ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಹಿನ್ನೆಲೆಯಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ ಹಾಗೂ ಸೆ.26ರ ಸೋಮವಾರದಿಂದ ಘಟಸ್ಥಾಪನೆ ನೆರವೇರಲಿದೆ.
ಸೋಮವಾರ ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ದೇವಿ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ರುದ್ರಾಭಿಷೇಕ, ಕುಂಕುಮಾರ್ಚನೆ, ಸಹಸ್ರ ನಾಮಾವಳಿ ಜರುಗಲಿದ್ದು, ಕೆಲವೆಡೆ ದೇವಿ ಮೂರ್ತಿಯೊಂದಿಗೆ ಕುಂಭ ಮೆರವಣಿಗೆ ನಡೆಯಲಿದೆ.ಸೋಮವಾರ ಸಂಜೆ ವೇಳೆ ಬಹುತೇಕ ದೇವಸ್ಥಾನಗಳಲ್ಲಿ ಘಟಸ್ಥಾಪನೆಯೊಂದಿಗೆ ಪುರಾಣ ಪ್ರವಚನ ಆರಂಭಗೊಳ್ಳಲಿದ್ದು, ವಿವಿಧ ಮಠಾ ಧೀಶರು, ಕೀರ್ತನಕಾರರು, ಪ್ರವಚನಕಾರರು ಪುರಾಣ ಪ್ರವಚನ ಆರಂಭಿಸುವರು.
ಘಟಸ್ಥಾಪನೆ: ಬೆಟಗೇರಿ ಹಳೆ ಮತ್ತು ಹೊಸ ಬನಶಂಕರಿ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಹಳೆ ಸರಾಫ್ ಬಜಾರ್ ಹತ್ತಿರದ ಜಗದಂಬಾ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ, ಆಧ್ಯಾತ್ಮ ವಿದ್ಯಾಶ್ರಮ, ಕಳಸಾಪುರ ರಸ್ತೆ ಶಾಂತಿನಾಥ ದಿಗಂಬರ ಜೈನ್ ಮಂದಿರ, ನಂದೀಶ್ವರ ಮಠ, ಅಕ್ಕನ ಬಳಗ, ನಂದಿವೇರಿ ಮಠ, ಅಡವೀಂದ್ರಸ್ವಾಮಿ ಮಠ, ಮುಕ್ಕಣ್ಣೇಶ್ವರ ಮಠ, ವಿಭೂತಿ ಓಣಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ರಾಜೀವಗಾಂಧಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಘಟಸ್ಥಾಪನೆ ನೆರವೇರಲಿದೆ.
ಪುರಾಣ-ಪ್ರವಚನ: ಅಭಿನವ ಶಿವಾನಂದ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಮಹೇಶ್ವರಸ್ವಾಮಿ ಹೊಸಳ್ಳಿಮಠ, ಕೊಟ್ಟೂರೇಶ್ವರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ನೀಲಮ್ಮತಾಯಿ ಅಸುಂಡಿ, ಪ್ರವಚನಕಾರರಾದ ಚಂದ್ರಾಮಪ್ಪ ಕಣಗಾಲ, ತಿಪ್ಪಣ್ಣ ಶ್ಯಾವಿ ಅವರಿಂದ ಪುರಾಣ ಪ್ರವಚನ ನಡೆಯಲಿದೆ.
9 ದಿನಗಳ ಕಾಲ ವಿಶೇಷ ಪೂಜೆ: ಸೆ. 26ರಿಂದ ಅ. 5ರ ವರೆಗೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಲಲಿತಾ ಸಹಸ್ರನಾಮಾವಳಿ ಪಾರಾಯಣ, ದುರ್ಗಾಷ್ಟಮಿ, ನವದುರ್ಗೆಯರ ಪೂಜೆ, ಅನ್ನದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮ, ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಅ. 5ರಂದು ವಿಜಯದಶಮಿ, ಪ್ರವಚನ ಮಂಗಲ, ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.
ಬೆಳ್ಳಿ ಅಂಬಾರಿ: ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ದಸರಾ ಉತ್ಸವ ಸಮಿತಿ ವತಿಯಿಂದ ಅ. 5ರಂದು ಜಗದಂಬಾ ಹಾಗೂ ತುಳಜಾ ಭವಾನಿ ದೇವಸ್ಥಾನಗಳ ವತಿಯಿಂದ “ಶ್ರೀ ದೇವಿ ಪಾಲ್ಕಿ ಸೇವೆ’ ಹಾಗೂ ಬೆಳ್ಳಿ ಅಂಬಾರಿಯಲ್ಲಿ ಶ್ರೀದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುವುದು.