ಮುಂಬಯಿ: ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಶುಕ್ರವಾರ (ಸೆಪ್ಟೆಂಬರ್ 03) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 250ಕ್ಕೂ ಅಧಿಕ ಅಂಕ ಏರಿಕೆಯೊಂದಿಗೆ ಇದೇ ಮೊದಲ ಬಾರಿಗೆ 58,000 ಅಂಕಗಳ ವಹಿವಾಟಿನ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಇದನ್ನೂ ಓದಿ:ಚಂಡಮಾರುತಕ್ಕೆ ಮುಳುಗಿದ ನ್ಯೂಯಾರ್ಕ್: 44 ಮಂದಿ ಸಾವು
ಅದೇ ರೀತಿ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಎನ್ ಎಸ್ ಇ ನಿಫ್ಟಿ ಕೂಡಾ 17,300 ಅಂಕಗಳನ್ನು ದಾಟಿ ವಹಿವಾಟು ನಡೆಸಿದೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 250.75 ಅಂಕ ಏರಿಕೆಯೊಂದಿಗೆ 58,103.23 ಅಂಕಗಳಲ್ಲಿ ದಾಖಲೆ ಮಟ್ಟದ ವಹಿವಾಟು ನಡೆಸಿದೆ.
ಎನ್ ಎಸ್ ಇ ನಿಫ್ಟಿ 67.65 ಅಂಕ ಏರಿಕೆಯೊಂದಿಗೆ 17,301.80 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಬ್ಯಾಂಕ್, ಎಸ್ ಬಿಐ, ಎನ್ ಟಿಪಿಸಿ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇ.2ರಷ್ಟು ಲಾಭಗಳಿಸಿದೆ.
ಎಚ್ ಸಿಎಲ್ ಟೆಕ್, ಎಚ್ ಯುಎಲ್, ಮಹೀಂದ್ರ ಆ್ಯಂಡ್ ಮಹೀಂದ್ರ, ಟೆಕ್ ಮಹೀಂದ್ರ ಮತ್ತು ಟಿಸಿಎಸ್ ಷೇರುಗಳು ನಷ್ಟ ಕಂಡಿದೆ. ಗುರುವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 514.33 ಅಂಕ ಏರಿಕೆಯೊಂದಿಗೆ 57,852.54 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು.