ನಟ ಶರಣ್ ಅಭಿನಯಿಸಿರುವ “ಛೂ ಮಂತರ್’ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದೆ ಹೋಗುತ್ತಲೇ ಇತ್ತು. ಅಂತಿಮವಾಗಿ “ಛೂ ಮಂತರ್’ ಹೊಸ ವರ್ಷಕ್ಕೆ ಬರುತ್ತಿದೆ. ಜನವರಿ 10ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ನಿರ್ಮಾಪಕ ತರುಣ್ ಶಿವಪ್ಪ ಹಾಗೂ ಶರಣ್ ಕಾಂಬಿ ನೇಷನ್ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಈ ಹಿಂದೆ “ಕರ್ವ’ ಸಿನಿಮಾ ನಿರ್ದೇಶಿಸಿದ್ದ ನವನೀತ್ “ಛೂ ಮಂತರ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
“ಛೂ ಮಂತರ್ ಇದೊಂದು ಫ್ಯಾನ್ಸಿ ಲೋಕ. ಹೈಪರ್ ಲಿಂಕ್ ಇರುವ ಮೂರು ಭಿನ್ನ ಕಥೆಗಳು ಜೊತೆಗೆ ಸಾಗುವ ಚಿತ್ರ ಇದಾಗಿದ್ದು, ನಾಯಕ ಎಲ್ಲಾ ಕಥೆಯಲ್ಲಿ ಇರುತ್ತಾನೆ. ಶರಣ್ ಅವರು ಇಲ್ಲಿವರೆಗೆ ಪೂರ್ಣ ಪ್ರಮಾಣದ ಹಾರರ್ ಸಿನಿಮಾ ಮಾಡಿಲ್ಲ. ಇದು ಅವರ ಕೆರಿಯರ್ನ ಮೊದಲ ಔಟ್ ಅಂಡ್ ಔಟ್ ಹಾರರ್ ಸಿನಿಮಾ’ ಎನ್ನುವುದು ನಿರ್ದೇಶಕ ನವನೀತ್ ಅವರ ಮಾತು.
ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, “ಶರಣ್ ಅವರ ಜೊತೆ “ವಿಕ್ಟರಿ-2′ ಚಿತ್ರ ಮಾಡಿ ವಿಕ್ಟರಿ ಪಡೆದಿದ್ದೆ. ಈಗ ಅವರೊಂದಿಗೆ ಮತ್ತೆ ಕೆಲಸ ಮಾಡಿರುವುದು ಖುಷಿಯಾಗಿದೆ’ ಎಂದರು.
ಶರಣ್ ಜೊತೆಗೆ ನಟಿ ಅದಿತಿ ಪ್ರಭುದೇವ, ಪ್ರಭು ಮುಂಡ್ಕೂರ್, ಮೇಘನಾ ಗಾಂವ್ಕರ್, ಚಿಕ್ಕಣ್ಣ, ರಜನಿ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಅವಿನಾಶ್ ಹಿನ್ನೆಲೆ ಸಂಗೀತ, ಚಂದನ್ ಶೆಟ್ಟಿ ಸಂಗೀತ, ಅನೂಪ್ ಛಾಯಾಗ್ರಹಣವಿದೆ.
ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡೊಂದು ರಿಲೀಸ್ ಆಗಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಹಾರರ್ ಕಥೆಯೊಂದರಲ್ಲಿ ಶರಣ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿ ಮೂಡಿದೆ.