Advertisement
ಒಂದು ದಿನ ತಮಾಷೆಯ ಕಥಾ ವಸ್ತುವಿದ್ದ ಪಾಠವೊಂದನ್ನು ಪಿಯುಸಿಯ ಮಕ್ಕಳಿಗೆ ಬೋಧಿಸುತ್ತಿದ್ದೆ. ತರಗತಿಯಲ್ಲಿದ್ದ ಎಲ್ಲರೂ ಕನ್ನಡದ ಕಂದಮ್ಮಗಳೇ ಆಗಿದ್ದರಿಂದ ನಡುನಡುವೆ ಕನ್ನಡದಲ್ಲೇ ಹಾಸ್ಯ ಮಾಡುತ್ತಿದ್ದೆ. ಎಲ್ಲರೂ ಗಹಗಹಿಸಿ ನಗುತ್ತಾ ಪಾಠ ಕೇಳುತ್ತಿದ್ದರೂ, ಕೊನೆಯ ಬೆಂಚಿನ ತುದಿಯಲ್ಲಿ ಕುಳಿತಿದ್ದ ಒಬ್ಬ ವಿದ್ಯಾರ್ಥಿ ಮಾತ್ರ ತನ್ನಷ್ಟಕ್ಕೇ ತಾನು ಏನೋ ಬರೆಯುತ್ತಾ ಕುಳಿತಿದ್ದ. ಒಂದಷ್ಟು ಹೊತ್ತು ಗಮನಿಸಿ ಸುಮ್ಮನಾದೆನಾದರೂ ಅವನ ಗಮನ ಕೊಂಚವೂ ಪಾಠದ ಮೇಲೆ ಇಲ್ಲ ಎಂಬುದು ಅರ್ಥವಾಗಿ, ಅವನನ್ನು ಕರೆದೆ. ಅವನ ಹೆಸರು ಗೊತ್ತಿರಲಿಲ್ಲ. ಅವನ ಪಕ್ಕದಲ್ಲಿರುವವನು “ಮೇಡಂ ನಿನ್ನೇ ಕರೀತೀರೋದು ಕಣೋ, ಎದ್ದೇಳ್ಳೋ’ ಎಂದು ತಿವಿದ. ದಡಬಡಿಸಿ ಎದ್ದ ಹುಡುಗನ ನಿರ್ಲಕ್ಷ್ಯ ಕಂಡು ನನಗೆ ಪಿತ್ತ ನೆತ್ತಿಗೇರಿತು. ಬೈಯ್ಯಬೇಕೆಂದರೆ ಇಂಗ್ಲಿಷಿಗಿಂತ ಕನ್ನಡವೇ ಮೊದಲು ನಾಲಗೆಯ ಮೇಲಾಡುವುದು ತಾನೇ? ಪೂರ್ತಿಯಾಗಿ ಕಂಗೆಟ್ಟ ಸ್ಥಿತಿಗೆ ತಲುಪಿದ ಆ ಹುಡುಗ ತಡವರಿಸಿ ಏನೋ ಹೇಳಿದ.ಬೈಯ್ಯುವುದನ್ನು ನಿಲ್ಲಿಸಿ, “ಏನೋ ಅದು?’ ಅಂದೆ. “ಮೇಡಂ, ಐ ಕ್ಯಾನ್ ನಾಟ್ ಅಂಡರ್‌ಸ್ಟಾಂಡ್ ಕನ್ನಡ’ ಅಂದ. ಮೊದಲೇ ಸಿಟ್ಟಲ್ಲಿದ್ದ ನಾನು, ಓಹೋ ಈ ಧಿಮಾಕು ಬೇರೆ ಅಂದುಕೊಂಡು, “ಆರ್ ಯು ಫ್ರಂ ಇಂಗ್ಲೆಂಡ್?’ ಎಂದು ರೇಗಿದೆ. ಅವನು ಮುಗ್ಧ ಮುಖಭಾವದೊಂದಿಗೆ ನುಡಿದ; “ನೋ ಮೇಡಂ, ಐ ಆ್ಯಮ್ ಫ್ರಂ ಸೌದಿ’! ನಿಬ್ಬೆರಗಾಗುವ ಸರದಿ ನನ್ನದಾಯಿತು.
