Advertisement

ಬೆಂಗಳೂರಿಗೆ ಶರಾವತಿ ನೀರು; ತೀರ ಪ್ರದೇಶ ಅಧೋಗತಿ

11:37 AM Jun 29, 2019 | Sriram |

ಹೊನ್ನಾವರ: ಶರಾವತಿಯಿಂದ ಬೆಂಗಳೂರಿಗೆ ನೀರು ಒಯ್ಯುವ ಯೋಜನೆಗೆ ಕೈ ಹಾಕಿದರೆ ವಿದ್ಯುತ್‌ ಉತ್ಪಾದನೆ ಕಡಿಮೆಯಾಗುತ್ತದೆ. ಲಿಂಗನಮಕ್ಕಿ ಪ್ರದೇಶ ಮತ್ತು ಶರಾವತಿ ಕೊಳ್ಳಕ್ಕೆ ನೀರಿನ ಬರ ಉಂಟಾಗುತ್ತದೆ.

Advertisement

ಜೋಗ ಜಲಪಾತ ನೋಡಿ ವಿಶ್ವೇಶ್ವರಯ್ಯನವರು ‘ವಾಟ್ ಎ ವೇಸ್ಟ್‌’ ಎಂದರಂತೆ. ಹಾಗೆಯೇ ಸರ್ಕಾರದ ಮಂತ್ರಿಗಳು ಸಮುದ್ರ ಸೇರಿ ವೇಸ್ಟ್‌ ಆಗುವ ನೀರನ್ನು ಒಯ್ಯುತ್ತೇವೆ ಅನ್ನುತ್ತಿದ್ದಾರೆ. ಆಗ ನೀರಿತ್ತು, ವಿಶ್ವೇಶ್ವರಯ್ಯನವರು ವಿದ್ಯುತ್‌ ಯೋಜನೆ ಆರಂಭಿಸಿದರು. ಈಗ ವಿದ್ಯುತ್‌ ಯೋಜನೆಗೇ ಸಾಕಷ್ಟು ನೀರಿಲ್ಲ, ಕುಡಿಯಲು ನೀರು ಒಯ್ದರೆ ವಿದ್ಯುತ್‌ ಇರಲ್ಲ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಜನ ವಿಶೇಷವಾಗಿ ಹೊನ್ನಾವರ ತಾಲೂಕಿನ ಜನ ಇದನ್ನು ಒಪ್ಪುವುದೇ ಇಲ್ಲ.

ವಾಸ್ತವ ಏನು?: ಲಿಂಗನಮಕ್ಕಿ ಡ್ಯಾಂ ನಿರ್ಮಾಣವಾದ ಮೇಲೆ ಕೇವಲ 6 ಬಾರಿ ಅಣೆಕಟ್ಟು ಪೂರ್ತಿ ತುಂಬಿದೆ. 2 ಬಾರಿ ಎಲ್ಲ ಗೇಟುಗಳನ್ನು ತೆರೆದು ನೀರು ಬಿಡಲಾಗಿದೆ. ಲಿಂಗನಮಕ್ಕಿ ಡ್ಯಾಂನಿಂದ ಹೊರ ಬಂದ ನೀರು ಜಲಪಾತದಲ್ಲಿ ಇಳಿದು ಟೇಲರೀಸ್‌ಗೆ ಬರುತ್ತದೆ. ನೀರನ್ನು ಹಿಡಿದಿಟ್ಟುಕೊಂಡು ವಿದ್ಯುತ್‌ ಉತ್ಪಾದನೆ ಮಾಡಿ ಗೇರಸೊಪ್ಪದಲ್ಲಿ ನೀರನ್ನು ಶರಾವತಿಗೆ ಬಿಡಲಾಗುತ್ತಿದೆ.

