ಬರ್ಮಿಂಗ್‌ಹ್ಯಾಮ್: 22ನೇ ಕಾಮನ್ವೆಲ್ತ್ ಗೇಮ್ಸ್ ಸೋಮವಾರ ತಡರಾತ್ರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಮುಗಿಯಿತು. ಸಮಾರೋಪ ಸಮಾರಂಭದಲ್ಲಿ ಟಿಟಿಪಟು ಅಚಂತ ಶರತ್ ಕಮಲ್ ಮತ್ತು ಬಾಕ್ಸರ್ ನಿಖತ್ ಜರೀನ್ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದರು.
ಶರತ್ ಕಮಲ್ ಒಟ್ಟು 4 ಪದಕ ಗೆದ್ದು ಈ ಕೂಟದಲ್ಲಿ ಭಾರತದ ಹೀರೋ ಆಗಿ ಮೂಡಿಬಂದರು. ಇದರಲ್ಲಿ ಸಿಂಗಲ್ಸ್ ಚಿನ್ನವೂ ಒಳಗೊಂಡಿದೆ. ನಿಖತ್ ಜರೀನ್ 50 ಕೆಜಿ ಲೈಟ್ ಫ್ಲೈವೇಟ್ ಸ್ಪರ್ಧೆಯಲ್ಲಿ ಬಂಗಾರ ಪದಕದ ಸಾಧನೆಗೈದಿದ್ದರು.
ಉದ್ಘಾಟನ ಸಮಾರಂಭದಲ್ಲಿ ಪಿ.ವಿ. ಸಿಂಧು ಮತ್ತು ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳಾಗಿದ್ದರು. 2026ರ ಕಾಮನ್ವೆಲ್ತ್ ಗೇಮ್ಸ್ ಆಸ್ಟ್ರೇಲಿಯದ ವಿಕ್ಟೋರಿಯದಲ್ಲಿ ನಡೆಯಲಿದೆ.
ಅಭಿನಂದನೆಗಳು ಭಾರತ ತಂಡಕ್ಕೆ
ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಸಂಪನ್ನಗೊಂಡಿದೆ. ಕೋವಿಡ್ ಕಾಲಘಟ್ಟದ ಬಳಿಕ ಅತ್ಯಂತ ಯಶಸ್ವಿಯಾಗಿ ನಡೆದ ಕೂಟವೆಂಬುದು ಇದರ ಹೆಗ್ಗಳಿಕೆ. ಭಾರತದ ಪಾಲಿಗೆ ಹಲವು ಕಾರಣಗಳಿಂದ ಈ ಗೇಮ್ಸ್ ಐತಿಹಾಸಿಕವೆನಿಸಿದೆ. 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದ ಹೆಗ್ಗಳಿಕೆ ಭಾರತದ್ದು.
2018ರ ಗೋಲ್ಡ್‌ಕೋಸ್ಟ್ ಕೂಟದಲ್ಲಿ ತೃತೀಯ ಸ್ಥಾನಿಯಾಗಿದ್ದ ಭಾರತ ಈ ಬಾರಿ 4ನೇ ಸ್ಥಾನಕ್ಕೆ ಇಳಿದರೂ ಸಾಧನೆ ಮಾತ್ರ ಗಮನಾರ್ಹ. ಸಿಂಹಪಾಲು ಪದಕಗಳನ್ನು ತಂದುಕೊಡುತ್ತಿದ್ದ ಶೂಟಿಂಗ್ ಸ್ಪರ್ಧೆಯ ಗೈರಲ್ಲೂ ಭಾರತ 61 ಪದಕ ಜಯಿಸಿದೆ. ಅಂದರೆ, 2018ರ ಕೂಟಕ್ಕೆ ಹೋಲಿಸಿದರೆ ಕಡಿಮೆಯಾದದ್ದು 5 ಪದಕ ಮಾತ್ರ. ಕೆಲವು ಹೊಸ ಕ್ರೀಡೆಗಳಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಸಾಬೀತುಮಾಡಿದೆ. ಕೂಟದ ಕಡೆಯ ದಿನವಾದ ಸೋಮವಾರವೂ 4 ಚಿನ್ನ ಜಯಿಸಿದೆ. ಅಭಿನಂದನೆಗಳು ಭಾರತೀಯ ತಂಡಕ್ಕೆ.