ಸಾಗರ: ತಾಲೂಕಿನ ಮಲಂದೂರು ಗ್ರಾಮದ ಸರ್ವೇ ನಂ. 157ರಲ್ಲಿ ಏಳು ಜನ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಲಾಗಿದ್ದ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಸಂತ್ರಸ್ತರಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ನೀಡಿದ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಅಮಾನವೀಯ ಕೃತ್ಯವಾಗಿದೆ. ಸ್ಥಳೀಯ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾಗಿದ್ದವರೇ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿದ್ದ 36 ಎಕರೆ ಜಮೀನು ಕಬಳಿಸುವ ಪ್ರಯತ್ನ ನಡೆಸುತ್ತಿದ್ದರು. ಜಮೀನಿಗೆ ಸಂಬಂಧಪಟ್ಟಂತೆ ನಕಲಿ ದಾಖಲೆ ಸೃಷ್ಟಿಸಿ ಸಂತ್ರಸ್ತರ ಜಮೀನು ಲಪಟಾಯಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಈಗಾಗಲೇ ಶರಾವತಿ ಮುಳುಗಡೆ ಕುಟುಂಬದ 7 ಜನರಿಗೆ ಜಮೀನು ಸೇರಿದ್ದು ಎನ್ನುವುದಕ್ಕೆ ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದೆ. ಅರಣ್ಯಹಕ್ಕು ಕಾಯ್ದೆಯಲ್ಲಿ ಸಹ ಜಮೀನು ಸಂತ್ರಸ್ತರದ್ದು ಎನ್ನುವ ಪುರಾವೆಗಳಿವೆ. ಆದರೆ ಈ ನಡುವೆ ನಕಲಿ ದಾಖಲೆ ಸೃಷ್ಟಿಸಿ ಬಡಜನರಿಗೆ ಅನ್ಯಾಯ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ತಕ್ಷಣ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಶರಾವತಿ ಸಂತ್ರಸ್ತ ಕುಟುಂಬಕ್ಕೆ ಮೀಸಲಿಟ್ಟ ೩೬ ಎಕರೆ ಜಮೀನು ಅವರಿಗೆ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು, ಮುರಳಿಧರ, ಎನ್.ಸಿ.ಗಂಗಾಧರ, ಲಕ್ಷ್ಮಣಪ್ಪ, ಗಣಪತಿ ಎಂ., ಪ್ರೇಮ ಕುಮಾರ್, ಸಂದೀಪ್, ನವೀನ್, ಲಲಿತಮ್ಮ, ತೀರ್ಥಪ್ಪ, ಅನಿಲ್, ಚನ್ನಪ್ಪ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: Sagara: ವಿವಾಹಿತ ಮಹಿಳೆಗೆ ಕಿರುಕುಳ; ಆರೋಪಿಗೆ 2 ವರ್ಷ ಜೈಲು ಶಿಕ್ಷೆ