Advertisement
ಎಚ್ಚರಿಸಿದರೂ ಲೆಕ್ಕಕ್ಕಿಲ್ಲಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಹಳ್ಳ, ಹೊಳೆಗಳ ಅಂಚಿನಲ್ಲಿ, ಸೇತುವೆಗಳ ಮಧ್ಯಭಾಗಗಳಲ್ಲಿ ನಿಂತು ಸೆಲ್ಫಿ ತೆಗೆಯುವ ಹುಚ್ಚಾಟದಿಂದಾಗಿ ಕೆಲವು ಯುವಕ – ಯುವತಿಯರು ತಮ್ಮ ಸಾವನ್ನು ತಾವೇ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಕಡಬ ಸಮೀಪದ ಹೊಸ್ಮಠದಲ್ಲಿ ಹಳೆಯ ಸೇತುವೆ ಮುಳುಗಿದಾಗ, ನೆಟ್ಟಣ ಸೇತುವೆಯ ಮೇಲೆ ನೆರೆ ನೀರು ನಿಂತಾಗ ಸೇತುವೆಯಲ್ಲಿ ಸೆಲ್ಫಿ ತೆಗಯುವ ಹುಚ್ಚು ಸಾಹಸಕ್ಕೆ ಇಳಿದವರನ್ನು ಸಾರ್ವಜನಿಕರೇ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆಗಳು ನಡೆದಿವೆ. ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಸ್ವಲ್ಪ ಯಾಮಾರಿದರೂ ನದಿ ನೀರಿನಲ್ಲಿ ಲೀನವಾಗುವ ಸಂಭವ ಇರುವಾಗ ಸೇತುವೆ, ಹೊಳೆಗಳ ಬಳಿ ರಕ್ಷಣೆಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ನೂತನ ಸೇತುವೆ ಸಂಪರ್ಕಕ್ಕೆ ಮುಕ್ತವಾದ ಬಳಿಕ ಪುತ್ತೂರಿಗೆ ಸಂಪರ್ಕ ಬೆಳೆಸಲು ಕಡಬ, ಬಲ್ಯ, ಕುಂತೂರು ಹಾಗೂ ಆಲಂಕಾರು ವ್ಯಾಪ್ತಿಯ ಜನತೆಗೆ ಇದು ಬಹಳಷ್ಟು ಹತ್ತಿರದ ಮಾರ್ಗವಾಗಿದೆ. ಈ ಭಾಗದಲ್ಲಿ ವಾಹನಗಳ ದಟ್ಟನೆ ಅಷ್ಟೊಂದಿಲ್ಲ. ಜನಸಂಚಾರವೂ ಕಡಿಮೆಯಿರುವ ಕಾರಣ ಸೆಲ್ಫಿ ಪ್ರಿಯರಿಗೆ ಈ ಸೇತುವೆ ಸ್ವರ್ಗದಂತಾಗಿದೆ. ಸಂಜೆ ವೇಳೆ, ಸೆಲ್ಫಿ ತೆಗೆಯುವ ಹುಚ್ಚು ಸಾಹಸಕ್ಕೆ ಕೆಲವರು ಮುಂದಾಗುತ್ತಿದ್ದಾರೆ. ಬೈಕ್ ಸವಾರರು, ಪ್ರೇಮಿಗಳು ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚು. ಎಂಟು ತಿಂಗಳ ಹಿಂದೆ ಈ ಸೇತುವೆಯ ಅಡಿಯಲ್ಲಿ ಸ್ನಾನಕ್ಕಿಳಿದ ಕಡಬ ಮೂಲದ ಸಹೋದರರು ಹಾಗೂ ಇಲ್ಲಿಂದ 300 ಮೀ. ಕೆಳಗೆ ಕಕ್ವೆ ಎಂಬಲ್ಲಿ ಸ್ನಾನಕ್ಕಿಳಿದ ಯುವಕ ನೀರುಪಾಲಾಗಿದ್ದಾರೆ. ಈಗ ಮಳೆಗಾಲ. ಹೊಳೆಯಲ್ಲಿ ಜಾಸ್ತಿ ನೀರು ಇರುವುದರಿಂದ ಯುವಜನರ ಸೆಲ್ಫಿ ಹುಚ್ಚು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಕೆಲವು ವರ್ಷಗಳ ಹಿಂದೆ ಕಡಬಕ್ಕೆ ಸಿಮೆಂಟು ಹೊತ್ತು ತರುತ್ತಿದ್ದ ಲಾರಿಯಲ್ಲಿದ್ದ ನಾಲ್ವರು, ಭದ್ರತಾ ಸಿಬಂದಿಯ ಎಚ್ಚರಿಕೆಯನ್ನು ಉಪೇಕ್ಷಿಸಿ, ಸೇತುವೆ ದಾಟಿ ನೀರು ಪಾಲಾಗಿದ್ದರು. ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಅಂತಹುದರಲ್ಲಿ ಸೇತುವೆ ಮೇಲೆ ಅಲ್ಪಸ್ವಲ್ಪ ನೀರಿದೆ ಎಂದು ಸೇತುವೆ ಮಧ್ಯೆ ಹೋಗಿ ಫೋಟೋ, ಸೆಲ್ಫಿ ತೆಗೆಯುವವರ ಸಂಖ್ಯೆ ಹೆಚ್ಚಾಗಿದೆ. ಪ್ರವಾಹ ಬಂದು ಸೇತುವೆ ಮುಳುಗಿದಾಗ ಹೊಸ್ಮಠದಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬಂದಿಯನ್ನು ನೇಮಿಸಲಾಗುತ್ತದೆ. ಆದರೆ. ಅವರ ಮಾತು ಕೇಳದೆ ಸೆಲ್ಫಿ ತೆಗೆಯಲು ಹೋಗಿ ಹಲವರು ಅಪಾಯಕ್ಕೆ ಸಿಲುಕಿದ ನಿದರ್ಶನಗಳಿವೆ.
Advertisement
ಸದಾನಂದ ಆಲಂಕಾರು