ಯಾದಗಿರಿ : ರಾಜ್ಯದಲ್ಲಿಂದು ಶರಣಬಸಪ್ಪಗೌಡ ದರ್ಶನಾಪುರ ಅವರ ಹೆಸರು ಅಜರಾಮರವಾಗಿ ಉಳಿಯುವಂತಾಗಲು ಶಹಾಪುರ ಮತಕ್ಷೇತ್ರದಲ್ಲಿ ಅವರು ಮಾಡಿದ ಅನೇಕ ಅಭಿವೃದ್ಧಿ ಕಾರ್ಯಗಳೇ ಕಾರಣವಾಗಿವೆ.
ಶಹಾಪುರ ಕ್ಷೇತ್ರಕ್ಕೆ ಶರಣಬಸಪ್ಪಗೌಡ ಅವರ ಕೊಡುಗೆ ಅಪಾರವಾಗಿದ್ದು, ಜನಮೆಚ್ಚಿದ ಶಾಸಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಗಿರಿ ಜಿಲ್ಲೆ ಎಂದೇ ಹೆಸರುವಾಸಿಯಾದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದರ್ಶನಾಪುರ ಎಂಬ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಅವರ ಮಗನಾಗಿ 1961 ಮಾ.03ರಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಜನಿಸಿದರು.
ಬಿಇ ಪದವಿ ಪಡೆದು ಅನೇಕ ವರ್ಷಗಳ ಕಾಲ ಸಿವಿಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶರಣಬಸಪ್ಪಗೌಡರು, ರಾಜಕೀಯದಲ್ಲಿ ಅಪಾರ ಹೆಸರು ಮಾಡಿದ ತಂದೆ ಬಾಪುಗೌಡರ ಉತ್ತಮ ಸಂಸ್ಕಾರ ಮತ್ತು ಅವರ ಮಾರ್ಗದರ್ಶನದಲ್ಲಿ ಬೆಳೆದರು. ತಂದೆಯ ನಿಧನದ ನಂತರ ಇಂಜಿನಿಯರ್ ವೃತ್ತಿ ಬಿಟ್ಟು ಜನರ ಕಷ್ಟದಲ್ಲಿ ಭಾಗಿಯಾಗುವ ಮೂಲಕ “ಜನಸೇವೆಯೇ ಜನಾರ್ದನನ ಸೇವೆ’ ಎಂಬುದನ್ನು ತಿಳಿದು ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು.
ಶಹಾಪುರ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು, 1994ರಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಅನೇಕ ಕಷ್ಟಗಳ ಮಧ್ಯೆಯೂ ತಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸ ಉಳಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಜನರ ನೋವು-ನಲಿವು, ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದ್ದರ ಪರಿಣಾಮ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. ಮಾನ್ಯ ಜೆ.ಎಚ್. ಪಟೇಲರ ಸರ್ಕಾರದಲ್ಲಿ ಇಂಧನ ಸಚಿವರಾಗಿ, ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕೇವಲ ಶಹಾಪುರ ಕ್ಷೇತ್ರವಲ್ಲ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದರಿಂದ ರಾಜಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿಕೊಂಡ ಧೀಮಂತ ನಾಯಕರೆನಿಸಿದ್ದಾರೆ.
