Advertisement

ಮೇಲ್ಮನೆಗೆ ಐವರ ನಾಮನಿರ್ದೇಶನ; ಯಾರಿವರು ಬುಡಕಟ್ಟು ಜನಾಂಗದ ಶಾಂತಾರಾಮ ಸಿದ್ದಿ ಗೊತ್ತಾ?

07:39 PM Jul 22, 2020 | Nagendra Trasi |

ಬೆಂಗಳೂರು: ಕರ್ನಾಟಕ ರಾಜ್ಯ ಮೇಲ್ಮನೆಗೆ ಆಫ್ರಿಕನ್ ಬುಡಕಟ್ಟಿನ ಸಿದ್ದಿ ಜನಾಂಗದ ಶಾಂತಾರಾಮ ಸಿದ್ದಿ ಸೇರಿದಂತೆ ಒಟ್ಟು ಐವರನ್ನು ನಾಮನಿರ್ದೇಶನ ಮಾಡಲಾಗಿದೆ.

Advertisement

ವಿಧಾನಪರಿಷತ್ ಗೆ ಎಚ್.ವಿಶ್ವನಾಥ್, ಸಿಪಿ ಯೋಗೇಶ್ವರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಪ್ರೊ.ತಳವಾರ ಸಾಬಣ್ಣ, ಶಾಂತಾರಾಮ್ ಸಿದ್ದಿ ಅವರನ್ನು ಆಯ್ಕೆ ಮಾಡಲಾಗಿದೆ.

ಐವರು ಜನರಲ್ಲಿ ಈ ಬಾರಿ ವಿಶೇಷವಾಗಿ ಗಮನಸೆಳೆದ ವ್ಯಕ್ತಿ ಶಾಂತಾರಾಮ ಸಿದ್ದಿ. ಯಾಕೆಂದರೆ ಇವರು ಉತ್ತರಕನ್ನಡ ಜಿಲ್ಲೆಯ ಶಿರಸಿ-ಯಲ್ಲಾಪುರದ ಹಿತ್ನಳ್ಳಿಯವರು. ಇವರ ಕಲ್ಲು-ಮುಳ್ಳಿನ ಬದುಕಿನ ಹಾದಿ ಕುರಿತ ಕಿರುಚಿತ್ರಣ ಇಲ್ಲಿದೆ.

ಈ ಸಿದ್ದಿ ಬುಡಕಟ್ಟು ಜನಾಂಗ ಇದೆಯಲ್ಲ ಮೂಲತಃ ಇವರು ಆಫ್ರಿಕನ್. ಇವರು ಭಾರತದಲ್ಲಿ ದೀರ್ಘಕಾಲದಿಂದ ನೆಲೆಸಿದ್ದಾರೆ. ಆದರೆ ನಮ್ಮ ದೇಶದ ಸಮಾಜದ ಮುಖ್ಯವಾಹಿನಿ ಜತೆ ಬೆರೆಯುವಲ್ಲಿ ಈ ಜನಾಂಗ ವಿಫಲವಾಗಿದೆ. ಈ ಜನಾಂಗವನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಹಗಲು, ರಾತ್ರಿ ಶ್ರಮಿಸಲಾಗಿತ್ತು. ಅದರ ಪ್ರತಿಫಲ ಎಂಬಂತೆ ಸಿದ್ದಿ ಜನಾಂಗದ ಮೊದಲ ಪದವೀಧರರಾಗಿ ಹೊರಹೊಮ್ಮಿದವರು ಶಾಂತಾರಾಮ್!

