ಹೊನ್ನಾವರ: ಹೂಳುತುಂಬಿದ ಶರಾವತಿ ಅಳಿವೆಯು ಮೀನುಗಾರಿಕೆಗೆ ಹೋಗಿಬರುವ ಬೋಟ್‌ಗಳಿಗೆ ಪ್ರಾಣಕಂಟಕವಾಗಿದ್ದು, ಎರಡು ದಶಕಗಳಿಂದ ಮೀನುಗಾರರು ಅಳಿವೆ ಸುರಕ್ಷಿತಗೊಳಿಸುವ ಬೇಡಿಕೆ ಮುಂದಿಟ್ಟುಹೋರಾಡುತ್ತಿದ್ದಾರೆ. ದುರಾದೃಷ್ಟಕ್ಕೆ ಕೇಂದ್ರ ಸರ್ಕಾರ ಅಳಿವೆ ಹೂಳೆತ್ತಲು ಮಂಜೂರು ಮಾಡಿದ 27 ಕೋಟಿ ರೂ. ಮರಳಿಹೋಯಿತು. ವಾಣಿಜ್ಯ ಬಂದರು ಗುತ್ತಿಗೆದಾರರು ಅಳಿವೆ ಹೂಳೆತ್ತಲಿಲ್ಲ. ಬಂದರು ಕಾಮಗಾರಿ ಮಾತ್ರ ಆರಂಭಿಸಿ ಅಳಿವೆಗೆ ಇನ್ನಷ್ಟು ಹೂಳು ತುಂಬಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಕಾರಣಕ್ಕಾಗಿ ಮೀನುಗಾರಿಕೆ ಹಂಗಾಮು ಅಂತ್ಯದಲ್ಲಿ ನಡೆಯಲಿಲ್ಲ. ಈ ವರ್ಷ ಹಂಗಾಮು ಆರಂಭದಲ್ಲಿ ಕಳೆದವಾರ ಅಶೋಕ ಕಾಸರಕೋಡ ಇವರ ಬೋಟ್ ಹೂಳಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಘಾಸಿಗೊಂಡಿತು. ಕುಂದಾಪುರದಿಂದ ಪರಿಣಿತರು ಬಂದು ಬೋಟ್‌ನ್ನು ಮೇಲೆತ್ತಿ ದಡಕ್ಕೆ ತಂದಿದ್ದಾರೆ, ದುರಸ್ತಿ ಕಾರ್ಯ ನಡೆದಿದೆ. ಪ್ರತಿವರ್ಷಮೀನುಗಾರಿಕಾ ಹಂಗಾಮಿನಲ್ಲಿ ನಾಲ್ಕಾರು ಬೋಟ್‌ಗಳು ಮರಳು ದಿಬ್ಬಕ್ಕೆ ಡಿಕ್ಕಿ ಹೊಡೆದು ಮುರಿದು ದಡ ಸೇರುವುದು, ಮುಳುಗಿ ಹೋಗುವುದು, ಆಗೊಮ್ಮೆ ಈಗೊಮ್ಮೆನಾಲ್ಕಾರು ಜನರ ಬಲಿ ಪಡೆಯುವುದು ಸಾಮಾನ್ಯವಾಗಿ ಹೋಗಿದೆ. ಅಪಘಾತ ನಡೆದಾಗಲೆಲ್ಲ ಹೂಳೆತ್ತಿ ಮೀನುಗಾರಿಕೆಗೆ ಅವಕಾಶಮಾಡಿಕೊಡಿ ಎಂದು ಮೀನುಗಾರರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಮೀನುಗಾರಿಕೆ ನಿಲ್ಲಿಸಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಶಿವಾನಂದ ನಾಯ್ಕ ಅವರು ಮಂತ್ರಿಯಾಗಿದ್ದಾಗ ಹೂಳೆತ್ತುವ ನಾಟಕ ನಡೆಯಿತು. ಮಂಕಾಳು ವೈದ್ಯರು ಶಾಸಕರಾಗಿದ್ದಾಗ 27 ಕೋಟಿ ರೂಪಾಯಿಗಳು ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದವು. ಪುಣೆಯಲ್ಲಿರುವ ಸಾಗರ ಸಂಶೋಧನಾ ಸಂಸ್ಥೆ ಮೊದಲು ಅಳಿವೆಯಿದ್ದಲ್ಲಿಯೇ ಹೂಳೆತ್ತಿ ಎಡಬಲದಲ್ಲಿ ತಡೆಗೋಡೆ ನಿರ್ಮಿಸಿ (ಬ್ರೇಕ್ ವಾಟರ್) ಶಾಶ್ವತ ಪರಿಹಾರಕ್ಕೆ ಸಲಹೆ ನೀಡಿತ್ತು. ಈ ಆಧಾರದ ಮೇಲೆ ಹಣ ಬಂದು ಟೆಂಡರ್ ಆಗಿತ್ತು.
