ಕನ್ನಡದಲ್ಲಿ ಇಲ್ಲಿಯವರೆಗೆ ಟ್ರೆಡಿಷನಲ್ ಮತ್ತು ಮಾಡ್ರನ್ ಲುಕ್‌ಗಳಲ್ಲಿ, ಲವ್ಲಿ ಗರ್ಲ್ ಆಗಿ, ಹಲವು ಲೈವ್ಲಿ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ಶಾನ್ವಿ ಶ್ರೀವಾಸ್ತವ್ ಈಗ ಗ್ಯಾಂಗ್‌ಸ್ಟರ್ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ಯೋಜನೆಯಲ್ಲಿದ್ದಾರೆ. ಹೌದು, ಟ್ರೆಡಿಷನಲ್ ಮತ್ತು ಮಾಡ್ರನ್ ಎರಡೂ ಥರದ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಶಾನ್ವಿ, ಇದೇ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನವಾಗಿರುವ, ರಗಡ್ ಆಗಿರುವಂಥ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಅಂದಹಾಗೆ, ಸದ್ಯ ಶಾನ್ವಿ ಶ್ರೀವಾಸ್ತವ್ ಅಭಿನಯದ “ಕಸ್ತೂರಿ ಮಹಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಆ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದರ ಹಿಂದೆಯೇ ಶಾನ್ವಿ “ಬ್ಯಾಂಗ್’ ಎನ್ನುವ ಹೊಸಚಿತ್ರವನ್ನು ಒಪ್ಪಿಕೊಂಡಿದ್ದಾರೆ.
“ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರದ್ದು ಗ್ಯಾಂಗ್ ಸ್ಟರ್ ಪಾತ್ರವಂತೆ.
ಇನ್ನು “ಬ್ಯಾಂಗ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಶಾನ್ವಿ, “ಇಲ್ಲಿಯವರೆಗೆ ನಾನು ಮಾಡಿದ್ದ ಬಹುತೇಕ ಸಿನಿಮಾಗಳಲ್ಲಿ ಲವ್ಲಿ ಗರ್ಲ್ ಥರದ, ಹಾರರ್ ಶೇಡ್ ಇದ್ದ ಪಾತ್ರಗಳೇ ಹೆಚ್ಚಾಗಿದ್ದವು. ಆದ್ರೆ ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಫ್ ಆಗಿರುವಂಥ, ಒಂಥರಾ ರಗಡ್ ಕ್ಯಾರೆಕ್ಟರ್ ಸಿಕ್ಕಿದೆ. ನನ್ನ ಕ್ಯಾರೆಕ್ಟರ್‌ನಲ್ಲಿ ತುಂಬ ಸಸ್ಪೆನ್ಸ್ ಇದೆ. ಥ್ರಿಲ್ಲಿಂಗ್ ಆಗಿರುವಂಥ ಕಂಟೆಂಟ್ ಇದೆ. ಸಿನಿಮಾದ ಸಬ್ಜೆಕ್ಟ್ ಮತ್ತು ನನ್ನ ಕ್ಯಾರೆಕ್ಟರ್ ಎರಡೂ ಹೊಸಥರ ಇದ್ದಿದ್ದರಿಂದ “ಬ್ಯಾಂಗ್’ ಸಿನಿಮಾ ಒಪ್ಪಿಕೊಂಡೆ. ಇಲ್ಲಿಯವರೆಗೆ ಎಲ್ಲೂ ನೋಡಿರದಂಥ ಶಾನ್ವಿ ನಿಮಗೆ ಈ ಸಿನಿಮಾದಲ್ಲಿ ಕಾಣುತ್ತಾಳೆ’ ಎನ್ನುತ್ತಾರೆ.
