Advertisement

ಶಾಂತಿಮೊಗರು ಸೇತುವೆ: 2 ವರ್ಷಗಳಾದರೂ ಪರಿಹಾರ ಬರಲೇ ಇಲ್ಲ !

05:43 PM Jul 07, 2017 | Karthik A |

ಸವಣೂರು: ಹಲವು ದಶಕಗಳ ಬಹುಬೇಡಿಕೆಯೊಂದು ಶಾಂತಿಮೊಗರು ಸೇತುವೆ ನಿರ್ಮಾಣದೊಂದಿಗೆ ಈಡೇರಿದೆ. ಆದರೆ ಸೇತುವೆ ನಿರ್ಮಾಣಕ್ಕಾಗಿ ಭೂಮಿ ನೀಡಿದವರಿಗೆ ಲೋಕೋಪಯೋಗಿ ಇಲಾಖೆ ಪರಿಹಾರ ನೀಡಲು ಮೀನ ಮೇಷ ಎಣಿಸುತ್ತಿದೆ. ಬೆಳಂದೂರು ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಕುಮಾರಧಾರಾ ನದಿಗೆ ಅಡ್ಡಲಾಗಿ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಕಂಪೆನಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ. 

Advertisement

ದೊರಕಿಲ್ಲ ಪರಿಹಾರ!
ಸೇತುವೆಯೇನೋ ಉದ್ಘಾಟನೆಯ ಸಂಭ್ರಮದಲ್ಲಿದೆ. ಆದರೆ ಸೇತುವೆ ಬಳಿಯ ಕೃಷಿಕರಾದ ಬಾಲಚಂದ್ರ ನೂಜಿ, ಮೋಹಿನಿ ಪಿ. ಶೇಣವ, ದಿನೇಶ್‌ ಶರವೂರು, ವಿಜಯ ರಾಮಣ್ಣ ಗೌಡ ಎಂಬವರು ತಮ್ಮ ಅಡಿಕೆ, ರಬ್ಬರ್‌ ಮರವಿದ್ದ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಟ್ಟಿದ್ದರು. ರಸ್ತೆ ನಿರ್ಮಾಣದ ವೇಳೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ 6 ತಿಂಗಳೊಳಗೆ ಸೆಂಟ್ಸ್‌ಗೆ 18 ಸಾವಿರ ರೂ. ಗಳಂತೆ ಪರಿಹಾರ ಪಾವತಿಸುವುದಾಗಿಯೂ ಹೇಳಿದ್ದರು. ಆದರೆ, ಈವರೆಗೂ ಭೂಮಿ ಕಳಕೊಂಡವರಿಗೆ ಪರಿಹಾರಧನ ದೊರಕಿಲ್ಲ ಎನ್ನುತ್ತಾರೆ ಸಂತ್ರಸ್ತರು.

ಪರಿಹಾರ ನೀಡಿ
ಸಾರ್ವಜನಿಕ ಕಾರ್ಯಕ್ಕೆ ತೊಂದರೆಯುಂಟುಮಾಡಬಾರದೆಂದು ನಾವು ಲೋಕೋಪಯೋಗಿ ಇಲಾಖೆಯವರು ಹೇಳಿದ ಕೂಡಲೇ ಕೃಷಿ ಭೂಮಿ ಬಿಟ್ಟುಕೊಟ್ಟಿದ್ದೇವೆ. 2 ವರ್ಷಗಳು ಕಳೆದರೂ ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ವಿತರಣೆಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸಂತ್ರಸ್ತರು. ಬಾಲಚಂದ್ರ ನೂಜಿ 46 ಸೆಂಟ್ಸ್‌, ಮೋಹಿನಿ ಪಿ. ಶೇಣವ 34 ಸೆಂಟ್ಸ್‌, ದಿನೇಶ್‌ ಶರವೂರು 15.5 ಸೆಂಟ್ಸ್‌, ವಿಜಯ ರಾಮಣ್ಣ ಗೌಡ – 27 ಸೆಂಟ್ಸ್‌ ಜಾಗ ಬಿಟ್ಟುಕೊಟ್ಟಿದ್ದಾರೆ. ಪರಿಹಾರ ಧನ ನೀಡದೆ ನಾವು ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಬಾಲಚಂದ್ರ ತಿಳಿಸಿದರು.