ಹಿಂದೆ ಯಡಿಯೂರಪ್ಪನವರುಮುಖ್ಯಮಂತ್ರಿಗಳಾಗಿದ್ದಾಗ ಮೀನುಗಾರಿಕಾ ಸಚಿವ ಪಾಲಿಮಾರ್ ಅವರು ಅಳಿವೆ ಸಹಿತ 100 ಎಕರೆ ಸಮುದ್ರ ತೀರವನ್ನು ಮದ್ರಾಸ್ ಮೂಲದ ವ್ಯಕ್ತಿಯೊಬ್ಬರ ಹೊನ್ನಾವರ ಪೋರ್ಟ್ ಕಂಪನಿಗೆ ಬಾಡಿಗೆಗೆ ಕೊಟ್ಟರು. ಅಳಿವೆ ಪ್ರತ್ಯೇಕವಾಗಿಡಿ, ಅದು ಮಹಾದ್ವಾರವಿದ್ದಂತೆ, ವಾಣಿಜ್ಯ ಬಂದರು ಮೀನುಗಾರಿಕಾ ಬಂದರಿಗೆ ಹೊಂದಿಕೊಂಡು ಬೇಡ ಎಂದು ಮೀನುಗಾರರು ಗೋಗರೆದರೂ ಕೇಳಿಲಿಲ್ಲ. ರಾಜಕಾರಣಿಗಳು ಮೀನುಗಾರರ ಪರವಾಗಿ ಮಾತನಾಡಿ ಬಂದರು ನಿರ್ಮಾಪಕರೊಂದಿಗೆಹೊಂದಾಣಿಕೆ ಮಾಡಿಕೊಂಡರು ಎಂಬುದು ಗಾಳಿಸುದ್ದಿಯೇನಲ್ಲ. ನಂತರ ಬಂದರು ಗುತ್ತಿಗೆ ಪಡೆದವರು ಒಣಮೀನು ವ್ಯಾಪಾರಿಗಳ ಶೆಡ್ ಕಿತ್ತುಹಾಕಿ ಬಂದರು ನಿರ್ಮಾಣಕಾಮಗಾರಿ ಆರಂಭಿಸಿ ಅಳಿವೆಯ ಹೂಳು ತೆಗೆಯುವ ಬದಲು ಬಂದರು ಹೂಳುಎತ್ತಿಹಾಕಿದರು. ಇದರಿಂದ ಬಹುಪಾಲು ಅಳಿವೆ ಕ್ರಿಕೆಟ್ ಮೈದಾನವಾಗಿದೆ. ಹೇಗೋ ತೆವಳಿಕೊಂಡು ಹೋಗುವ ಬೋಟ್‌ಗಳು ಅಪಘಾತಕ್ಕೀಡಾಗತೊಡಗಿವೆ.
