ಧಾರವಾಡ: 2024 ರ ಜ. 13 ರಿಂದ 15 ರ ವರೆಗೆ ಮೂರು ದಿವಸಗಳ ಕಾಲ 2ನೆಯ ಸ್ವಾಭಿಮಾನಿ ಶರಣ ಮೇಳವನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಕ್ರಾಸ್ ಹತ್ತಿರದ ಹೂವನೂರು ಗ್ರಾಮದ ಹೊರವಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ವಾಭಿಮಾನಿ ಶರಣ ಮೇಳದ ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಶರಣ ಮೇಳದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಜ. 13 ರಂದು ಶರಣ ಮೇಳದ ಉದ್ಘಾಟನೆ, ಧರ್ಮಚಿಂತನಗೋಷ್ಠಿ, ಯುವಗೋಷ್ಠಿ, 14 ರಂದು ಸಮುದಾಯ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ಮಹಿಳಾ ಗೋಷ್ಠಿ, 15 ರಂದು ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತಿ, ಆಕರ್ಷಕ ಪಥ ಸಂಚಲನ ಜರುಗಲಿದೆ. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು
ಧರ್ಮಗುರು ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ ಸ್ವಾಭಿಮಾನಿ ಶರಣ ಮೇಳ ಜರುಗಲಿದ್ದು, ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿರುವ ಶರಣ ಮೇಳದ ಸಮ್ಮುಖವನ್ನು ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಬೆಳಗಾವಿ ಬಸವ ಮಂಟಪದ ಪೂಜ್ಯ ಪ್ರಭುಲಿಂಗ ಸ್ವಾಮೀಜಿ ವಹಿಸಿಕೊಳ್ಳಲಿದ್ದು, ಅಕ್ಕನಾಗಲಾಂಬಿಕಾ ಮಾತಾಜಿ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯ ಬಸವಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು, ಗಣ್ಯರು ಪಾಲ್ಗೊಳ್ಳುವರು ಎಂದರು.
ಲಿಂ. ಮಾತೆ ಮಹಾದೇವಿ ಅವರ ಸಂಕಲ್ಪ ಸಾಕಾರಗೊಳಿಸಲು ಬಸವ ಧರ್ಮ ಸಂಸ್ಥಾಪನಾ ದಿನದಂದು ಸ್ವಾಭಿಮಾನಿ ಶರಣ ಮೇಳ ಆಯೋಜಿಸಲು ನಿರ್ಧರಿಸಲಾಗಿದ್ದು, ಸ್ವಾಭಿಮಾನಿಗಳು, ತತ್ವನಿಷ್ಠರು ಹಾಗೂ ಲಿಂಗಾನಂದ ಸ್ವಾಮಿಗಳ ಮತ್ತು ಬಸವಾತ್ಮಜೆಯ ಕರುಳಿನ ಕುಡಿಗಳು ತನು ಮನ ಧನದಿಂದ ಸಹಕರಿಸಬೇಕೆಂದರು.
ಪತ್ರಿಕಾಗೋಷ್ಟಿಯಲ್ಲಿ ಅಶೋಕ್ ಶೀಲವಂತ. ಸೂರ್ಯಕಾಂತ ಶೀಲವoತ್ ಶಿವಯೋಗಿ ಕೋರಿ. ಆನಸೂಯ್ ಶೀಲವಂತ ಇದ್ದರು.