Advertisement

ಕಾಯಕದಲ್ಲಿ ನಿರತರಾಗಿ ವಿಚಾರ ಪ್ರಚುರಪಡಿಸಿದ ಶರಣರು

06:45 PM Apr 12, 2021 | Team Udayavani |

ಕಲಬುರಗಿ: 12ನೇ ಶತಮಾನದ ಶರಣರು ಕಾಯಕದಲ್ಲಿ ನಿರತರಾಗಿ ತಮ್ಮ ವಿಚಾರಗಳನ್ನು ಪ್ರಚುರಪಡಿಸಿದ್ದಾರೆ ಎಂದು ಕರ್ನಾಟಕ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ ಸಜ್ಜನ ಹೇಳಿದರು. ನಗರದ ಸಿದ್ದಲಿಂಗೇಶ್ವರ ಬುಕ್‌ ಮಾಲ್ ನಲ್ಲಿ ನಡೆದ “ಅಟ್ಟದ ಮೇಲೆ ಬೆಟ್ಟದಂತ ವಿಚಾರ’ ಕಾರ್ಯಕ್ರಮದಲ್ಲಿ ಡಾ.ಎಸ್‌.ಎಂ ಹಿರೇಮಠ ಅವರ ರಚಿಸಿರುವ ನಿಜಶರಣ ನಾಟಕ ಕುರಿತು ಮಾತನಾಡಿದ ಅವರು, ವಚನ ಚಳವಳಿಯ ಕಾಲಘಟ್ಟದಲ್ಲಿ ನಡೆದ ಎಲ್ಲ ವೈಚಾರಿಕ ಕ್ರಿಯೆಗಳಿಂದಾಗಿ ವಚನ ಉತ್ತರ ಕಾಲಘಟ್ಟದ ಅನೇಕ ಕವಿಗಳು ವಿದ್ವಜ್ಜನರು ಸ್ಫೂರ್ತಿಗೊಂಡು ಹಲವು ಕೃತಿಗಳನ್ನು ರಚನೆ ಮಾಡಿರುವುದು ಕಂಡುಬರುತ್ತದೆ.

Advertisement

ಹರಿಹರ ಭೀಮಕವಿಯ ಒಳಗೊಂಡಂತೆ ಹಲವು ಕವಿಗಳ ಕಥನಗಳು ಮಧ್ಯಕಾಲೀನ ಕನ್ನಡ ಸಾಹಿತ್ಯ ಕಾಲಘಟ್ಟದಲ್ಲಿ ರಚನೆಯಾದವು. ಈ ಬಗೆಯ ಕೃತಿಗಳ ಪ್ರಭಾವದಿಂದ ಆಧುನಿಕ ಸಂದರ್ಭದಲ್ಲಿ ಲಂಕೇಶರ ಸಂಕ್ರಾಂತಿ, ಚಂದ್ರಶೇಖರ್‌ ಕಂಬಾರ್‌ ಅವರ ಶಿವರಾತ್ರಿ, ಎಚ್‌. ಎಸ್‌ ಶಿವಪ್ರಕಾಶ್ರವರ ಮಹಾಚೈತ್ರ, ನಾಟಕಗಳು ವಚನಕಾರರ ಸ್ವರೂಪದಲ್ಲಿರುವ ಪ್ರಭುಶಂಕರ ಅವರ ಬೆರಗು ಕೃತಿಗಳು ವಚನ ಸಾಹಿತ್ಯವನ್ನು ಆಧರಿಸಿದೆ ಎಂದು ವಿವರಿಸಿದರು.

