Advertisement
ಬೃಹತ್ ಬೆಂಗಳೂರಲ್ಲಿ ಯಾರೆಲ್ಲ ಇದ್ದಾರೆ? ಗೌರವಾನ್ವಿತ ರಾಜ್ಯಪಾಲರು, ಹೈಕೋರ್ಟ್ ನ್ಯಾಯಾಧೀಶರು, ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು, ತಜ್ಞರು, ವಿಜಾnನಿಗಳೆಲ್ಲರ ನೆಲೆ ಈ ಊರು. ಇಲ್ಲಿ, ದೇಶ ವಿದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಆಸ್ಪತ್ರೆಗಳಿವೆ. ಕಾಂಕ್ರೀಟ್ ಕಾಡಿನ ಸಿಲಿಕಾನ್ ಸಿಟಿಯಲ್ಲಿ ಕೆರೆಗಳಿಗೆ ಬೆಂಕಿ ಬೀಳುವುದು ಹಳೆಯ ಕಾಯಿಲೆ. ಅಂತರ್ಜಲ ಕುಸಿತ, ಕೆರೆನಾಶ, ಜಲಮಾಲಿನ್ಯಕ್ಕೆ ಖ್ಯಾತವಾದ ಈ ನಗರ, ಅರ್ಧ ತಾಸು ಮಳೆ ಬಂದರೆ ಪ್ರವಾಹದಲ್ಲಿ ಅಯ್ಯೋ! ಎಂದು ಅಳುತ್ತದೆ. ಅರಣ್ಯ ಇಲಾಖೆ ಕೇಂದ್ರ ಕಚೇರಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ….ಹೀಗೆ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕಾದ ತರಹೇವಾರಿ ಅಧಿಕಾರ ಕೇಂದ್ರಗಳ ಬೇರು ಇಲ್ಲಿದೆ. ನೆಲಜಲ ಸಂರಕ್ಷಿಸುವ ಕಾನೂನು ಹುಟ್ಟುವುದನ್ನು, ಸಾಯುವುದನ್ನು ಇಲ್ಲಿ ನಿತ್ಯ ನೋಡಬಹುದು. ಕೆರೆ, ಕಾಡು, ಗೋಮಾಳ, ಕಾಲುವೆಗಳನ್ನು ನುಂಗಿದ ನೆಲೆಯಲ್ಲಿ ವಾರ್ಷಿಕ ಒಂದು ಸಾವಿರ ಮಿಲಿ ಲೀಟರ್‌ಗೂ ಅಧಿಕ ಮಳೆ ಸುರಿಯುತ್ತದೆ. ಉದ್ಯಾನ ನಗರದ ಕೊಳೆ ಹೊತ್ತು ಸುಮಾರು 40-45 ಟಿಎಮ್‌ಸಿ ನೀರು ಚರಂಡಿ, ರಾಜಾಕಾಲುವೆ ಮೂಲಕ ವೃಷಭಾವತಿ ಸೇರಿದಂತೆ ಅಕ್ಕಪಕ್ಕದ ಹಳ್ಳಕೊಳ್ಳಗಳಲ್ಲಿ ನೊರೆ ನೆರೆಯಾಗುತ್ತದೆ. ಸಮಸ್ಯೆಗಳ ಹಳೆಯ ದಪ್ತಾರು ತೆಗೆದು ಪಟ್ಟಿ ಮಾಡುತ್ತ ಕುಳಿತರೆ ಬೆಂಗಳೂರಲ್ಲಿ ಯಾರೆಲ್ಲ ಗಣ್ಯರು ಹೇಗಿದ್ದಾರೆಂಬ ಪ್ರಶ್ನೆ ಪುನಃ ಕಾಡುತ್ತದೆ.
Related Articles
Advertisement
ಲಿಂಗನಮಕ್ಕಿ ವಿದ್ಯುತ್ ಯೋಜನೆಗೆ ನಿರ್ಮಿಸಿದ ಅಣೆಕಟ್ಟೆಯಿಂದ ಕುಡಿಯಲು ನೀರೆತ್ತಿದರೆ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ. ಆದರೆ ನಾಡಿನ ಜನರ ದಿಕ್ಕು ತಪ್ಪಿಸಲು ಈಗಾಗಲೇ ಕೆಪಿಸಿಯ ನಿವೃತ್ತ ಅಧಿಕಾರಿಗಳು ಸಜಾjಗಿದ್ದಾರೆ. ಮುಂದಿನ 2022ರ ವೇಳೆಗೆ ರಾಜ್ಯದಲ್ಲಿ ಒಂದು ಸಾವಿರ ಮೆಗಾ ವ್ಯಾಟ್ ಹೆಚ್ಚುವರಿ ಉತ್ಪಾದನೆಯಾಗಲಿದೆ. ಲಿಂಗನಮಕ್ಕಿಯ ಕೊರತೆಯಿಂದ ರಾಜ್ಯಕ್ಕೆ ಕತ್ತಲು ಆವರಿಸುವುದಿಲ್ಲ ಎಂದಿದ್ದಾರೆ. ನೀರು, ಕೃಷಿಗೆ ಬಳಕೆಯಾಗುವುದರಿಂದ ಬಯಲು ಸೀಮೆಯಲ್ಲಿ ಕೃಷಿ ವಿದ್ಯುತ್ ಬಳಕೆಗೆ ಖರ್ಚಾಗುವ ಹಣ, ವಿದ್ಯುತ್ ಉಳಿತಾಯವಾಗುತ್ತದೆಂಬ ಲೆಕ್ಕವಿದೆ. ಆದರೆ ಲಿಂಗನಮಕ್ಕಿ ಜಲಾಶಯದ ಆಸುಪಾಸಿನ ಪರಿಸ್ಥಿತಿ ಬಿಗಡಾಯಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ತೀವ್ರ ಜಲಕ್ಷಾಮ ಅನುಭವಿಸುತ್ತಿದೆ. ಈಗ ಬೆಂಗಳೂರಿಗಿಂತ ಕಡಿಮೆ ಮಳೆ ಸುರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಪ್ರದೇಶಗಳಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕೆರೆಕಟ್ಟೆಗಳು ಬರಿದಾಗಿವೆ. ಅರೆಮಲೆನಾಡಿನ ಸೆರಗಿನಲ್ಲಿ 2016-17 ರಲ್ಲಿ 400 ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯುವ ಯಂತ್ರಗಳು ಬೇಸಿಗೆಯಲ್ಲಿ ಸಾವಿರಾರು ಬಾವಿಗಳನ್ನು ಕೊರೆದಿವೆ. ಮಳೆ ಕೊರತೆ, ಅಂತರ್ಜಲ ಕುಸಿತದಿಂದ ನದಿ ಕಣಿವೆಯ ಆಸುಪಾಸಿನ ಹಳ್ಳಿಗಳು ಕಂಗಾಲಾಗಿವೆ. ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಜನಿಸಿ 136 ಕಿಲೋ ಮೀಟರ್ ಹರಿಯುವ ಶರಾವತಿಯನ್ನೇ ನಂಬಿ ಘಟ್ಟ, ಕರಾವಳಿಯ ಜನಜೀವನಸಾಗಿದೆ. ಜಲವಿದ್ಯುತ್ ಯೋಜನೆಯ ಮುಳುಗಡೆಯ ಪರಿಣಾಮ ಹಾಗೂ ಅರಣ್ಯ ಸಂರಕ್ಷಣೆಯ ಬಿಗಿ ಕಾನೂನು ಅನುಭವಿಸುತ್ತಿರುವ ಮಲೆನಾಡು ಇನ್ನೆಷ್ಟು ವರ್ಷ ತ್ಯಾಗ ಮಾಡಬೇಕೆಂಬ ಮೂಲ ಪ್ರಶ್ನೆ ಇದೆ.
ನದಿ ಇಲ್ಲದೆಡೆ ಬೆಳೆದ ಬೆಂಗಳೂರು, ಇಷ್ಟೊಂದು ಅಗಾಧ ಜನಸಂಖ್ಯೆಯನ್ನು ಪೋಷಿಸುತ್ತಿರುವುದು ಅಚ್ಚರಿಯೆನಿಸುತ್ತಿದೆ. ಕ್ರಿ. ಶ. 1896ರಲ್ಲಿ ಬೆಂಗಳೂರಿನ ಜನಸಂಖ್ಯೆ 1.8 ಲಕ್ಷವಿದ್ದಾಗ 18 ಕಿ.ಲೋ ಮೀಟರ್ ದೂರದ ಹೆಸರಘಟ್ಟ ಕೆರೆಯಿಂದ ಮಲ್ಲೇಶ್ವರಕ್ಕೆ ನೀರು ಬಂದಿದೆ. ಇದಕ್ಕೂ ಪೂರ್ವದಲ್ಲಿ ಧರ್ಮಾಂಬುದಿ, ಸಂಪಂಗಿ, ಹಲಸೂರು ಕೆರೆಯ ನೀರು ನೆರವಾಗಿದೆ.
ಜನಸಂಖ್ಯೆ ಏರಿದಂತೆ ಕ್ರಿ.ಶ. 1933-54 ರ ಸಮಯದಲ್ಲಿ 28 ಕಿ.ಲೋ ಮೀಟರ್ ದೂರದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ನಂಬಿ ಈ ನಗರ ಬದುಕಿದೆ. ಕ್ರಿ.ಶ. 1974ರಲ್ಲಿ 100 ಕಿಲೋ ಮೀಟರ್ ದೂರದ ಕಾವೇರಿ ಪ್ರಥಮ ಹಂತದಿಂದ ಶುರುವಾಗಿ ಕ್ರಿ.ಶ. 2002ರ ನಾಲ್ಕು ಹಂತಗಳಲ್ಲಿ ಜಲ ದಾಹಕ್ಕೆ ತಕ್ಕಂತೆ ಯೋಜನೆ ವಿಸ್ತರಿಸಿದೆ. ವಿಶೇಷವೆಂದರೆ, ದೂರ ದೂರದಿಂದ ನೀರು ಬರಲು ಆರಂಭಿಸಿದಂತೆ ಕೆರೆ ಕಳೆಯುವ ಆಟ ಸಾಗಿದೆ. ಕ್ರಿ.ಶ. 1980ರ ಸುಮಾರಿಗೆ 262 ಕೆರೆಗಳ ಬೀಡಾಗಿದ್ದ ಬೆಂಗಳೂರಲ್ಲಿ ಈಗ 127 ಕೆರೆ ಮಾತ್ರ ಇದೆ. ಇವುಗಳಲ್ಲಿಯೂ 81 ಕೆರೆಗಳಲ್ಲಿ ಮಾತ್ರ ನೀರಿದೆ. ಕಸ ಚೆಲ್ಲುವುದು, ಕೊಳಚೆ ನೀರು ಬಿಡುವುದು, ಕಾಲುವೆ ಅತಿಕ್ರಮಿಸುತ್ತ ನಗರದ ಅಂತರ್ಜಲ ಹಾಳು ಮಾಡುವ ಕಾರ್ಯ ನಡೆದಿದೆ. ಕಾವೇರಿ ನೀರಿಲ್ಲದೇ ಮಂಡ್ಯದ ಭತ್ತದ ಗದ್ದೆ ಒಣಗುತ್ತಿದ್ದರೆ, ಇತ್ತ ಬೆಂಗಳೂರಲ್ಲಿ ನೀರು ಪೋಲಾಗುತ್ತಿರುತ್ತದೆ. ಅತಿ ಹೆಚ್ಚು ನೀರು ಬಳಸುವುದು, ವ್ಯರ್ಥಮಾಡುವುದು ಘನತೆಯಾದಂತೆ ಕಾಣಿಸುತ್ತಿದೆ. ನೀರಿನ ಸಂಕಷ್ಟದಿಂದ ಜನಕ್ಕೆ ಪಾಠ ಕಲಿಸಲು ಕಾನೂನು ಬಿಗಿಯಾಗಬೇಕು. ನೀರನ್ನು ಭೂಮಿಗೆ ಇಂಗಿಸುವುದು, ಮಳೆ ನೀರು ಶೇಖರಿಸುವ ಕಾರ್ಯಗಳು ಜನಪ್ರಿಯವಾಗಬೇಕು. ತ್ಯಾಜ್ಯ ನೀರು ಶುದ್ಧೀಕರಿಸಿ ಬಳಸುವ ಕಾರ್ಯ ವೇಗ ಪಡೆಯಬೇಕು. ಕೆರೆಗಳನ್ನು ಸ್ವತ್ಛವಾಗಿಡುವುದು ಕರ್ತವ್ಯವೆಂಬ ನಾಗರಿಕ ಪ್ರಜ್ಞೆ, ಬಡಾವಣೆಯ ಜನಮನದಲ್ಲಿ ಮೂಡದಿದ್ದರೆ ಬೆಂಗಳೂರು ಜಲ ಭಾಗ್ಯ ಸಾಧ್ಯವಿಲ್ಲ. ಮೇಕೆದಾಟು ಯೋಜನೆ ಮೂಲಕ ಕುಡಿಯುವ ನೀರು ಪಡೆಯುವ ಅವಕಾಶವಿದೆಯಾದರೂ ಅಂತರ ರಾಜ್ಯ ಜಲವಿವಾದ ಇದ್ದೇ ಇದೆ.