Related Articles
Advertisement
ಆಡಿದ ಮಾತುಗಳನ್ನು ಹಿಂದೆಗೆದುಕೊಳ್ಳಲಾಗುವುದಿಲ್ಲವಲ್ಲ! ಆದರೆ, ಕೆಲವು ಸಂದರ್ಭಗಳಲ್ಲಿ ನಮ್ಮ ಮಾತು ವಿದ್ಯಾರ್ಥಿಗಳನ್ನು ಅತಿಮೀರಿ ಘಾಸಿಗೊಳಿಸಬಹುದು. ಶರೀರಕ್ಕಾದ ಗಾಯ ಮಾಗುತ್ತದೆ. ಆದರೆ, ಮನಸ್ಸಿಗಾದ ಗಾಯ ಸುಲಭವಾಗಿ ಮಾಗುವುದಿಲ್ಲ. ನಮ್ಮ ಕಣ್ಣಿಗೆ ಅದು ಕಾಣಿಸುವುದೂ ಇಲ್ಲ. ಅದಕ್ಕೂ ಮಿಗಿಲಾಗಿ ವಿದ್ಯಾರ್ಥಿಗಳನ್ನು ನಾವು ಅಕ್ಷರಶಃ ನೋಯಿಸಿದ್ದೇ ಆದಲ್ಲಿ ಅವರಿಗಿಂತ ದುಪ್ಪಟ್ಟು ನಾವೇ ನೊಂದಿರುತ್ತೇವೆ.
ನಿಜ, ವಿದ್ಯಾರ್ಥಿಗಳು ಪ್ರತಿದಿನ ನಮಗೆ ಬಾಯಿಬಿಟ್ಟು ಹೇಳದಿದ್ದರೂ ನಮ್ಮ ಪ್ರತಿಯೊಂದು ಸ್ಫೂರ್ತಿದಾಯಕ ಮಾತು ಅವರ ಹೃದಯದಲ್ಲಿ ಅಚ್ಚಳಿಯದೆ ಸುಂದರ ಚಿತ್ರವಾಗಿ ಉಳಿದುಬಿಡುತ್ತದೆ. ಪ್ರಪಂಚದ ದೃಷ್ಟಿಯಲ್ಲಿ ನಾವು ಕೇವಲ ಶಿಕ್ಷಕರಾಗಿರಬಹುದು. ಆದರೆ, ನಮ್ಮ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನಾವು ಪ್ರಮುಖರೇ ಆಗಿರುತ್ತೇವೆ. ಅವರಲ್ಲಿ ಹುದುಗಿರಬಹುದಾದ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಿ, ಅವರೊಳಗಿರಬಹುದಾದ ಭಯ - ಆತಂಕಗಳನ್ನು ದೂರವಾಗಿಸಿ, ಬದುಕನ್ನು, ಬಾಳುವ ರೀತಿಯನ್ನು ಕಲಿಸುವವರು ಶಿಕ್ಷಕರೇ ಆಗಿರುತ್ತೇವೆ.