ಇದೇ ನೆಲೆಯಲ್ಲಿ ಪ್ರಖರ ವಚನಕಾರ ಅಂಬಿಗರ ಚೌಡಯ್ಯನ ವಚನಗಳು ಹಾಗೂ ಜೀವನವನ್ನಾಧರಿಸಿ ಹಿರೇಮಠ ಅವರು ನಿಜಶರಣ ಎಂಬ ನಾಟಕವನ್ನು ರಚಿಸಿದ್ದಾರೆ. ಪ್ರಸ್ತುತ ನಾಟಕದಲ್ಲಿ ಸಂವಾದದ ಸ್ವರೂಪದಲ್ಲಿ ಬಹುಮಟ್ಟಿಗೆ ಆತನ ವಚನಗಳೇ ಬಳಕೆಯಾಗಿದ್ದು ಕೃತಿಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂಬಿಗರ ಚೌಡಯ್ಯ ಓರ್ವ ಪ್ರಕಾರ ವಿಚಾರವಾದಿಯೂ ಸ್ವತಂತ್ರ ಚಿಂತಕರಾಗಿದ್ದು ಎಲ್ಲಾ ಸಂಗತಿಗಳು ಆತನ
ವಚನಗಳಲ್ಲಿ ಪ್ರತಿಬಿಂಬಿತವಾಗಿವೆ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ ಮೊದಲಾದ ವಚನಕಾರರು ತಮ್ಮದಾಗಿಸಿಕೊಂಡರೆ ಅಂಬಿಗರ ಚೌಡಯ್ಯ ತನ್ನ ಹೆಸರನ್ನೇ ಅಂಕಿತವಾಗಿ ಕೊಂಡಿದ್ದಾರೆ ಎಂದು ಹೇಳಿದರು.

ಸಿದ್ಧಲಿಂಗೇಶ್ವರ ಪ್ರಕಾಶನ ಮಾಲೀಕ ಬಸವರಾಜ ಕೊನೇಕ್‌ ಮಾತನಾಡಿ, ಈ ರೀತಿ ಕಾರ್ಯಕ್ರಮಗಳು ಪ್ರತಿ ತಿಂಗಳಿಗೆ ಎರಡು ಬಾರಿ ಹಮ್ಮಿಕೊಂಡಿದ್ದು ಇಲ್ಲಿ ಚರ್ಚೆಯಾದ ವಿಷಯವನ್ನು ಪುಸ್ತಕ ರೂಪದಲ್ಲಿ ದಾಖಲಿಸುವಂತಹ ಕೆಲಸ ಮಾಡಲಾಗುತ್ತಿದ್ದು, ಇದರ ಪ್ರಯೋಜನ ಎಲ್ಲರಿಗೂ ಆಗಲಿ ಎನ್ನುವ ಉದ್ದೇಶದಿಂದ ಇಂತಹ ಕೆಲಸಕ್ಕೆ ಕೈ ಹಾಕಲಾಗಿದೆ ಎಂದರು.

ಸಂಯೋಜಕರಾದ ಡಾ. ಶಿವರಾಜ್ ಪಾಟೀಲ್‌, ಡಾ.ಚಿ. ಸಿ.ನಿಂಗಣ್ಣ, ಪ್ರೊ. ಎಸ್‌.ಎಲ್ .ಪಾಟೀಲ್‌, ಪತ್ರಕರ್ತ ಶಿವರಂಜನ್‌ ಸತ್ಯಂಪೇಟೆ, ಡಾ. ಶರಣಮ್ಮ ಪಾಟೀಲ್‌, ಸುಬ್ಬರಾವ್ ಕುಲಕರ್ಣಿ, ವೆಂಕಣ್ಣ ದೊಣ್ಣೆ ಗೌಡರ, ಬಿ.ಎಸ್‌ ಮಾಲಿಪಾಟೀಲ್‌ ಇತರರು ಇದ್ದರು. ಇದೇ ಸಂದರ್ಭದಲ್ಲಿ ನಿಧನರಾದ ಹಿರಿಯ ಸಾಹಿತಿ ಪ್ರೊ.ಹೇಮಂತ್‌ ಕೊಲ್ಲಾಪುರ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯೊಂದಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಡಾ.ಚಿ. ಸಿ.ನಿಂಗಣ್ಣ ಸ್ವಾಗತಿಸಿದರು. ಡಾ.ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next