ಪರಿಸರ ಕಾನೂನುಗಳ ಮಧ್ಯೆ ಬೃಹತ್ ಯೋಜನೆ ಜಾರಿಗೊಳಿಸುವುದು ಸುಲಭವಲ್ಲ. ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯದ ಪರಿಸರ ಪರಿಣಾಮಗಳ ಅಧ್ಯಯನ ಬೇಡವೆಂಬ ನೆಪದಲ್ಲಿ ಕಣ್ಮುಚ್ಚಿ ಹೆಜ್ಜೆ ಇಡಲಾಗದು. ಇವತ್ತು ಯಾರಿಗೂ ಯಾರ ಮೇಲೂ ವಿಶ್ವಾಸ ಉಳಿದಿಲ್ಲ. “ನೈಸ್’ ರಸ್ತೆಯ ನಾಟಕದಂತೆ, ಎತ್ತಿನಹೊಳೆಯ ಆಟದಂತೆ ಎಲ್ಲವೂ ಕಾಣಿಸುತ್ತಿದೆ. ಪ್ರಯೋಗಕ್ಕೆ ಎಸೆವ ಆಟ ಚಾಲೂ ಇದೆ. ತ್ಯಾಗರಾಜ್ ಸಮಿತಿ ಲಿಂಗನಮಕ್ಕಿ ನೀರಿಗೆ ಮೂಡಿಗೆರೆಯ ದಾರಿ ತೋರಿಸಿದಾಗಲೇ ಸೋತಿದೆ. ಇದರ ಬಳಿಕ ಇನ್ನೊಂದು ಖಾಸಗಿ ವರದಿ ಸರಕಾರದ ಕೈಯ್ಯಲ್ಲಿದೆ. ಅಘನಾಶಿನಿ-ಲಿಂಗನಮಕ್ಕಿ ಸೇರಿಸಿ 40 ಟಿಎಮ್‌ಸಿ ನೀರನ್ನು ಅಜ್ಜಂಪುರಕ್ಕೆ ತುಂಗಾ ಕಣಿವೆಯ ಮೂಲಕ ಒಯ್ಯುವ ಪರಿಕಲ್ಪನೆ ಇದೆ. ನಮ್ಮ ದಾರಿಗಳೆಲ್ಲ ಬೆಂಗಳೂರು ಸೇರುವಂತೆ ನದಿಗಳ ದಿಕ್ಕು ಬದಲಿಸುವ ದುಃಸ್ಸಾಹಸ ಸಾಗಿದೆ. ಸೀತೆಗೆ ಬಾಯಾರಿದಾಗ ಶ್ರೀರಾಮ ಬಿಟ್ಟ ಬಾಣದಿಂದ ಅಂಬುತೀರ್ಥದಲ್ಲಿ ಶರಾವತಿ ಜನನವಾಯಿತಂತೆ! ಈಗ ನೀರಾವರಿ ಸಮಿತಿಯ ಬಾಣಗಳು ಹೊರಟಿವೆ. ಅರಣ್ಯನಾಶದಿಂದ ತತ್ತರಿಸಿ ಶರಶಯೆÂಯಲ್ಲಿ ಮಲಗಿದ ಶರಾವತಿ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರು ನೀಡಬಲ್ಲಳೇ? ಪ್ರಶ್ನೆ ಉಳಿದಿದೆ.
ಶಿವಾನಂದ ಕಳವೆ