Advertisement

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಮೀನು; ಸುಗ್ರೀವಾಜ್ಞೆಗೆ ಒತ್ತಡ ತರಲು ದಿವಾಕರ್ ಒತ್ತಾಯ

04:53 PM Apr 26, 2022 | Suhan S |

ಸಾಗರ: ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ 13,067 ಎಕರೆ ಜಮೀನು ನೀಡಿದ್ದು ಈತನಕ ಅವರ ಹೆಸರಿಗೆ ಅದನ್ನು ಮಂಜೂರು ಮಾಡಿ ಕೊಡದೆ, ಸಂತ್ರಸ್ತರನ್ನು ಸರ್ಕಾರ ಸತಾಯಿಸುತ್ತಿದೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಮೋಷನಲ್ ಹೇಳಿಕೆ ನೀಡುವುದರ ಬದಲು ಕೇಂದ್ರ ಸರ್ಕಾರದ ಮೂಲಕ ಸುಗ್ರೀವಾಜ್ಞೆ ಮಾಡಿಸಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ನ್ಯಾಯವಾದಿ ಕೆ.ದಿವಾಕರ್ ಸಲಹೆ ನೀಡಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡೆನೂರು, ಲಿಂಗನಮಕ್ಕಿ ಸೇರಿದಂತೆ 1959 ರಿಂದ 1967ರವರೆಗೆ ನಾಡಿಗೆ ಬೆಳಕು ನೀಡುತ್ತೀರಿ ಎಂದು ಬಿಂಬಿಸಿದಂತಹ ಸಾವಿರಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಆದರೆ ಜಮೀನಿನ ಜೊತೆ ತಮ್ಮ ಸರ್ವಸ್ವವನ್ನು ಕಳೆದುಕೊಂಡು ಕಳೆದ ಏಳು ದಶಕಗಳಿಂದ ಬೇರೆಬೇರೆ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರ ಪರವಾಗಿ ಯಾವುದೇ ಸರ್ಕಾರಗಳು ಧ್ವನಿ ಎತ್ತದೆ ಇರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.

ಅರಣ್ಯ ಭೂಮಿಯನ್ನು ಕಂದಾಯ ಭೂಮಿ ವ್ಯಾಪ್ತಿಗೆ ತರುವ ಕೆಲಸವನ್ನು 1980 ರಿಂದ 2017 ರ ತನಕ ಯಾರೂ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಣ್ಣ ತಿದ್ದುಪಡಿ ಮಾಡಿದರೆ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಸಾಧ್ಯವಿದೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಮದನ್ ಗೋಪಾಲ್ ನೇತೃತ್ವದಲ್ಲಿ ಸಮಿತಿ ನಡೆಸಿ ಸರ್ವೇ ಕಾರ್ಯ ನಡೆದಿತ್ತು. ನಂತರ ಅದು ನೆನಗುದಿಗೆ ಬಿದ್ದಿದೆ. 2017ರ ಫೆಬ್ರವರಿ 23 ರಲ್ಲಿ ಕಾಗೋಡು ತಿಮ್ಮಪ್ಪ ಅವರ ಸೂಚನೆ ಮೇರೆಗೆ 9,934 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಡಿನೋಟಿಫೈ ಮಾಡಲಾಗಿದೆ. ಆದರೆ ಅದನ್ನು ಕೇಂದ್ರಕ್ಕೆ ಕಳಿಸಿ ಕಾನೂನು ತಿದ್ದುಪಡಿ ಮಾಡುವ ಕೆಲಸ ಮಾಡಲಿಲ್ಲ. ನಂತರ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶಿವಕುಮಾರ್ ಎಂಬ ಅಧಿಕಾರಿ ನೇತೃತ್ವದಲ್ಲಿ ಸರ್ವೇ ಪ್ರಯತ್ನ ನಡೆಸಲಾಗಿತ್ತು. ಅದು ಅಂತಿಮ ಹಂತ ಕಂಡಿಲ್ಲ ಎಂದು ತಿಳಿಸಿದರು.

ತಕ್ಷಣ ರಾಜ್ಯ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳಬೇಕು. ರೈತರು ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವ ಕಳೆದುಕೊಂಡಿದ್ದಾರೆ. ಅವರನ್ನು ಅನಗತ್ಯವಾಗಿ ಕಚೇರಿ, ನ್ಯಾಯಾಲಯಕ್ಕೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂದ ಅವರು, ರಾಜ್ಯದ, ಜಿಲ್ಲೆಯ, ತಾಲೂಕಿನ ಎಲ್ಲ ಪಕ್ಷದವರೂ ಪಕ್ಷಾತೀತವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಗಮನ ಹರಿಸದೆ ಹೋದರೆ, ಸಮಸ್ಯೆ ಮತ್ತೆ 70 ವರ್ಷವಾದರೂ ಬಗೆಹರಿಯುವುದಿಲ್ಲ ಎಂದರು.