ಶಿಕ್ಷಿಸುವ ಮೊದಲು ನಮಗೆ ನೆನಪಿರಬೇಕಾದುದಿಷ್ಟೇ: ನಾವು ಆಡುವ ಪ್ರತಿಯೊಂದು ಮಾತು, ನಮ್ಮ ಮುಖಭಾವ ಅಥವಾ ನಮ್ಮ ನಡತೆ ವಿದ್ಯಾರ್ಥಿಗಳಿಗೆ ತಮ್ಮತನವನ್ನು ಅರಿಯುವಲ್ಲಿ ನೆರವಾಗುತ್ತವೆ, ಇಲ್ಲವೇ ಅಡ್ಡಿಯಾಗುತ್ತವೆ. ತಮ್ಮ ನಡವಳಿಕೆಯ ಮೂಲಕ ಮಾತಿಗೂ ಮೀರಿದ ಸಂದೇಶಗಳನ್ನು ನಾವು ವಿದ್ಯಾರ್ಥಿಗಳಿಗೆ ತಲುಪಿಸಿರುತ್ತೇವೆ. ಅಂದಮೇಲೆ, ಶಿಕ್ಷಿಸುವ ಮುನ್ನ ಯೋಚಿಸುವುದು ಅತ್ಯಗತ್ಯ, ಅಲ್ಲವೇ?
ನನ್ನನ್ನು ಕಾಡುವ ಒಬ್ಬ ರಾಮಾಚಾರಿ ಕಥೆಎಚ್.ಎಸ್. ವೆಂಕಟೇಶ ಮೂರ್ತಿ, ಹಿರಿಯ ಕವಿ
ನಾನು ಆಗಷ್ಟೇ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಾಪಕನಾಗಿ ಸೇರಿದ್ದೆ. ಹೊಸ ಅಧ್ಯಾಪಕರೆಂದರೆ, ವಿದ್ಯಾರ್ಥಿಗಳಿಗೆ ಹೆದರಿಕೆಯೇ ಇರುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಗಲಾಟೆ ಮಾಡುತ್ತಾರೆ. ಆಗಷ್ಟೇ ಪಿ.ಯು. ತರಗತಿಗಳಿಗೆ ಅಡ್ಮಿಷನ್ ಆಗಿತ್ತು. ಹುಡುಗರ ಪರಿಚಯ ನಮಗೆ, ನಮ್ಮ ಪರಿಚಯ ಹುಡುಗರಿಗೆ ಇರಲಿಲ್ಲ. ಒಂದು ದಿನ ನಾನು ಕ್ಲಾಸ್ ಮಾಡುತ್ತಿದ್ದೆ. ಒಬ್ಬ ಹುಡುಗ ಸ್ವಲ್ಪ ತಡವಾಗಿ ಬಂದ. ನಾನು ಅವನನ್ನು ತರಗತಿಯೊಳಗೆ ಸೇರಿಸಲೇ ಇಲ್ಲ. ತರಗತಿ ಮುಗಿಸಿ ಹೋಗುವಾಗ ಅವನು ಕಾರಿಡಾರ್‌ನಲ್ಲಿ ನಿಂತಿದ್ದ. ನನಗೂ ಸ್ವಲ್ಪ ಕೋಪ ಬಂತು. “ಏನಪ್ಪಾ, ಕ್ಲಾಸ್‌ಗೆ ಇಷ್ಟು ಲೇಟಾಗಿ ಬರೋದು? ನನ್ನ ಮುಂದೆ ಇಂಥವೆಲ್ಲಾ ನಡೆಯೋದಿಲ್ಲ, ಗೊತ್ತಿರಲಿ’ ಎಂದೆ. ಆ ಹುಡುಗ, ಹೆದರಿಕೊಳ್ಳಲೇ ಇಲ್ಲ. “ಸಾರ್, ನೀವು ಹೊಸಬರು. ಅದಕ್ಕೆ ನನ್ನ ಪರಿಚಯ ಆಗಿಲ್ಲಾ ಅನ್ನಿಸ್ತಿದೆ. ನಾನ್ಯಾರು ಗೊತ್ತಾ ಸಾರ್?’ ಎಂದ. ನನಗೆ ಆಶ್ಚರ್ಯ! ಅರೇ, ಇವನ್ಯಾರು ಅಂದುಕೊಳ್ಳುತ್ತಾ, “ಯಾರಪ್ಪಾ ನೀನು?’ ಅಂತ ಕೇಳಿದೆ. “ಸಾರ್, ನಾನು ರಾಮಾಚಾರಿ’ ಅಂದ. ಆಗಷ್ಟೇ ಪುಟ್ಟಣ್ಣ ಕಣಗಾಲ್ “ರಾಮಾಚಾರಿ’ ಸಿನಿಮಾ ಬಿಡುಗಡೆಯಾಗಿತ್ತು. ಆಗ ನಾನೂ ತಮಾಷೆಯಾಗಿ, “ನಿನಗೆ ನಾನ್ಯಾರೂಂತ ಗೊತ್ತಾಗಿಲ್ವಾ? ನಾನು ಚಾಮಯ್ಯ ಮೇಷ್ಟ್ರು ಕಣೋ’ ಅಂದೆ. ತಡವಾಗಿ ಬರುವವರನ್ನು, ಗಲಾಟೆ ಮಾಡುವವರನ್ನು, ಕ್ಲಾಸ್ ಕೇಳದ ಮಕ್ಕಳನ್ನು ನಾವು ಕೆಟ್ಟವರೆಂದು ತಿಳಿದಿರುತ್ತೇವೆ. ಆದರೆ, ಎಲ್ಲರೂ ಹಾಗಿರುವುದಿಲ್ಲ. ತುಂಟಾಟಿಕೆಯ ವಯಸ್ಸಿನಲ್ಲಿ ಹಾಗೆಲ್ಲಾ ಮಾಡ್ತಾರೆ. ಹಾnಂ, ಆಮೇಲೆ ಒಮ್ಮೆ ನಾನು ಅಮೆರಿಕಕ್ಕೆ ಹೋದಾಗ ನನಗೆ ಒಂದು ಫೋನ್ ಬಂದಿತ್ತು. ಆ ಕಡೆಯಿಂದ, “ಸಾರ್ ರಾಮಾಚಾರಿ ಮಾತಾಡ್ತಾ ಇದ್ದೀನಿ. ನಿಮ್ಮನ್ನು ಭೇಟಿ ಆಗಬೇಕಿತ್ತು. ಎಲ್ಲಿದ್ದೀರಿ? ಅಡ್ರೆಸ್ ಕೊಡಿ’ ಅಂದ. ಮಾರನೇ ದಿನ ಒಂದು ದೊಡ್ಡ ಕಾರಿನಲ್ಲಿ ನಾನಿದ್ದಲ್ಲಿಗೆ ಬಂದು, ಗಿಫ್ಟ್ ಕೊಟ್ಟು ಹೋದ. ಈಗ ನಮ್ಮ ರಾಮಾಚಾರಿ ಅಮೆರಿಕದಲ್ಲಿ ಎಂಜಿನಿಯರ್ ಅಂತ ತಿಳಿದು ಬಹಳ ಸಂತೋಷವಾಯ್ತು. ಇವತ್ತಿಗೂ ಆ ಹುಡುಗ ನನಗೆ ರಾಮಾಚಾರಿಯೇ. ಅವನ ನಿಜ ಹೆಸರೇನಂಥ ಈಗಲೂ ಗೊತ್ತಿಲ್ಲ ನನಗೆ. ಉಂಗುರ ಸಿಕ್ಕಾಗ ದುಷ್ಯಂತ ದುಃಖೀಸಿದ್ದ!
