Advertisement
2002ರಲ್ಲಿ “ಮೇರೇ ಯಾರ್ ಕಿ ಶಾದಿ ಹೈ’ ಎಂಬ ಹಿಂದಿ ಸಿನಿಮಾವೊಂದು ಬಿಡುಗಡೆಯಾಗಿತ್ತು. ಆ ಸಿನಿಮಾದ ಹಾಡುಗಳ ಪೈಕಿ “ಶರಾರ, ಶರಾರ’ ಎಂಬ ಹಾಡು ಬಹಳಷ್ಟು ಜನಪ್ರಿಯವಾಯಿತು. ಹಿಂದಿಯಲ್ಲಿ ಶರಾರ ಪದಕ್ಕೆ ಬೆಂಕಿಯ ಕಿಡಿ ಎಂಬ ಅರ್ಥವಿದೆ. ಆದ್ರೆ, ಇಲ್ಲಿ ಹೇಳ್ತಾ ಇರೋದೇ ಬೇರೆ. ತುಂಬಾ ಸಡಿಲವಾದ ಪ್ಯಾಂಟ್ ಜೊತೆ ಕುರ್ತಿ ಮತ್ತು ದುಪಟ್ಟಾ ಇರುವ ಉಡುಗೆಗೂ ಶರಾರ ಎನ್ನುತ್ತಾರೆ. ಶರಾರ ಹಾಡಿನ ಜೊತೆಜೊತೆಗೇ ಮಾರುಕಟ್ಟೆಗೆ ಲಗ್ಗೆ ಇಟ್ಟ ದಿರಿಸು ಇದು. ಅಂದಿನಿಂದ ಇಂದಿನವರೆಗೂ ಈ ದಿರಿಸಿನ ಕ್ರೇಝ್ ಕಡಿಮೆಯಾಗಿಲ್ಲ,
ಹಬ್ಬ ಹರಿದಿನ, ಮದುವೆಯಂಥ ಸಮಾರಂಭಗಳಿಗೆ ಈ ಉಡುಪು ಧರಿಸಿದರೆ ಅದ್ಧೂರಿಯಾಗಿ ಕಾಣುತ್ತದೆ. ಶರಾರ ಜೊತೆ ತೊಡುವ ಕುರ್ತಿ ಗಿಡ್ಡವಾಗಿರಬಹುದು, ಮೊಣಕಾಲಿನವರೆಗಿನ ಉದ್ದದ್ದಾಗಿರಬಹುದು ಅಥವಾ ಇನ್ನೂ ಉದ್ದವೂ ಇರಬಹುದು. ನಿಮ್ಮ ದೇಹದ ಎತ್ತರ, ತೂಕಕ್ಕೆ ಹೊಂದುವಂಥ ಶರಾರ ಖರೀದಿಸಬಹುದು. ಕುರ್ತಿಯಲ್ಲಿ ಸ್ಲೀವ್‌ಲೆಸ್, ಉದ್ದತೋಳು, ಅರ್ಧತೋಳು, ಮುಕ್ಕಾಲು ತೋಳು, ಮೆಗಾಸ್ಲೀವ್, ಬೆಲ್‌ಬಾಟಮ್ ಸ್ಲೀವ್ ಹೀಗೆ ವಿಧ ವಿಧದ ಆಯ್ಕೆಗಳಿವೆ. ಲಂಗದಂಥ ಪ್ಯಾಂಟ್
ಕುರ್ತಿಯ ಜೊತೆಗೆ ತೊಡುವ ಪ್ಯಾಂಟ್ ಲಂಗದಂತೆ ಕಾಣುವುದೇ, ಈ ದಿರಿಸಿನ ಸೊಬಗನ್ನು ಹೆಚ್ಚಿಸಿರುವುದು. ಸಡಿಲವಾಗಿರುವ ಪ್ಯಾಂಟ್, ಕುರ್ತಿ ಮತ್ತು ದುಪಟ್ಟಾ, ಈ ಮೂರೂ ಒಂದೇ ಬಣ್ಣ ಮತ್ತು ಡಿಸೈನ್ ಹೊಂದಿರುತ್ತವೆ. ದಶಕಗಳ ಹಿಂದೆ ಹವಾ ಸೃಷ್ಟಿಸಿದ್ದ ಶರಾರ ಈಗ ಮತ್ತೆ ಟ್ರೆಂಡ್ ಆಗುತ್ತಿದೆ. ಅತ್ತ ಸಲ್ವಾರ್ ಕಮೀಜ್ ಅಲ್ಲದ ಇತ್ತ ಉದ್ದ ಲಂಗವೂ ಅಲ್ಲದ ಶರಾರ ಉಡುಗೆಯನ್ನು ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಖರೀದಿಸಬಹುದು. ಸೀರೆ ಉಡಲು ಸಮಯ ಇಲ್ಲ ಅನ್ನುವವರು, ಹಬ್ಬದ ದಿನ ಅದ್ಧೂರಿ ಡಿಸೈನ್‌ನ ಶರಾರ ಧರಿಸಬಹುದು.