ಇದನ್ನೂ ಓದಿ:ತಮಿಳು ಬೆಡಗಿ ಯಾಶಿಕಾ ಆನಂದ್ ವಿಶೇಷ ಫೋಟೋ ಗ್ಯಾಲರಿ
ಇನ್ನು “ಬ್ಯಾಂಗ್’ ಚಿತ್ರದ ಪಾತ್ರಕ್ಕಾಗಿ ಶಾನ್ವಿ ಒಂದಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. “ಇದರಲ್ಲಿ ನಾನು ಕೈಯಲ್ಲಿ ಗನ್ ಹಿಡಿದುಕೊಳ್ತೀನಿ, ನನಗಾಗಿ ಒಂದಷ್ಟು ಆ್ಯಕ್ಷನ್ ಸೀನ್ ಕೂಡ ಇದೆ. ಸ್ವಲ್ಪ ಸೀರಿಯಸ್ ಲುಕ್ ಇದೆ. ಹಾಗಾಗಿ ನನ್ನ ಕ್ಯಾರೆಕ್ಟರ್‌ಗೆ ಒಂದಷ್ಟು ಹೋಮ್ ವರ್ಕ್ ಬೇಕಾಗುತ್ತದೆ. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇಂಥದ್ದೊಂದು ಕ್ಯಾರೆಕ್ಟರ್ ಮಾಡ್ರಿರೋದಕ್ಕೆ ನಾನೂ ಕೂಡ ಎಕ್ಸೆ„ಟ್ ಆಗಿದ್ದೇನೆ. ಇದೇ ಫೆಬ್ರವರಿಯಿಂದ ನನ್ನ ಭಾಗದ ಶೂಟಿಂಗ್ ಶುರುವಾಗಲಿದೆ. ಈ ವರ್ಷದ ಮಧ್ಯ ಭಾಗದಲ್ಲಿ ಈ ಸಿನಿಮಾ ಸ್ಕ್ರೀನ್‌ಗೆ ಬರಬಹುದು’ ಎನ್ನುವುದು ಶಾನ್ವಿ ಮಾತು.
ಎರಡು ದಿನಗಳಲ್ಲಿ ನಡೆಯುವ ಸಸ್ಪೆನ್ಸ್ – ಥ್ರಿಲ್ಲರ್ ಘಟನೆಯ ಕಥಾಹಂದರ ಹೊಂದಿರುವ “ಬ್ಯಾಂಗ್’ ಚಿತ್ರ ಕೇವಲ ಏಳು – ಎಂಟು ಪಾತ್ರಗಳ ಸುತ್ತ ನಡೆಯಲಿದೆಯಂತೆ. ಸದ್ಯ ಚಿತ್ರದ ಮುಖ್ಯ ಪಾತ್ರಕ್ಕೆ ಶಾನ್ವಿ ಶ್ರೀವಾಸ್ತವ್ ಹೆಸರು ಅಂತಿಮವಾಗಿದ್ದು, ಚಿತ್ರದ ಉಳಿದ ಕಲಾವಿದರ ಹೆಸರು ಇನ್ನಷ್ಟೇ ಬಹಿರಂಗವಾಗಬೇಕಿದೆ. “ಯು.ಕೆ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಪೂಜಾ
ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ, ಜೊತೆಗೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವಿರುವ ಗಣೇಶ್ ಪರಶುರಾಮ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ
ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಈಗಾಗಲೇ ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಎರಡು ಹಂತದ ಚಿತ್ರೀಕರಣ ಮುಗಿಸಿರುವ “ಬ್ಯಾಂಗ್’ ಚಿತ್ರತಂಡ, ಫೆಬ್ರವರಿಯಲ್ಲಿ ಮಂಗಳೂರು ಸುತ್ತಮುತ್ತ ಮೂರನೇ ಹಂತದ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದೆ. ಒಟ್ಟಾರೆ ಶಾನ್ವಿ ಅವರ ಗ್ಯಾಂಗ್‌ಸ್ಟರ್ ಗೆಟಪ್ ನೋಡಬೇಕಾದರೆ ಇನ್ನೂ ಕೆಲ ತಿಂಗಳು ಕಾಯಬೇಕು.