ಅಹ್ಮದಾಬಾದ್ : ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿರುವ ಗುಜರಾತ್‌ನಲ್ಲಿ ಇದೀಗ ಪ್ರಮುಖ ತೃತೀಯ ರಂಗವೊಂದು ರೂಪುಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ.
ಕಾಂಗ್ರೆಸ್ ಬಂಡುಕೋರ ಶಂಕರ್ ಸಿಂಗ್ ವಘೇಲಾ ಅವರು ಇಂದು ಮಂಗಳವಾರ ತನ್ನ ಬೆಂಬಲಿಗರು ಹುಟ್ಟು ಹಾಕಿರುವ ಜನ ವಿಕಲ್ಪ ಎಂಬ ಹೆಸರಿನ ರಾಜಕೀಯ ಪಕ್ಷವನ್ನು ತಾನು ಸೇರಿರುವುದಾಗಿ ಪ್ರಕಟಿಸಿದ್ದಾರೆ.
“ಗುಜರಾತ್‌ನಲ್ಲಿ ಯಾವುದೇ ಪರ್ಯಾಯ ರಾಜಕೀಯ ಶಕ್ತಿ ಕೆಲಸ ಮಾಡದು ಎಂಬುದು ಕೇವಲ ಒಂದು ಮಿಥ್ಯೆ’ ಎಂದು 77ರ ಹರೆಯದ ಹಿರಿಯ ನಾಯಕ ವಘೇಲಾ ಅವರು ಕಿಕ್ಕಿರಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಗುಜರಾತ್‌ನ ಈ ಮೂರನೇ ರಂಗವು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ತನ್ನೊಂದಿಗೆ ಹೆಸರು ನೋಂದಾಯಿಸಿಕೊಳ್ಳುವ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುವುದು ಎಂದು ವಘೇಲಾ ಹೇಳಿದರು.
ಗುಜರಾತ್ ಜನರು ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಬೇಸತ್ತು ಹೋಗಿದ್ದಾರೆ; ಹಾಗಾಗಿ ಅವರು ಪರ್ಯಾಯ ಶಕ್ತಿಯನ್ನು ಹೊಂದಲು ಕಾತರದಿಂದ ಇದ್ದಾರೆ ಎಂದು ವಘೇಲಾ ಹೇಳಿದರು.
ವಘೇಲಾ ಅವರು ಕಾಂಗ್ರೆಸ್ ತಮ್ಮನ್ನು ಉಚ್ಚಾಟಿಸುವ ಒಂದು ದಿನ ಮೊದಲು ಗುಜರಾತ್ ವಿಧಾನಸಭೆಯಲ್ಲಿನ ತಮ್ಮ ವಿಪಕ್ಷ ನಾಯಕನ ಹುದ್ದೆಗೆ ಕಳೆದ ಜು.24ರಂದು ರಾಜೀನಾಮೆ ನೀಡಿ ಹೊರ ಬಂದಿದ್ದರು. ವಘೇಲಾ ಅವರ ರಾಜೀನಾಮೆಯಿಂದ ಪಕ್ಷದಲ್ಲಿ ಬಂಡಾಯ ಉಂಟಾಗಿ ಇನ್ನೂ ಏಳು ಮಂದಿ ಕೈ ಶಾಸಕರು ಉಚ್ಚಾಟನೆಗೊಂಡಿದ್ದರು.