ಹೊಸದಿಲ್ಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಇಂಡಿಯಾ ಮೈತ್ರಿಕೂಟದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಕೊನೆಯ ಬಾರಿಗೆ ಭೇಟಿಯಾದ ವಿರೋಧ ಪಕ್ಷದ ಮೈತ್ರಿಕೂಟ ಇಂಡಿಯಾ ದ ಮುಂದಿನ ಯೋಜನೆ ಬಗ್ಗೆ ಚರ್ಚೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮುಂಬೈ ಸಭೆಯ ನಂತರ ವಿರೋಧ ಪಕ್ಷದ ಬಣ ಸಭೆ ನಡೆಸಿಲ್ಲ ಮತ್ತು ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಮುಂಬರುವ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮುಂದಾಗಿರುವ ಮೈತ್ರಿಕೂಟದ ಮುಂದಿನ ಹಾದಿಯ ಬಗ್ಗೆ ಮೂವರು ನಾಯಕರು ಚರ್ಚಿಸಿ, ಇಂಡಿಯಾ ಬ್ಲಾಕ್‌ನ ಮುಂದಿನ ಸಭೆಯ ಯೋಜನೆಗಳನ್ನು ಸಹ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್‌ನಲ್ಲಿ ಭೋಪಾಲ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಜಂಟಿ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಿದ ನಂತರ ಶುಕ್ರವಾರ ಪ್ರಮುಖ ನಾಯಕರ ಚರ್ಚೆಗಳು ನಡೆದಿವೆ.
‘ಸನಾತನ ಧರ್ಮ’ದ ವಿರುದ್ಧ ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆ ನಾಯಕರ ಹೇಳಿಕೆಗಳ ಬಗ್ಗೆ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರ ವಿರೋಧದ ನಂತರ ಸಭೆಯನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ವಿಪಕ್ಷದ ನಾಯಕರ ಮುಂದಿನ ಸಭೆಯನ್ನು ಪಶ್ಚಿಮ ಬಂಗಾಳದಲ್ಲಿ ನಡೆಸಬೇಕೆಂದು ಕೆಲವು ವಿರೋಧ ಪಕ್ಷದ ನಾಯಕರು ಸೂಚಿಸುತ್ತಿದ್ದಾರೆ.