ಹೀಗಿದೆ ಸೇತುವೆ
ಸೇತುವೆ 9 ಪಿಲ್ಲರ್‌ಗಳನ್ನು ಹೊಂದಿದ್ದು, ಸುಮಾರು 220 ಮೀ. ಉದ್ದ, 12 ಮೀ. ಅಗಲ, 18 ಮೀ. ಎತ್ತರವಿದೆ. 1 ಮೀ. ಅಗಲದ ಫ‌ುಟ್‌ಪಾತ್‌ನ್ನು ಹೊಂದಿದೆ. ಕುದ್ಮಾರು ಗ್ರಾಮದ ಬರೆಪ್ಪಾಡಿ ಹಾಗೂ ಆಲಂಕಾರು ಗ್ರಾಮದ ಶರವೂರನ್ನು ಇದು ಸಂಪರ್ಕಿಸುತ್ತದೆ.

ತೆಪ್ಪ, ದೋಣಿಯಾನ ನೇಪಥ್ಯಕ್ಕೆ
ಶಾಂತಿಮೊಗರು ದೇವಸ್ಥಾನದ ಬಳಿ ಶರವೂರು ದಾಟಲು ಈ ಹಿಂದೆ ತೆಪ್ಪ ಹಾಗೂ ದೋಣಿಯ ವ್ಯವಸ್ಥೆಯಿತ್ತು. ಮಳೆಗಾಲದಲ್ಲಿ ಅದು ಅನಿವಾರ್ಯ. ಇದೀಗ ಸೇತುವೆ ನಿರ್ಮಾಣದೊಂದಿಗೆ ದೋಣಿ ವ್ಯವಸ್ಥೆ ನೇಪಥ್ಯಕ್ಕೆ ಸರಿದಿದೆ.

Advertisement

ಸೇತುವೆಯಿಂದ ಪ್ರಯೋಜನ
ಮೈಸೂರು, ಮಡಿಕೇರಿ, ಸುಳ್ಯ, ಬೆಳ್ಳಾರೆ, ಸವಣೂರು, ಕಾಣಿಯೂರು ಭಾಗದವರಿಗೆ  ಧರ್ಮಸ್ಥಳ, ಉಪ್ಪಿನಂಗಡಿ, ಕೊಟ್ಟಿಗೆಹಾರ, ಮೂಡಿಗೆರೆ ಸಂಪರ್ಕಿಸಲು ಬಹಳ ಹತ್ತಿರವಾಗಲಿದೆ. ಕುದ್ಮಾರು, ಕಾಣಿಯೂರು, ಸವಣೂರು ಭಾಗದ ಜನರು ನಾಡಕಚೇರಿ ಕಡಬವನ್ನು ಸಂಪರ್ಕಿಸಲು ಹಾಗೂ ಕಡಬ, ಆಲಂಕಾರು, ಶರವೂರು ಭಾಗದ ಜನರು ಸವಣೂರು, ಪುತ್ತೂರು ಸಂಪರ್ಕಿಸಲು ಅನುಕೂಲವಾಗಲಿದೆ. ಆಲಂಕಾರು, ಶರವೂರು ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರು ಸುತ್ತು ಬಳಸಿ ತಾಲೂಕು ಕೇಂದ್ರ ಪುತ್ತೂರನ್ನು ಸಂಪರ್ಕಿಸುವ ಅನಿವಾರ್ಯತೆ ತಪ್ಪಲಿದೆ.

ಬೆಳವಣಿಗೆಗೆ ಪೂರಕ
ಸವಣೂರು, ಕುದ್ಮಾರು, ಆಲಂಕಾರು ಭಾಗದ ಸರ್ವತೋಮುಖ ಬೆಳವಣಿಗೆಗೆ ಈ ಸೇತುವೆ ಪೂರಕವಾಗಲಿದೆ. ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕುದ್ಮಾರು ಗ್ರಾಮದ ಶಾಂತಿಮೊಗರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಹಾಗೂ ಕೂರ ಮಸೀದಿಗೆ ಭೇಟಿ ನೀಡುವವರಿಗೂ ಸಹಕಾರಿಯಾಗಲಿದೆ.

ಪರಿಹಾರದ ಕುರಿತಾಗಿ ಲೋಕೋಪಯೋಗಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಸಂಬಂಧ ಬಿಲ್‌ ಪಾವತಿಗೆ ಸರಕಾರಕ್ಕೆ ಸಲ್ಲಿಸಲಾಗಿದೆ. ಪರಿಹಾರ ಬಂದ ಕೂಡಲೇ ಭೂಮಿ ನೀಡಿದವರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

– ಪ್ರವೀಣ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next