ಶಾಂತಾರಾಮ ಅವರ ಶಾಲಾ ದಿನಚರಿ:
1970ರ ದಶಕದಲ್ಲಿ ಯಾರೊಬ್ಬರಿಗೂ ಸಿದ್ದಿ ಬುಡಕಟ್ಟು ಜನಾಂಗದ ಜೀವನದ ಬಗ್ಗೆ ತಿಳಿದಿರಲಿಲ್ಲವಾಗಿತ್ತು. ನಾವು ಅಕ್ಷರಶಃ ಕಾಡುಜನರೇ ಆಗಿಹೋಗಿದ್ದೇವು. ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಅಲೆಮಾರಿ ಬದುಕು ನಮ್ಮದಾಗಿತ್ತು. ಹಾಗೇ ನೋಡಿದರೆ ನಾನು ತುಂಬಾ ಅದೃಷ್ಟವಂತ ಯಾಕೆಂದರೆ ನನ್ನ ಪೋಷಕರು ಶಾಲೆಗೆ ಸೇರಿಸಿದ್ದು. ಅಷ್ಟೇ ಅಲ್ಲ ನಾನು ಶಾಲೆಯಲ್ಲಿ ಟಾಪರ್ ಆಗಿದ್ದೆ. ಆದರೆ 7ನೇ ತರಗತಿ ನಂತರ ನನ್ನ ವಿದ್ಯಾಭ್ಯಾಸ ನಿಲ್ಲಿಸಲು ಪೋಷಕರು ನಿರ್ಧರಿಸಿದ್ದರು. ಆವಾಗ ದೇವರು ನನ್ನ ರಕ್ಷಿಸಿಬಿಟ್ಟಿದ್ದ! ಕಲಿಕೆಯಲ್ಲಿನ ನನ್ನ ಆಸಕ್ತಿ ಗಮನಿಸಿದ ನನ್ನ ಹಳ್ಳಿಯ ಜನರು 150 ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದರು. ನಂತರ ನನ್ನ ಸಮೀಪದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದ್ದರು. ಹೀಗೆ ಅಂಕೋಲಾದಲ್ಲಿ ನನ್ನ ಉನ್ನತ ಶಿಕ್ಷಣಾಭ್ಯಾಸ ನಡೆದಿತ್ತು ಎಂಬುದಾಗಿ ಶಾಂತಾರಾಮ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Advertisement

ನಾನು ಉತ್ತಮವಾಗಿಯೇ ಕಲಿಯುತ್ತಿದ್ದೆ. ಆದರೆ ನಾನು ನನ್ನೆಲ್ಲಾ ಕ್ಲಾಸ್ ಮೇಟ್ ಗಳು ನನ್ನ ದೂರ ಇಟ್ಟುಬಿಟ್ಟಿದ್ದರು. ಅದಕ್ಕೆ ಕಾರಣ ನಾನು ಎಲ್ಲರಿಗಿಂತ ಭಿನ್ನವಾಗಿದ್ದೆ! ದೊಡ್ಡವರು ಕೂಡಾ ನನ್ನ ದುರುಗುಟ್ಟಿ ನೋಡೋದು, ಕೀಟಲೆ ಮಾಡೋದು, ನಗುತ್ತಿದ್ದರು. ಅವೆಲ್ಲಕ್ಕಿಂತ ಹೆಚ್ಚಾಗಿ ನನ್ನ ಗುಂಗುರು ಕೂದಲಿನ ಜತೆ ಆಟವಾಡುತ್ತಿದ್ದರು! ರಸ್ತೆಯಲ್ಲಿ ನಡೆದಾಡೋದೆ ನನಗೆ ಹಿಂಸೆ ಎನಿಸುತ್ತಿತ್ತು. ಆದರೆ ನನ್ನೊಳಗಿನ ಒತ್ತಾಸೆ ಅವುಗಳನ್ನೆಲ್ಲಾ ಸಹಿಸಿಕೊಂಡು ಮುನ್ನಡೆಯುವಂತೆ ಮಾಡಿತ್ತು. ಆ ನಿಟ್ಟಿನಲ್ಲಿಯೇ ನನಗೆ ಹೆಮ್ಮೆ ಇದೆ..ಇಡೀ ಸಿದ್ದ ಜನಾಂಗದಲ್ಲಿಯೇ ಪದವಿ ಪಡೆದ ಮೊದಲ ವ್ಯಕ್ತಿ ನಾನಾಗಿದ್ದೇನೆ! ಎಂದು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ ಶಾಂತಾರಾಮ್…