ವಿಶೇಷವಾಗಿ ತವರು ಕ್ಷೇತ್ರ ಶಹಾಪುರ ಕ್ಷೇತ್ರಕ್ಕೆ ದರ್ಶನಾಪುರ ಅವರ ಕೊಡುಗೆ ಅಪಾರವಾಗಿದೆ. ಶಹಾಪುರ ನೂತನ ಬಸ್ ನಿಲ್ದಾಣ, ಶಹಾಪುರ ಪಟ್ಟಣಕ್ಕೆ ಶಾಶ್ವತ ಕುಡಿವ ನೀರಿನ ಯೋಜನೆಗಾಗಿ ಭೀಮಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲು ಸುಮಾರು 60 ಕೋಟಿ ರೂ. ಯೋಜನೆ, ಭೀಮರಾಯನ ಗುಡಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಮಹಾವಿದ್ಯಾಲಯ ಸ್ಥಾಪನೆ, ಹತ್ತಿಗೂಡುರದಲ್ಲಿ 220 ಕೆ.ವಿ ವಿದ್ಯುತ್ ಪರಿವರ್ತಕ ಘಟಕ ಸ್ಥಾಪನೆ, ಶಹಾಪುರದಲ್ಲಿ ಆಧುನಿಕ ಪದವಿ ಮಹಾವಿದ್ಯಾಲಯದ ಕಟ್ಟಡ ಮಂಜೂರಾತಿ, ಶಹಾಪುರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ, ಶಹಾಪುರ ಕ್ಷೇತ್ರದ ಕೆಂಭಾವಿ ಪುರಸಭೆಗೆ ಶಾಶ್ವತ ಕುಡಿವ ನೀರಿಗಾಗಿ ಕೆರೆ ನಿರ್ಮಾಣ ಮಾಡಲು ಸುಮಾರು 43 ಎಕರೆ ಸರ್ಕಾರಿ ಜಮೀನು ಮಂಜೂರಾತಿ, 10 ಕೋಟಿ ರೂ. ವೆಚ್ಚದಲ್ಲಿ ಕೆಂಭಾವಿಯಲ್ಲಿ μಲ್ಟರ್‌ಬೆಡ್ ನಿರ್ಮಾಣ, ಕೆಂಭಾವಿಯ ಉಕನಾಳ-ಶಹಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು, ಕೆಂಭಾವಿ- ನಾರಾಯಣಪುರ ರಸ್ತೆ ಅಭಿವೃದ್ಧಿ ಮೇಲ್ದರ್ಜೆಗೆ, ಶೈಕ್ಷಣಿಕವಾಗಿ ಕ್ಷೇತ್ರದ ಅನೇಕ ಶಾಲಾ-ಕಾಲೇಜುಗಳ ಮಂಜೂರಾತಿ, ನೂತನ ಹೆಚ್ಚುವರಿ ಕೋಣೆಗಳ ನಿರ್ಮಾಣ, ಕೆಂಭಾವಿಯ ನೂತನ ಬಾಲಕರ ಪ್ರೌಢಶಾಲೆ ನಿರ್ಮಾಣಕ್ಕೆ 2 ಕೋಟಿ ರೂ.ಮಂಜೂರು ಅಲ್ಲದೇ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಿದ್ದಾರೆ.
620 ಕೋಟಿ ರೂ. ಗಳಲ್ಲಿ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಮಂಜೂರಾತಿ ಆಗಿದ್ದು ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಇದರಿಂದ ಶಹಾಪುರ ಮತಕ್ಷೇತ್ರದ 13 ಹಳ್ಳಗಳು ನೀರಾವರಿಗೆ ಒಳಪಡುತ್ತವೆ. ಕ್ಷೇತ್ರದಲ್ಲಿ ಅನೇಕ ನೂತನ ಗ್ರಾಪಂಗಳ ಕಟ್ಟಡಕ್ಕೆ ಮಂಜೂರಾತಿ ಮಾಡಿಸಿದ್ದು, ವಿವಿಧ ವಸತಿ ಯೋಜನೆಗಳಡಿಯಲ್ಲಿ ಬಡವರಿಗೆ ಮನೆಗಳ ಮಂಜೂರಾತಿ ಮಾಡಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನ, ಅನೇಕ ಕಡೆಗಳಲ್ಲಿ ಶಾದಿ ಮಹಲ್, ಕೆರೆಗಳ ನಿರ್ಮಾಣ, ಕ್ಷೇತ್ರದ ಅನೇಕ ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ವೈದ್ಯಾಧಿ ಕಾರಿಗಳ ನೇಮಕ ಹೀಗೆ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತ ಕ್ಷೇತ್ರದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇತ್ತೀಚೆಗೆ ಕೋವಿಡ್ ಸಮಯದಲ್ಲಿ ಬೀದಿ ಪಾಲಾದ ಅದೆಷ್ಟೋ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರಲ್ಲದೇ ಅನೇಕ ಕುಟುಂಬಗಳಿಗೆ ಹೆಗಲು ಕೊಟ್ಟಿದ್ದಾರೆ .
ಗುಂಡುಭಟ್ಟ ಜೋಶಿ