್ತು.
ಎಸ್ ಎಸ್ ಇ ನಿಫ್ಟಿ 302 ಅಂಕಗಳಷ್ಟು ಕುಸಿತಗೊಂಡಿದ್ದು, 17, 173.65 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ. ಇನ್ಫೋಸಿಸ್, ಎಚ್ ಡಿಎಫ್ ಸಿ, ಟೆಕ್ ಮಹೀಂದ್ರ, ವಿಪ್ರೋ ಮತ್ತು ಟಿಸಿಎಸ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಎನ್ ಟಿಪಿಸಿ, ಟಾಟಾ ಸ್ಟೀಲ್, ಮಾರುತಿ, ಟೈಟಾನ್, ನೆಸ್ಲೆ, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಲಾಭಗಳಿಸಿದೆ. ಇಂದು ಇನ್ಫೋಸಿಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಭರ್ಜರಿ ನಷ್ಟ ಕಂಡಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.