ಗೇರಸೊಪ್ಪಾದಿಂದ ಹೊನ್ನಾವರದವರೆಗಿನ 16 ಸಾವಿರ ಕುಟುಂಬಗಳ ಜಮೀನಿಗೆ ಈ ನೀರು ಬೇಕು. ಎಡ-ಬಲದ 5ಕಿ.ಮೀ. ವ್ಯಾಪ್ತಿಯ ಬಾವಿ, ಕೆರೆಗಳಿಗೆ ಅಂತರ್ಜಲವಾಗಿ ಬೇಕು. ತಾಲೂಕಿನ ಶೇ.30ರಷ್ಟು ಜನ ಶರಾವತಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಲಿಂಗನಮಕ್ಕಿ ಅಣೆಕಟ್ಟು ಪೂರ್ತಿ ತುಂಬಿದರೂ, ಒಂದು ಯೂನಿಟ್ ವಿದ್ಯುತ್‌ಗೆ ಕೇವಲ 3 ಪೈಸೆ ತಗುಲಿದರೂ ಈ ಅಗ್ಗದ ವಿದ್ಯುತನ್ನು 365 ದಿನ 24 ತಾಸು ಉತ್ಪಾದಿಸುವಷ್ಟು ನೀರು ಲಿಂಗನಮಕ್ಕಿಯಲ್ಲಿ ಸಂಗ್ರಹವಾಗುವುದಿಲ್ಲ.

ವಿದ್ಯುತ್‌ ಬೇಡಿಕೆ ನೋಡಿ ದಿನಕ್ಕೆ ನಾಲ್ಕಾರು ತಾಸು ಜನರೇಟರ್‌ ಚಾಲು ಇಟ್ಟು ಜಿಪುಣತನದಲ್ಲಿ ನೀರು ಖರ್ಚು ಮಾಡಿ ಕೆಪಿಸಿ ಮಳೆಗಾಲದ ಮಧ್ಯದವರೆಗೆ ವಿದ್ಯುತ್‌ ಉತ್ಪಾದಿಸುತ್ತದೆ. ಈ ವರ್ಷ ಕಳೆದ ವರ್ಷಕ್ಕಿಂತ ಲಿಂಗನಮಕ್ಕಿ ಜಲಮಟ್ಟ 20 ಅಡಿ ಕಡಿಮೆ ಇದೆ.

Advertisement

ಲಿಂಗನಮಕ್ಕಿ ಅಣೆಕಟ್ಟಿಗೆ ನೀರು ತುಂಬಿಸಲು ತಲಕಳಲೆ, ಸಾವೆಹಕ್ಕಲು ಮೊದಲಾದ 5 ಕಡೆ ಕಿರು ಅಣೆಕಟ್ಟು ನಿರ್ಮಿಸಿ ಲಿಂಗನಮಕ್ಕಿಗೆ ನೀರು ತರಲಾಗುತ್ತದೆ. ಅಣೆಕಟ್ಟಿನಲ್ಲಿ ಹೂಳು ತುಂಬಿರುವುದರಿಂದ ಪೂರ್ತಿ ನೀರು ತುಂಬಿದರೂ ಶೇ.60-70ರಷ್ಟು ಮಾತ್ರ ನೀರು ಸಂಗ್ರಹವಾಗುತ್ತದೆ. ಈ ಅಣೆಕಟ್ಟಿನ ನೀರನ್ನು ಬೆಂಗಳೂರಿಗೆ ಒಯ್ದರೆ ಅಗ್ಗದ ವಿದ್ಯುತ್‌ ಉತ್ಪಾದನೆ ಲಿಂಗನಮಕ್ಕಿಯಲ್ಲಿ ಕಡಿಮೆಯಾಗುತ್ತದೆ. ಲಿಂಗನಮಕ್ಕಿ ನೀರು ಜಲಪಾತದಲ್ಲಿ ಇಳಿದು, ಟೇಲರೀಸ್‌ ಅಣೆಕಟ್ಟಿಗೆ ಬರದಿದ್ದರೆ ಟೇಲರೀಸ್‌ ಜನರೇಟರ್‌ಗಳು ಸ್ಥಬ್ಧವಾಗುತ್ತವೆ. ವಿದ್ಯುತ್‌ ಖೋತಾ ಶಾಶ್ವತವಾಗುತ್ತದೆ. ಲಿಂಗನಮಕ್ಕಿ ಅಣೆಕಟ್ಟಿನ ಪರಿಸರದ ಜಲಮೂಲಗಳು ಒಣಗಿ ಹೋಗುತ್ತವೆ.

ನಾಯಕರು ಏನಂತಾರೆ?

