ಸುರಪುರ: ಕಲಬುರಗಿ ಶರಣಬಸವೇಶ್ವರನ ಜೀವನ ಒಳಗೊಂಡಿರುವ ಪುರಾಣ ಪ್ರತಿಯೊಬ್ಬರ ಬದುಕಿಗೆ ಮಾರ್ಗಸೂಚಿಯಾಗಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ರಂಗಂಪೇಟೆಯ ಗುಮ್ಮಾ ನಿವಾಸದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕಲಬುರಗಿ ಶರಣ ಬಸವೇಶ್ವರರ ಪುರಾಣ ಮತ್ತು ಶಿವಚಿಂತನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಇರುವಷ್ಟು ದಿನ ಪರೋಪಕಾರಿಯಾಗಿ ಬದುಕಬೇಕು. ಸನ್ಮಾರ್ಗದಲ್ಲಿ ನಡೆದು ಸಮಾಜದ ಪ್ರೀತಿಗೆ ಪಾತ್ರರಾಗಬೇಕು. ಪುರಾಣ ಪುಣ್ಯಕಥನಗಳು ಶ್ರೀಸಾಮಾನ್ಯನ ಬದುಕಿನ ಮಾರ್ಗಸೂಚಿಗಳು ಕಾಲ ಕಾಲಕ್ಕೆ ನಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಶರಣರ ಚಿಂತನಗಳನ್ನು ಮೆಲುಕು ಹಾಕುವುದರಿಂದ ಮನಸ್ಸಿಗೆ ಒಂದಿಷ್ಟು ನೆಮ್ಮದಿ ಶಾಂತಿ ದೊರಕುತ್ತದೆ ಎಂದು ತಿಳಿಸಿದರು.
ಹಣ, ಐಶ್ವರ್ಯದಿಂದ ಸಂಪತಭರಿತವಾಗಿರುವ ಮಾಹಿತಿ ಮತ್ತು ಆಧುನಿಕ ತಂತ್ರಜ್ಞಾನದಿಂದ ಮುಂದುವರೆದಿರುವ ಐರೋಪ್ಯ ರಾಷ್ಟ್ರಗಳಲ್ಲಿನ ಜನರು ಶಾಂತಿ ನೆಮ್ಮದಿ ಇಲ್ಲದೆ ತೋಳಲಾಡುತ್ತಿದ್ದಾರೆ. ಶಾಂತಿ ನೆಮ್ಮದಿಗಾಗಿ ಭಾರತಕ್ಕೆ ಧಾವಿಸುತ್ತಿದ್ದಾರೆ. ಧರ್ಮ, ದೇವರು, ಪುರಾಣ, ಓಂ ಕಾರದ
ಶಾಂತಿ ಮಂತ್ರ ಭಾರತ ಬಿಟ್ಟರೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.
ಕೋಟನೂರಿನ ಶಿವಶಂಕರ ಬಿರೇದಾರ ಪುರಾಣ ನಡೆಸಿಕೊಟ್ಟರು. ಮಲ್ಲಿಕಾರ್ಜುನ ವರನಾಳ ತಬಲಾ ಸಾಥ ನೀಡಿದರು. ನಂತರ ಮಹಾಪ್ರಸಾದ ಜರುಗಿತು. ಶರಣಪ್ಪ ಗುಮ್ಮಾ ಸ್ವಾಗತಿಸಿದರು. ರಾಜೇಂದ್ರ ಯಾದವ ನಿರೂಪಿಸಿದರು. ರವಿ ಸಜ್ಜನ್ ವಂದಿಸಿದರು.