ನಿನ್ನೊಬ್ಬನ ಪ್ರಶ್ನೆಯಲ್ಲ…ಉಳಿದ ಸಿದ್ದಿಗಳಿಗಾಗಿ ಏನು ಮಾಡುತ್ತಿ?
ಅಂದು ಬಿಎ ಎಕಾನಾಮಿಕ್ಸ್ ನಲ್ಲಿ ಪದವಿ ಗಳಿಸುವುದು ಅಂದರೆ ಇಂದಿನ ದಿನಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದಕ್ಕಿಂತಲೂ ಹೆಚ್ಚಿನ ಮೌಲ್ಯದ್ದಾಗಿತ್ತು. ನನಗೆ ಹಲವಾರು ಉದ್ಯೋಗದ ಆಫರ್ ಕೂಡಾ ಬಂದಿತ್ತು. ಆದರೆ ನನ್ನ ಮಾರ್ಗದರ್ಶಕ, ಹಿರಿಯರು ಆಗಿದ್ದ ಪ್ರಕಾಶ್ ಕಾಮತ್ ಅವರು ಒಂದು ಸರಳ ಪ್ರಶ್ನೆಯನ್ನು ಮುಂದಿಟ್ಟುಬಿಟ್ಟಿದ್ದರು! ನಿನಗೆ ಇಂದು ಒಳ್ಳೆ ಉದ್ಯೋಗವೇನೊ ಸಿಗುತ್ತದೆ. ಇದರಿಂದ ಐಶಾರಾಮಿ ಜೀವನ ನಡೆಸಬಹುದು. ಆದರೆ ಉಳಿದ ಸಿದ್ದಿಗಳ ಜೀವನದ ಭವಿಷ್ಯ ಏನು? ಅವರ ಭವಿಷ್ಯ ಕೂಡಾ ಈ ಕತ್ತಲ ಮರಗಳ ನಡುವೆ ಹಾಗೆಯೇ ಇರಬೇಕಾ? ಅವರು ಕೂಡಾ ಮೇಲೆ ಬರಬೇಕಲ್ಲವೇ? ಹೀಗೆ ಅವರಾಡಿತ ಮಾತುಗಳು ನನ್ನ ಜೀವನದ ಬದುಕಿನ ದಿಕ್ಕನ್ನೇ ಬದಲಿಸಿತ್ತು ಎನ್ನುತ್ತಾರೆ ಶಾಂತಾರಾಮ್.

ನಂತರ ನಾನು ನನ್ನ ಯಲ್ಲಾಪುರ ಸಮೀಪದ ಹಿತ್ನಳ್ಳಿಗೆ ವಾಪಸ್ ಆಗಿದ್ದೆ. ನನ್ನ ಕೆಲವು ಗೆಳೆಯರ ನೆರವಿನೊಂದಿಗೆ ನಾನು ಶಿಕ್ಷಣ ಪಡೆಯಲಾರದ ಬುಡಕಟ್ಟು (ಸಿದ್ದಿ, ಗೌಳಿ, ಲಂಬಾಣಿ, ಇತರರು) ಜನರಿಗಾಗಿ ಹಾಸ್ಟೆಲ್ ಆರಂಭಿಸಿದ್ದೆ. ನಾನೇ ಕುಕ್ (ಅಡುಗೆ), ವಾರ್ಡನ್ ಹಾಗೂ ಮ್ಯಾನೇಜರ್ ಆಗಿದ್ದೆ! ಆದರೆ ಹಾಸ್ಟೆಲ್ ನಲ್ಲಿ ಮಕ್ಕಳು ಇರುವುದು ಸುಲಭದ ಮಾತಾಗಿರಲಿಲ್ಲವಾಗಿತ್ತು. ನಾವು ಅವರ ಪೋಷಕರ ಬಳಿ ಅಂಗಲಾಚಿ ಬೇಡಿಕೊಂಡಿದ್ದೇವು! ಕೊನೆಗೂ ನಾವು ಅದರಲ್ಲಿ ಯಶಸ್ಸು ಕಂಡೆವು. ಆರಂಭದಲ್ಲಿ ಕೇವಲ ಇಬ್ಬರು ಮಾತ್ರ ಹಾಸ್ಟೆಲ್ ಸೇರಿದ್ದರು. ಇಂದು ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ನೂರಾರು ಬುಡಕಟ್ಟು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿದ್ದಾರೆ!

