ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸದೆ ಇರುವುದು ಮತ್ತು ಅರಣ್ಯಹಕ್ಕು ಸಮಸ್ಯೆ, ವರಾಹಿ, ಸಾವೆಹಕ್ಲು, ಚಕ್ರ ಆಣೆಕಟ್ಟು ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರ ಸ್ಥಿತಿ ಸಹ ಇದೇ ರೀತಿ ಇದೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿರಿಸಿಕೊಂಡು ಹಕ್ಕು ಪತ್ರ ಕೊಡಿಸಿ, ಭೂಸಮಸ್ಯೆ ಬಗೆಹರಿಸಿ, ಇಲ್ಲವಾದಲ್ಲಿ ರಾಜಿನಾಮೆ ಕೊಡಿ ಎಂದು ಒತ್ತಾಯಿಸಿ ಮಾ. 23ರಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಲೆನಾಡು ಭೂಹೋರಾಟ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.
ಮಂಗಳವಾರ ಅಣಲೆಕೊಪ್ಪದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 23ರಂದು ಲೋಹಿಯಾ ಮತ್ತು ಗೋಪಾಲಗೌಡರ ಜನ್ಮದಿನದ ಅಂಗವಾಗಿ ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಸಂತ್ರಸ್ತರ ರೈತರನ್ನು ಒಳಗೊಂಡಂತೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ನಾಲ್ಕು ತಾಲೂಕುಗಳ ಬಗರ್‌ಹುಕುಂ ಸಾಗುವಳಿ, ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಸಾಗರಕ್ಕೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೆಳಿಗ್ಗೆ 11ಕ್ಕೆ ಗಾಂಧಿ ಮೈದಾನದಿಂದ ಪ್ರತಿಭಟನೆ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಭೂಹೀನರಿಗೆ ಭೂಮಿ ನೀಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ನಡೆದು ಐದು ತಿಂಗಳು ಕಳೆಯುತ್ತಾ ಬಂದಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹಾಲಪ್ಪ ಹರತಾಳು ಈತನಕ ಅದರ ಬಗ್ಗೆ ಚಕಾರ ಎತ್ತಿಲ್ಲ ಎಂದು ದೂರಿದರು.
ಮುಖ್ಯಮಂತ್ರಿಗಳಾದಿಯಾಗಿ ಸಂಸದರು, ಸಚಿವರು, ಶಾಸಕರು ಅಧಿಕಾರಿಗಳ ಮರ್ಜಿಯಂತೆ ಕೆಲಸ ಮಾಡುತ್ತಿದ್ದಾರೆ. ಜನರ ಯಾವುದೇ ಕೆಲಸ ಆಗುತ್ತಿಲ್ಲ. ಅರಣ್ಯಹಕ್ಕು, ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ಅಡಿ ಸಕ್ರಮಕ್ಕಾಗಿ ಕಾಯುತ್ತಿರುವ ಭೂಹೀನರ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ನಾವು ಕಾನೂನುಭಂಗ, ಜೈಲುಬರೋ ಚಳುವಳಿಗೂ ಸಿದ್ದರಿದ್ದೇವೆ ಎಂದರು.
ಗೋಷ್ಠಿಯಲ್ಲಿ ವೀರೇಶ್ ಗೌಡ, ಅಶೋಕ್ ಮಾಳಗಿ, ಮಹಾದೇವಪ್ಪ ಸಿದ್ದಹಳ್ಳಿ, ಇಮ್ರಾನ್ ಖಾನ್ ಅಂಕರವಳ್ಳಿ, ಶ್ರೀಧರ ನಾರಗೋಡು, ಧರ್ಮೇಂದ್ರ ಸಿರವಾಳ, ಪ್ರೇಮ್‌ಸಿಂಗ್, ಶಿವರಾಮ್, ರಾಜು ನಾಯರ್ ಇನ್ನಿತರರು ಹಾಜರಿದ್ದರು.