ಸಮುದ್ರದಲ್ಲಿರುವ ಮರಳು ದಿಬ್ಬ ಸಮುದ್ರದ ತೆರೆ ಮತ್ತು ಒತ್ತಡವನ್ನು ಅವಲಂಭಿಸಿದ ಆಗಾಗ ಸ್ಥಳ ಬದಲಿಸುವುದರಿಂದ ಮೀನುಗಾರರಿಗೆ ಸ್ಪಷ್ಟದಾರಿ ಸಿಗದೆ ಅಪಘಾತ ನಡೆಯುತ್ತದೆ. ಮೀನುಗಾರರಲ್ಲಿ ಒಕ್ಕಟ್ಟಿರುವ ಕಾರಣ ಹತ್ತಿರ ಇರುವ ಇತರ ಬೋಟ್‌ಗಳು ಬಂದು ಜನರ ಜೀವ ಉಳಿಸುತ್ತಾರೆ, ಸಾಧ್ಯವಾದರೆ ಬೋಟ್ ಉಳಿಸುತ್ತಾರೆ. ಇಂತರ ದೃಶ್ಯಗಳು ಪುನರಾವೃತ್ತಿಯಾಗುತ್ತಲೇ ಇದೆ. ಸಹ್ಯಾದ್ರಿಯಲ್ಲಿ ಕಾಡು ಕಡಿಮೆಯಾದಂತೆ ಗುಡ್ಡದ ಕೆಂಪುಮಣ್ಣು ಮಳೆಯ ಹೊಡೆತಕ್ಕೆ ಶರಾವತಿ ಸೇರಿಕೊಂಡಿತು. ಆದರೂ ವೇಗವಾಗಿ ಹರಿಯುವ ಶರಾವತಿ ಹೂಳನ್ನು, ಕಸಕಡ್ಡಿಗಳನ್ನು, ಎಲೆ ಗಿಡಗಂಟಿಗಳನ್ನು ಸಮುದ್ರಕ್ಕೆ ತಳ್ಳಿ ಮೀನುಗಳಿಗೆಆಹಾರವನ್ನು ಉಂಟುಮಾಡುತ್ತಿದ್ದವು, ಬೋಟ್‌ಗಳುಸರಾಗವಾಗಿ ಓಡುತ್ತಿದ್ದವು. ಶರಾವತಿಗೆ ನಾಲ್ಕು ಸೇತುವೆ ಅಡ್ಡವಾಗಿ ಬಂದ ಮೇಲೆ ಪ್ರವಾಹದ ವೇಗ ಕಡಿಮೆಯಾಗಿತ್ತು, ಶರಾವತಿ ಅಳವೆ ಬಲಕ್ಕೆ ಸರಿಯುತ್ತ 5ಕಿಮೀ ದೂರ ಸರಿದು ಪಾವಿನಕುರ್ವೆಯ ಬಳಿ ಬಸವರಾಜದುರ್ಗದಲ್ಲಿ ಸಮುದ್ರ ಸೇರುತ್ತಿದೆ. ಬಂದರು ಆರಂಭವಾಗಿ ಬೋಟ್‌ಗಳ ಓಡಾಟ ಆರಂಭವಾಗುವ ಸಮಯದಲ್ಲಿ ಬಂದರು ಮಾಲಕರು ಹೂಳೆತ್ತಬಹುದು, ಅಲ್ಲಿಯವರೆಗೆ ಅಳವೆಯ ಮೇಲಿನ ಹಕ್ಕು ಕಳೆದುಕೊಂಡ ಮೀನುಗಾರರು ಕುಲದೇವರನ್ನು ನೆನೆಸುತ್ತ ಪ್ರಾಣ ಕೈಲಿ ಹಿಡಿದುಕೊಂಡು ದಾಟಬೇಕಿದೆ.