ರಾಜ್ಯದಲ್ಲಿ ಹಿಜಾಬ್ ನಂತರ ನಡೆದ ಬೇರೆಬೇರೆ ಘಟನೆಗಳು ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿದೆ. ಬೆಲೆಏರಿಕೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವಾಗಿಯೇ ಈ ಕೃತ್ಯಗಳು ನಡೆಯುತ್ತಿವೆ. ಇಂತಹ ಸಲ್ಲದ ವಿಚಾರಗಳನ್ನು ಪ್ರಸ್ತಾಪಿಸುವ ಚಟುವಟಿಕೆಗಳನ್ನು ಬಿಜೆಪಿ ನೇರವಾಗಿ ಮಾಡದೆ ಪಕ್ಷದ ಪರವಿರುವ ಸಂಘಟನೆಗಳಿಂದ ವ್ಯವಸ್ಥಿತವಾಗಿ ಮಾಡಿಸುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವ ಅಗತ್ಯವಿದೆ. ಜಾತ್ರೆಯಲ್ಲಿ ಅಂಗಡಿ ಹಾಕಬಾರದು, ಚಿನ್ನ ಖರೀದಿ ಮಾಡಬಾರದು ಎಂಬಿತ್ಯಾದಿ ನಿಲುವು ಪ್ರದರ್ಶನ ಮಾಡುವ ಮೂಲಕ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಗಳು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಆಕ್ರಮಣಕಾರಿ ಹೇಳಿಕೆ ನೀಡುತ್ತಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ಇದಕ್ಕೆ ತಕ್ಕಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸಣ್ಣಪುಟ್ಟ ಸಮಾಜಗಳನ್ನು ಗುರುತಿಸಿ ಟಿಕೆಟ್ ನೀಡುವತ್ತ ಗಮನ ಹರಿಸಬೇಕು. ಜೊತೆಗೆ ಒಂದೇ ಕುಟುಂಬದವರಿಗೆ ಟಿಕೆಟ್ ನೀಡುವುದು ಸರಿಯಲ್ಲ. ತಂದೆ ನಂತರ ಮಕ್ಕಳಿಗೆ, ಅಣ್ಣನ ನಂತರ ತಮ್ಮನಿಗೆ ಟಿಕೆಟ್ ಕೊಡುವ ಪ್ರವೃತ್ತಿ ದೂರವಾಗಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ರಾಜು ಎಂ. ತಲ್ಲೂರು ಮಾತನಾಡಿ, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಮೂರು ಬಾರಿ ಬೇರೆ ಬೇರೆ ಚುನಾವಣೆಯಲ್ಲಿ ಸೋಲು ಕಂಡಿರುವವರಿಗೆ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಕಳೆದ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ನಿಂದ ನಿಂತು ಸೋಲು ಅನುಭವಿಸಿದ್ದೇನೆ. ಈ ಬಾರಿ ಪಕ್ಷ ನನ್ನನ್ನು ಗುರುತಿಸಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು. ಜೊತೆಗೆ ಸೊರಬ ಕ್ಷೇತ್ರವನ್ನು ಒಂದೇ ಕುಟುಂಬದ ಆಳ್ವಿಕೆಯಿಂದ ಹೊರಗೆ ತರುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ದೇವರಾಣೆಯಾಗಿಯೂ ನಾನು ಯಾರಲ್ಲೂ ಚುನಾವಣೆಗೆ ಟಿಕೆಟ್ ಕೇಳಲ್ಲ. ಆದರೆ ಶಿವಮೊಗ್ಗ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ‘ಸರ್ವ’ ಅರ್ಹತೆಗಳು ನನಗಿವೆ ಎಂದು ಭಾವಿಸುತ್ತೇನೆ.– ಕೆ.ದಿವಾಕರ್, ರಾಜ್ಯ ಕಾಂಗ್ರೆಸ್ ವಕ್ತಾರ

ಸೊರಬದಲ್ಲಿ ಹಾಲಿ, ಮಾಜಿ ಶಾಸಕರು ಕೊರೊನಾ ಕಾಲದಲ್ಲಿಯೂ ಕ್ಷೇತ್ರದಲ್ಲಿ ಕಾಣಿಸಲಿಲ್ಲ. ಬಗರ್‌ಹುಕುಂ ವಿಚಾರ ಬಿಟ್ಟರೆ ಬೇರೆ ಪ್ರಸ್ತಾಪಗಳೇ ಅವರಿಂದ ನಡೆಯುತ್ತಿಲ್ಲ. ಸೋತರೂ ಇವತ್ತಿಗೂ ಜನರ ಪರ ಕೆಲಸ ಮಾಡುತ್ತಿರುವುದು ನಾನು.– ರಾಜು ತಲ್ಲೂರು, ಸೊರಬ ಕಾಂಗ್ರೆಸ್ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next