ಶಹಾಪುರ: ವಿದ್ಯುತ್ ಕಣ್ಣಾ ಮುಚ್ಚಾಲೆ ಆಟದಿಂದ ಕೈಯಿಗೆ ಬಂದ ತುತ್ತು ಬಾಯಿಗೆ ಬರಲ್ಲಿಲ್ಲ ಎನ್ನುವಂತೆ ಬಾಳೆ ಬೆಳೆ ನೀರಿಲ್ಲದೆ ಬಿಸಿಲಿಗೆ ಒಣಗಿ ಸಂಪೂರ್ಣವಾಗಿ ಹಾಳಾಗಿದ್ದು, ರೈತ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ತಾಲೂಕಿನ ಕೊಳ್ಳೂರ (ಎಂ) ಗ್ರಾಮದ ರೈತ ವಿರೂಪಾಕ್ಷಯ್ಯ ಸ್ವಾಮಿ ಎಂಬುವರು ಅಂದಾಜು ನಾಲ್ಕು ಲಕ್ಷ ರೂ.ಸಾಲ ಮಾಡಿ ತನ್ನ 2.30 ಎಕರೆ ಜಮೀನಿನಲ್ಲಿ 3 ಸಾವಿರಕ್ಕೂ ಹೆಚ್ಚು ಬಾಳೆ ಸಸಿ ಹಚ್ಚಿದರು. ನಿತ್ಯ ಅವುಗಳನ್ನು ಪಾಲನೆ ಪೋಷಣೆ ಮಾಡುತ್ತ ಬಂದಿದ್ದರು. ಆದರೆ ಅಸಮರ್ಪಕ ವಿದ್ಯುತ್ ಸರಬರಾಜುನಿಂದ ಬೆಳೆಗೆ ನೀರು ಒದಗಿಸಲಾಗದೆ ಕಂಗಾಲಾಗಿದ್ದಾರೆ.
ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ನೀರು ಪೂರೈಸಲಾಗದೇ ಬಾಳೆ ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ರೈತನನ್ನು ಚಿಂತೆಗೀಡು ಮಾಡಿದೆ. ಕೃಷಿಯಲ್ಲಿಯೇ ಹೊಸದನ್ನು ಸಾಧಿಸಿ ಬದುಕಿನ ಬಂಡಿ ಸಾಗಿಸಬೇಕು. ಉತ್ತಮ ಬದುಕು ರೂಪಿಸಬೇಕು ಎಂಬ ಹಂಬಲದಿಂದ ಬಾಳೆ ಬೆಳೆಯಲು ಮುಂದಾಗಿದ್ದ ರೈತ, ಬೆಳೆದಿದ್ದ ಫಸಲು ಕೈ ಸೇರಲಿದೆ ಎನ್ನುವಷ್ಟರಲ್ಲಿ ಬೆಳೆಗೆ ನೀರಿನ ತೇವಾಂಶ ಕಡಿಮೆಯಾದ ಹಿನ್ನೆಲೆ ಬಾಡಿ ಹೋಗಿದೆ ಎನ್ನಲಾಗಿದೆ.
ಸರಿಯಾಗಿ ಕರೆಂಟ್ ಬಂದಿಲ್ರಿ. ಹಿಂಗಾಗಿ ನೀರು ಬಿಡ್ಲಾಕ್ ಕಷ್ಟ ಆಯಿತು. ನೀರಿನ ಕೊರತೆಯಿಂದ ಬೆಳೆ ಹಾನಿ ಆಯಿತು. ಕರೆಕ್ಟ್ ಟೈಂಗೆ ಬೆಳಗ್ಗೆ ಕರೆಂಟ್ ಇರ್ತಿದ್ರೆ ನೀರು ಬಿಡುತ್ತಿದ್ವಿ. ನೀರಿಲ್ದೆ ಬೆಳೆ ಒಣಗಿದೆ. ಸಾಲ ಹೇಗೆ ತೀರಿಸಬೇಕೆನ್ನೋದೆ ಚಿಂತೆಯಾಗಿದೆ. ಹೊಟ್ಟೆ ಬೇರೆ ನೋಡ್ಕೋಬೇಕು.
•
ವಿರುಪಾಕ್ಷಯ್ಯ ಸ್ವಾಮಿ,
ಬಾಳೆ ರೈತ
ಮಲ್ಲಿಕಾರ್ಜುನ ಮುದ್ನೂರ