ಬೋಟ್ ಸಂಖ್ಯೆಯೂ ಇಳಿಕೆ : ಬೋಟ್‌ಗಳಿದ್ದವು. ಅಳವೆಯ ಅಪಾಯದಿಂದ ಬೋಟ್‌ಗಳು ಬರುವುದು ಕಡಿಮೆಯಾಗಿ 200ಕ್ಕೆ ಇಳಿದಿದೆ. ಗೇರಸೊಪ್ಪಾದಲ್ಲಿ ಚೆನ್ನಭೈರಾದೇವಿಯ ಆಡಳಿತವಿದ್ದಾಗ ಮಸಾಲೆ ಸಾಮಗ್ರಿ ಸಾಗಿಸಲು ದೊಡ್ಡ ಹಡಗಿನಂತಹ ಮಚವೆಗಳು ಶರಾವತಿ ಅಳವೆ ದಾಟಿಗೇರಸೊಪ್ಪಾಕ್ಕೆ ಹೋಗುತ್ತಿದ್ದವು. ಈಗ ನಡೆದುಕೊಂಡೇ ಅಳವೆ ದಾಟಬಹುದು. ಇದು ಅಳವೆಯ ಕಥೆವ್ಯಥೆ.
ಸಮುದ್ರದಲ್ಲಿ ಮುಳುಗಿತು ಬೋಟ್ : ಫೆಲಿಕ್ಸ್ ಲೋಪೀಸ್ ಎಂಬವರ ಮೀನುಗಾರಿಕಾ ಬೋಟ್‌ನ್ನು ಆತನ ತಮ್ಮ ಸುನೀಲ್ ಲೋಪೀಸ್ ಇತರ ಕಲಾಸಿಗಳೊಂದಿಗೆ ಟೊಂಕ ಬಂದರಿನಿಂದ ಸೇಂಟ್ ಆ್ಯಂಟನಿ ಬೋಟ್‌ನೊಂದಿಗೆಗುರುವಾರ ಬೆಳಗ್ಗೆ 6.30ಕ್ಕೆ ಮೀನುಗಾರಿಕೆಗೆತೆರಳಿದ್ದರು. ಶರಾವತಿ ಅಳವೆಯ ಮುಖಜ ಪ್ರದೇಶದಲ್ಲಿ ಅಲೆಗಳಿಗೆ ಸಿಲುಕಿದ ಬೋಟ್ ಮರಳು ದಿನ್ನೆಗೆ ಡಿಕ್ಕಿ ಹೊಡೆದ ಪರಿಣಾಮಬೋಟ್ ಕೆಳಭಾಗದಲ್ಲಿ ಬಿರುಕು ಬಿಟ್ಟು ನೀರು ತುಂಬಿ ಸಮುದ್ರದಲ್ಲಿ ಮುಳುಗಿದೆ. ಬೋಟ್‌ನಲ್ಲಿ 500 ಮಾರು ಬಲೆ, ಜಿಪಿಎಸ್, ವೈರ್‌ಲೆಸ್, ಫಿಶ್‌ಪೈಂಡರ್, ಇಲೆಕ್ಟ್ರಿಕ್ ಉಪಕರಣ, ದೊಡ್ಡ ಗಾತ್ರದ ಬ್ಯಾಟರಿ, 500 ಮೀಟರ್ ಹಗ್ಗ, 1500 ಲೀಟರ್ ಡೀಸೆಲ್ ಮತ್ತು ಇತರ ಸಲಕರಣೆಗಳು ಇದ್ದವು. ಬೋಟ್ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದ್ದು, ಅಂದಾಜು 70 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಅಪಘಾತದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅವರು ಹೊನ್ನಾವರ ಪೊಲೀಸರಿಗೆ ದೂರು ನೀಡಿದ್ದಾರೆ. ಮೀನುಗಾರರು ಪುನಃ ಹೋರಾಟಕ್ಕಿಳಿಯುವ ಮೊದಲು ಕೂಡಲೇ ಮೀನುಗಾರಿಕಾ ಬೋಟ್‌ಗಳು ಓಡಾಡುವಷ್ಟು ಹೂಳೆತ್ತಿ ಮೀನುಗಾರಿಕೆಗೆ ಅವಕಾಶಮಾಡಿಕೊಡಬೇಕು ಎಂದು ಭಾಸ್ಕರ ತಾಂಡೇಲ್, ಅಶೋಕ ಕಾಸರಕೋಡ ಮೊದಲಾದವರು ಆಗ್ರಹಿಸಿದ್ದಾರೆ.
-ಜೀಯು