Related Articles
ಶರಾರ ಧರಿಸಿದಾಗ, ದೊಡ್ಡ ದೊಡ್ಡ ಕಿವಿಯೋಲೆಗಳನ್ನು ತೊಟ್ಟರೆ ಚೆನ್ನ. ಚಾಂದ್‌ಬಾಲಿ, ಜುಮ್ಕಿ, ಶಾಂಡೆಲಿಯರ್ (ಗೊಂಚಲಿನಂತೆ ಕಾಣುವ) ಇಯರ್‌ರಿಂಗ್ಸ್, ಹೂ (ದೊಡ್ಡ ವೃತ್ತಾಕಾರದ ಕಿವಿಯೋಲೆ), ಹ್ಯಾಂಗಿಂಗ್ ಕಿವಿಯೋಲೆ ಧರಿಸಿದರೆ, ಉಡುಗೆಯ ಮೆರುಗು ಮತ್ತಷ್ಟು ಹೆಚ್ಚುತ್ತದೆ. ಇದು ಸಾಂಪ್ರದಾಯಿಕ, ಅದ್ಧೂರಿ ಉಡುಗೆಯಾದ್ದರಿಂದ ಆಫೀಸ್ ಪಾರ್ಟಿ, ಶಾಪಿಂಗ್, ಔಟಿಂಗ್‌ಗೆ ಸೂಕ್ತವಲ್ಲ.
Advertisement
ಗ್ಸ್ಈ ಉಡುಗೆಯ ಜೊತೆಗೆ ಜುಟ್ಟು, ಜಡೆ, ತುರುಬು ಕಟ್ಟಿಕೊಂಡರೆ ಚೆನ್ನಾಗಿ ಕಾಣುತ್ತದೆ. ಫ್ರೀ ಹೇರ್ ಸ್ಟೈಲ್ ಕೂಡಾ ಹೊಂದುತ್ತದೆ. ಉಡುಗೆಯೇ ಇಷ್ಟೊಂದು ಗ್ರ್ಯಾಂಡ್ ಆಗಿರುವಾಗ ಇನ್ನಷ್ಟು ಗ್ರ್ಯಾಂಡ್ ಆಗಿ ಮೇಕ್‌ಅಪ್ ಹಚ್ಚಿದರೆ ಚೆನ್ನಾಗಿ ಕಾಣಿಸುವುದಿಲ್ಲ. ಹಾಗಾಗಿ ಶರಾರ ಜೊತೆ ಮಿನಿಮಲ್ ಮೇಕ್‌ಅಪ್ ಮಾಡಿ. ಜೂತಿ (ಜುತ್ತಿ) ಅಥವಾ ಸಾಂಪ್ರದಾಯಕ ಚಿತ್ತಾರವಿರುವ ಪಾದರಕ್ಷೆ ಧರಿಸಿ. ಪ್ರಸಿದ್ಧ ವಸ್ತ್ರವಿನ್ಯಾಸಕರು ಡಿಸೈನ್ ಮಾಡಿರುವ ಶರಾರಗಳನ್ನು ಸಿನಿ ತಾರೆಯರು ತೊಟ್ಟು ಸ್ಟೈಲ್ ಸ್ಟೇಟ್‌ಮೆಂಟ್ ಮಾಡುತ್ತಿದ್ದಾರೆ. ಹಾಗಾಗಿ ಹಬ್ಬದ ಸೀಸನ್‌ನಲ್ಲಿ ಶರಾರದ್ದೇ ಹವಾ ಇದೆ. ನೀವೂ ಟ್ರೈ ಮಾಡಿ ನೋಡಿ. ಬಗೆ ಬಗೆ ಶರಾರ