ಕಾಡಿಗೆ ಬೇಟೆಗೆಂದು ಬಂದ ದುಷ್ಯಂತ ಮಹಾರಾಜ, ಕಣ್ವರ ಸಾಕುಮಗಳಾದ ಶಕುಂತಲೆಯನ್ನು ನೋಡಿ ಮೋಹಿಸುತ್ತಾನೆ. ದುಷ್ಯಂತ-ಶಕುಂತಲೆಯರು ಪ್ರೇಮಿಸಿ, ಅರಣ್ಯದಲ್ಲಿಯೇ ಗಾಂಧರ್ವ ವಿವಾಹವಾಗುತ್ತಾರೆ. ರಾಜ್ಯಕ್ಕೆ ಮರಳುವಾಗ ಶಕುಂತಲೆಗೆ ದುಷ್ಯಂತ ಉಂಗುರವೊಂದನ್ನು ಕೊಡುತ್ತಾನೆ. ಆದರೆ, ಶಕುಂತಲೆ ನದಿಯಲ್ಲಿ ಆ ಉಂಗುರವನ್ನು ಕಳೆದುಕೊಳ್ಳುತ್ತಾಳೆ. ದುಷ್ಯಂತನನ್ನು ಹುಡುಕಿಕೊಂಡು ಬರುವ ಶಕುಂತಲೆಯೆ ಗುರುತು ಅವನಿಗೆ ಸಿಗುವುದೇ ಇಲ್ಲ. ನಮ್ಮಿಬ್ಬರ ಪ್ರೀತಿಗೆ ಸಾಕ್ಷಿಯೇನಾದರೂ ಇದೆಯೇ ಎಂದು ಕೇಳುತ್ತಾನೆ. ಆದರೆ, ಪ್ರೇಮದ ಕುರುಹಾಗಿದ್ದ ಉಂಗುರ ಕಳೆದು ಹೋಗಿರುತ್ತದೆ. ದುಷ್ಯಂತ ಆಕೆಯನ್ನು ಒಪ್ಪಿಕೊಳ್ಳದೆ ಅವಮಾನಿಸುತ್ತಾನೆ. ಮುಂದೊಂದು ದಿನ ಬೆಸ್ತನ ಮೂಲಕ ಆ ಉಂಗುರ ದುಷ್ಯಂತನಿಗೆ ಸಿಕ್ಕಿದಾಗ, ಹಳೆಯದೆಲ್ಲ ನೆನಪಾಗುತ್ತದೆ. ಶಕುಂತಲೆಯನ್ನು ಅವಮಾನಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಕಾಳಿದಾಸನ ಕಾಲದಲ್ಲೂ…
ಮಹಾಕವಿ ಕಾಳಿದಾಸ ಭೋಜರಾಜನ ಆಸ್ಥಾನ ಕವಿಯಾಗಿದ್ದ. ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಅದನ್ನು ಸಹಿಸದ ಕೆಲವರು, ಕಾಳಿದಾಸ ವೇಶ್ಯೆಯ ಸಂಗದಲ್ಲಿದ್ದಾನೆಂದು ಭೋಜರಾಜನಿಗೆ ದೂರು ಹೇಳಿದರು. ಅದನ್ನು ನಿಜವೆಂದು ನಂಬಿ, ಕುಪಿತನಾದ ಭೋಜರಾಜ ಕಾಳಿದಾಸನನ್ನು ರಾಜ್ಯದಿಂದ ಗಡಿಪಾರು ಮಾಡಿದ. ಮುಂದೆ ಆ ಆರೋಪ ಸುಳ್ಳೆಂದು ಗೊತ್ತಾದಾಗ ರಾಜನಿಗೆ ಬಹಳ ಪಶ್ಚಾತಾಪವಾಯ್ತು. ವಿಶ್ವ ಮರೆಯದ ಆ ಮೂರು ಘಟನೆಗಳು
1. ಕಳಿಂಗ ಯುದ್ಧದಲ್ಲಿನ ಜೀವಹಾನಿಯನ್ನು ನೆನೆದು, ಸಾಮ್ರಾಟ್ ಅಶೋಕ “ಮತ್ತೆಂದೂ ಯುದ್ಧ ಕೈಗೊಳ್ಳಲಾರೆ’ ಎಂದು ತೀರ್ಮಾನಿಸುತ್ತಾನೆ. ಇದು ಕೂಡ ಪಶ್ಚಾತ್ತಾಪದ ಫಲಿತಾಂಶವೇ!