ಸಾಕಾರಗೊಂಡ ದೊಡ್ಡ ಕನಸು!
ಹೌದು ನಾನು ಇದಕ್ಕಿಂತಲೂ ದೊಡ್ಡದನ್ನು ಸಾಧಿಸಬೇಕೆಂಬ ತುಡಿತ ಉಂಟಾಗಿತ್ತು. ಅದಕ್ಕಾಗಿ ವನವಾಸಿ ಕಲ್ಯಾಣ್ ಸಂಘಕ್ಕೆ ಸೇರ್ಪಡೆಗೊಂಡಿದ್ದೆ. ಇದೊಂದು ರಾಷ್ಟ್ರ ಮಟ್ಟದ ಸಂಸ್ಥೆಯಾಗಿತ್ತು. ಇದು ಬುಡಕಟ್ಟು ಜನರ ಅಭಿವೃದ್ದಿಗಾಗಿ ಜನ್ಮತಳೆದ ಸಂಸ್ಥೆಯಾಗಿತ್ತು. ಹೀಗೆ ನಾನು ದೇಶದ ವಿವಿಧ ಭಾಗಗಳಿಗೆ ಸಂಚರಿಸಿದ್ದೆ, ಮೇಘಾಲಯ, ಗುಜರಾತ್, ಅಂಡಮಾನ್ ಸೇರಿದಂತೆ ಹಲವು ರಾಜ್ಯ, ದೇಶಕ್ಕೆ ಭೇಟಿ ನೀಡಿದ್ದೆ. ಅಲ್ಲಿ ವಿವಿಧ ಬುಡಕಟ್ಟು ಜನರ ಸಂಸ್ಕೃತಿ, ಜೀವನ ಶೈಲಿಯನ್ನು ಕಂಡಿದ್ದೆ. ಆದರೆ ಎಲ್ಲಾ ಬುಡಕಟ್ಟು ಜನರಲ್ಲಿನ ಸಾಮಾನ್ಯ ವಿಚಾರವೇನೆಂದರೆ ಅದು ಸಮಾಜದಿಂದ ಪ್ರತ್ಯೇಕವಾಗಿ ಉಳಿದಿರುವುದು! ಅಂದು ನನಗೆ ಜ್ಞಾನೋದಯವಾಗಿತ್ತು..ಬುಡಕಟ್ಟು ಜನರನ್ನು ಮೇಲಕ್ಕೆತ್ತಲು ದೊಡ್ಡ ಸಾಧನೆ ಏನು ಬೇಕಾಗಿಲ್ಲ ಅಂತ. ಇದಕ್ಕೆ ಬೇಕಾಗಿರುವುದು ಬುಡಕಟ್ಟು ಜನಾಂಗ ಮತ್ತು ಇತರ ಜನರ ನಡುವೆ ಸಂಪರ್ಕ ಸೇತುವೆ ನಿರ್ಮಿಸುವುದಷ್ಟೇ ಆಗಿತ್ತು! ಅದು ಕೊನೆಗೂ ಸಾಕಾರಗೊಂಡಿದೆ ಎಂಬ ಸಾರ್ಥಕ ಭಾವ ಶಾಂತಾರಾಮ ಸಿದ್ದಿಯವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.