ಹತ್ತಿ, ರೇಷ್ಮೆ ಅಥವಾ ಸಿಂಥೆಟಿಕ್ ಫ್ಯಾಬ್ರಿಕ್ ಬಳಸಿ ಈ ಉಡುಗೆಯನ್ನು ನೇಯಲಾಗುತ್ತದೆ. ಜರಿ, ಕಸೂತಿ, ಲೇಸ್‌ವರ್ಕ್, ನೆಟ್‌ಡಿಸೈನ್ (ಬಲೆಯಂತೆ ಕಾಣುವ), ವೆಲ್ವೆಟ್ (ಮಕ್ಮಲ್), ಟ್ಯಾಸೆಲ…, ದಾರ, ಮಣಿ, ಮುತ್ತು, ಬಣ್ಣದಕಲ್ಲುಗಳು, ಗೆಜ್ಜೆ, ಮತ್ತಿತರ ಅಲಂಕಾರಿಕ ವಸ್ತುಗಳ ಕಸೂತಿ ಇರುವ ಶರಾರ ಉಡುಗೆ, ಯಾವ ಗ್ರ್ಯಾಂಡ್ ಸೀರೆಗೂ ಕಡಿಮೆ ಇಲ್ಲ. ಮೊಘಲರ ಕಾಲದ್ದು
ಶರಾರ ಉಡುಗೆಯ ಇತಿಹಾಸ ಕೆದಕಿದರೆ, ಅದು ನಿಮ್ಮನ್ನು ಮೊಘಲರ ಕಾಲಕ್ಕೆ ಕರೆದೊಯ್ಯುತ್ತದೆ. ಆಗಿನ ರಾಜಮನೆತನದವರು ಧರಿಸುತ್ತಿದ್ದ ಉಡುಗೆ ಇದಾಗಿದ್ದು, ಇತಿಹಾಸಕಾರರಿಗೆ ದೊರೆತ ಚಿತ್ರಗಳಲ್ಲಿ ಮೊಘಲ್ ರಾಣಿಯರು ಶರಾರ ಧರಿಸಿರುವುದನ್ನು ಕಾಣಬಹುದು. ಪಲಾಝೋ ಮತ್ತು ಶರಾರ ನಡುವೆ ಕೊಂಚ ಸಾಮ್ಯತೆ ಇದೆ. ಆದರೆ, ಹಗುರ ಬಟ್ಟೆಗಳ (ಶಿಫಾನ್, ಜಾರ್ಜೆಟ್) ಪಲಾಝೋ ಪಾಶ್ಚಿಮಾತ್ಯ ಶೈಲಿಯದ್ದಾದರೆ, ಅದ್ಧೂರಿ ಮತ್ತು ಹೆವಿ ಇರುವ ಶರಾರ ಸಾಂಪ್ರದಾಯಿಕ ಉಡುಪು. ಪಾಯಿಂಟ್ಸ್
-ಎಂಬ್ರಾಯ್ಡ್ ರಿ ಇರುವ ಶರಾರಗಳನ್ನು ಮದುವೆ, ರಿಸೆಪ್ಷನ್‌ಗಳಂಥ ಅದ್ಧೂರಿ ಸಮಾರಂಭಗಳಿಗೆ ಧರಿಸಬಹುದು.
– ಶರಾರದ ಕುರ್ತಾ, ಪ್ಯಾಂಟ್ ತಿಳಿ ಬಣ್ಣದಲ್ಲಿದ್ದರೆ, ಗಾಢ ಬಣ್ಣದ ದುಪಟ್ಟಾ ಜೊತೆ ಮ್ಯಾಚ್ ಮಾಡಿ.
-ಸರಳ ಸಮಾರಂಭಗಳಿಗೆ, ಪ್ಲೇನ್ ಕುರ್ತಿ ಇರುವ ಶರಾರ ಚೆನ್ನ.
-ಅದ್ಧೂರಿ ಕಿವಿಯೋಲೆ ಧರಿಸಿದರೆ, ಕುತ್ತಿಗೆ ಖಾಲಿ ಇದ್ದರೂ ಓಕೆ.
– ಮೇಕಪ್, ಆ್ಯಕ್ಸೆಸರಿಸ್ ಸರಳವಾಗಿರಲಿ. – ಅದಿತಿಮಾನಸ ಟಿ. ಎಸ್.