ಈಗಾಗಲೇ ಶರಾವತಿ ನದಿಯೊಳಗೆ 15-20 ಕಿ.ಮೀ.ವರೆಗೆ ಉಪ್ಪು ನೀರು ಪ್ರವೇಶಿಸಿದೆ. ನೀರು ಕಡಿಮೆಯಾದರೆ ಗೇರಸೊಪ್ಪವರೆಗೆ ಉಪ್ಪು ನೀರು ಸರಿದರೆ ಎಡ-ಬಲ ದಂಡೆಯ ಸಾವಿರಾರು ಎಕರೆ ಭೂಮಿ ಬರಡಾಗುತ್ತದೆ. ಟೇಲರೀಸ್‌ ಅಣೆಕಟ್ಟಿನಿಂದ 35 ಕಿ.ಮೀ.ಹರಿದು ಹೊನ್ನಾವರಕ್ಕೆ ಬರುವಾಗ ಎಡ-ಬಲದ ಸಸ್ಯ ಸಮೃದ್ಧಿಗೆ ಶರಾವತಿ ಕಾರಣ. ಹೀಗಾಗಿ, ಶರಾವತಿ ಕೊಳ್ಳದ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಯೋಜನೆ ಕೈ ಬಿಡುವುದು ಉತ್ತಮ

ಶರಾವತಿ ನೀರಿನಿಂದ ಸಹಕಾರಿ ಪದ್ಧತಿಯಲ್ಲಿ ಡಾ| ಕುಸುಮಾ ಸೊರಬ ಪ್ರಥಮ ನೀರಾವರಿ ಯೋಜನೆ ಆರಂಭಿಸಿದ್ದರು. ಅದು ಯಶಸ್ವಿಯಾಗಿ ನಡೆದಿದೆ. ದೇವರಾಜ ಅರಸು ಕಾಲದಲ್ಲಿ ಡೆನ್ಮಾರ್ಕ್‌ ಸರ್ಕಾರ 6 ಏತ ನೀರಾವರಿ ಯೋಜನೆ ಗಳನ್ನು ಉಚಿತವಾಗಿ ನಿರ್ಮಿಸಿ ಕೊಟ್ಟಿತ್ತು. ಅದು ಸಾವಿರಾರು ಎಕರೆ ಎರಡನೇ ಬೆಳೆಗೆ ಉಪಯೋಗವಾಗುತ್ತಿದೆ. 4 ಕೋಟಿ ವೆಚ್ಚದಲ್ಲಿ 35 ಕಿ.ಮೀ. ದೂರವಿರುವ ಮುರ್ಡೇಶ್ವರಕ್ಕೆ ಕುಡಿಯುವ ನೀರನ್ನು ಬಳಕೂರಿನಿಂದ ಒಯ್ಯಲಾಗಿದೆ. 5 ಕಿ.ಮೀ. ದೂರದ ಇಡಗುಂಜಿ ಕ್ಷೇತ್ರಕ್ಕೆ ಶರಾವತಿ ನೀರು ಪೂರೈಕೆಯಾಗುತ್ತಿದೆ. ನೂರಾರು ರೈತರು ಪಂಪ್‌ಸೆಟ್ ಬಳಸಿ ಶರಾವತಿಯಿಂದ ನೀರು ಪಡೆಯುತ್ತಿದ್ದಾರೆ. 9 ಗ್ರಾ.ಪಂ. ಸಹಿತ ಹೊನ್ನಾವರ ನಗರಕ್ಕೆ ಗೇರುಸೊಪ್ಪದಿಂದ ಕುಡಿಯುವ ನೀರು ತರುವ 300 ಕೋಟಿ ರೂ. ಯೋಜನೆ ಮಂಜೂರಾಗಿದೆ.

ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ತಕ್ಷಣವೇ ಡಿಪಿಆರ್‌ ಮಾಡಲು ಹೊರಟಿರುವುದನ್ನು ರದ್ದುಪಡಿಸಬೇಕು. ಬರದಿಂದ ಜಿಲ್ಲೆಯ ಜನರೇಸಂಕಷ್ಟದಲ್ಲಿದ್ದಾರೆ. ಬೆಂಗಳೂರಿಗೆ ನೀರು ನೀಡಲು ಪರ್ಯಾಯ ಯೋಜನೆಗಳ ಬಗ್ಗೆ ಯೋಚಿಸಲಿ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

-ಜೀಯು, ಹೊನ್ನಾವರ
Advertisement

Udayavani is now on Telegram. Click here to join our channel and stay updated with the latest news.

Next