2. ಡೈನಾಮೈಟ್ ಕಂಡುಹಿಡಿದ ವಿಜ್ಞಾನಿ ಆಲ್ಫೆಡ್ ನೋಬೆಲ್, ಮನುಕುಲಕ್ಕೆ ಮಾರಕವಾದ ಸಂಶೋಧನೆ ಕೈಗೊಂಡೇ ಎಂಬ ಪಶ್ಚಾತ್ತಾಪದಿಂದಲೇ ನೊಬೆಲ್ ಗೌರವ ಸ್ಥಾಪಿಸಿದ!
3. ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಜಪಾನ್ ಮೇಲೆ ಅಣುಬಾಂಬ್ ಹಾಕಿದ್ದ ಅಮೆರಿಕದ ಪೈಲೈಟ್ “ಎನೋಲಾ ಗೇ’ಗೂ ಪಶ್ಚಾತ್ತಾಪ ಕಾಡಿತ್ತು. “ಓಹ್ ದೇವರೇ, ನಾವೆಂಥ ಕೆಲಸ ಮಾಡಿದೆವು’ ಎಂದು ವ್ಯಥೆಪಟ್ಟಿದ್ದರು. ಕೇಳಿದ್ದು ಸುಳ್ಳಾಗಬಹುದೂ…
ಈ ಪಂಚತಂತ್ರ ಕಥೆ ನಿಮ್ಮ ಕಿವಿಗೂ ಬಿದ್ದಿರುತ್ತೆ. ತೊಟ್ಟಿಲೊಳಗೆ ಪುಟ್ಟ ಕಂದಮ್ಮನ ಬಿಟ್ಟು ಗಂಗಮ್ಮ ನೀರಿಗೆ ಹೊರಡುತ್ತಾಳೆ. ಹಾಗೆ ಹೊರಡುವಾಗ, ಮುಂಗುಸಿಗೆ ಮಗುವನ್ನು ಕಾಯಲು ಸೂಚಿಸುತ್ತಾಳೆ. ಆಗ ತೊಟ್ಟಿಲ ಬಳಿಯೊಂದು ಹಾವು ಬರುತ್ತೆ. ಮುಂಗುಸಿ ಅದರೊಂದಿಗೆ ಕಾದಾಡಿ, ದುಷ್ಟ ಹಾವಿನಿಂದ ಮಗುವಿನ ಪ್ರಾಣ ಕಾಪಾಡುತ್ತೆ. ಗಂಗಮ್ಮ ನೀರಿನಿಂದ ವಾಪಸು ಬರಲು, ಮುಂಗುಸಿಯ ಬಾಯಿಯಲ್ಲಿ ರಕ್ತ ಅಂಟಿರುವುದನ್ನು ನೋಡುತ್ತಾಳೆ. ಮಗುವಿಗೆ ಈ ಮುಂಗುಸಿ ಏನೋ ಆಘಾತ ಮಾಡಿದೆಯೆಂದು ತಿಳಿದು, ಮಡಕೆಯನ್ನೇ ಮುಂಗಿಸಿಯ ಮೇಲೆ ಹೊತ್ತು ಹಾಕಿ, ಸಾಯಿಸುತ್ತಾಳೆ. ಆದರೆ, ಮನೆಯೊಳಗೆ ಕಾಲಿಟ್ಟಾಗ ತೊಟ್ಟಿಲಲ್ಲಿ ಕಂದಮ್ಮ ಕಿಲಕಿಲ ನಗುತ್ತಿರುತ್ತದೆ. “ಅಯ್ಯೋ ಎಂಥ ಕೆಲ್ಸ ಮಾಡಿದೆ’ ಅಂತ ಗಂಗಮ್ಮ ಪಶ್ಚಾತ್ತಾಪ ಪಡುತ್ತಾಳೆ. ಆರತಿ ಪಟ್ರಮೆ, ತುಮಕೂರು