ಉಡುಪಿ: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ಫೆ. 5ರಂದು ನಡೆದ ಉದ್ಯಮಿ ಶರತ್ ಶೆಟ್ಟಿ (39) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಮತ್ತೋರ್ವ ಆರೋಪಿಯನ್ನು ಸೋಮವಾರ ರಾತ್ರಿ ಪಣಂಬೂರು ಬೀಚ್ ಸಮೀಪ ಬಂಧಿಸಿದ್ದಾರೆ. ಕೊಲೆ ಪ್ರಕರಣದ ಒಟ್ಟು ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೇರಿದೆ.
ಸೋಮವಾರ ರಾತ್ರಿ ಬಂಧಿಸಿರುವ ಆರೋಪಿಯನ್ನು ಪಣಂಬೂರು ಕಲ್ಯ ನಿವಾಸಿ ನಾಗರಾಜ್ (19) ಎಂದು ಗುರುತಿಸಲಾಗಿದೆ. ಕೊಲೆಯಲ್ಲಿ ಈತ ನೇರವಾಗಿ ಭಾಗಿಯಾಗಿದ್ದ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಿವೇಶ್ ಶೆಟ್ಟಿ, ಲಿಖೀತ್ ಕುಲಾಲ್, ಆಕಾಶ್ ಕರ್ಕೇರ, ಪ್ರಸನ್ನ ಶೆಟ್ಟಿ ಎಂಬವರನ್ನು ಈಗಾಗಲೇ ಬಂಧಿಸಿದ್ದು, ಮೂವರನ್ನು ಒಂದು ವಾರಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.
ನಾಗರಾಜ್ ಹಾಗೂ ಪೊಲೀಸ್ ಕಸ್ಟಡಿಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ದಿವೇಶ್, ಲಿಖೀತ್ ಹಾಗೂ ಆಕಾಶ್‌ನನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ನೇತೃತ್ವದ ಪೊಲೀಸ್ ತಂಡ ಮಂಗಳವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ನ್ಯಾಯಾಲಯವು ಎಲ್ಲ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಪ್ರಕರಣದ ಆರೋಪಿಯಾಗಿರುವ ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರರಿಗೆ ಪೊಲೀಸರು ಹುಡುಕಾಡುತ್ತಿದ್ದಾರೆ.
ಹತ್ಯೆಗೆ ಸ್ಕೆಚ್ ರೂಪಿಸಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಟಪಾಡಿ ಯೋಗೀಶ್ ಆಚಾರ್ಯ ತಲೆಮರೆಸಿಕೊಂಡಿದ್ದು, ಇನ್ನೂ ಬಂಧನವಾಗಿಲ್ಲ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.