ನಟ ಕಂ ನಿರ್ದೇಶಕ ದಿ. ಶಂಕರನಾಗ್ ಅವರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವ ಯುವ ಟೆಕ್ಕಿಗಳ ಗುಂಪೊಂದು ವಾರಾಂತ್ಯದಲ್ಲಿ ಮತ್ತು ಬಿಡುವು ಸಿಕ್ಕಾಗ ಒಂದಷ್ಟು ಸಿನಿಮಾ ಸಂಬಂಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇನ್ನು ತಮ್ಮ ತಂಡಕ್ಕೆ “ಟೀಮ್ ಶಂಕರನಾಗ್’ ಎಂದು ಹೆಸರಿಟ್ಟಿರುವ ಈ ಯುವಕರು, ಕಳೆದ ಕೆಲ ವರ್ಷಗಳಿಂದ ಶಂಕರನಾಗ್ ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸುತ್ತಾ ಬಂದಿದ್ದಾರೆ.
ಈ ಬಾರಿ ಶಂಕರನಾಗ್ ಅವರ ಜನ್ಮದಿನದ ಪ್ರಯುಕ್ತ, ನ. 9ರಂದು ಈ ತಂಡ ಶಂಕರನಾಗ್ ಅವರನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ತಾವೇ ನಿರ್ಮಿಸಿರುವ “ಕೌರ್ಯ’ ಚಿತ್ರದ ಲಿರಿಕಲ್ ವೀಡಿಯೋ ಹಾಡನ್ನು ಬಿಡುಗಡೆಗೊಳಿಸಿದೆ. ಇದೇ ವೇಳೆ “ಸಾಂಗ್ಲಿಯಾನ’ ಚಿತ್ರದಲ್ಲಿ ಶಂಕರನಾಗ್ ಅವರ ಪೊಲೀಸ್ ಗೆಟಪ್‌ನಲ್ಲಿ ಸಿದ್ಧಪಡಿಸಿದ್ದ 150 ಕೆ.ಜಿ ತೂಕದ ಕೇಕ್ ಅನ್ನು ಚಿತ್ರರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ಇನ್ನು ಯುವ ಟೆಕ್ಕಿಗಳ ತಂಡದ ಸಾರಥ್ಯವನ್ನು ವಹಿಸಿರುವ ಅನಿಲ್ ರಾಜಪ್ಪ, “”ಕೌರ್ಯ’ ಅನ್ನೋ ಪದವನ್ನ ಸಂಸ್ಕೃತ ಮತ್ತು ರಷ್ಯನ್ ಭಾಷೆಯಿಂದ ತೆಗೆದುಕೊಂಡಿದ್ದೇವೆ. ಐದು ಪಾತ್ರಗಳ ಸುತ್ತ “ಕೌರ್ಯ’ ಚಿತ್ರ ಸಾಗುತ್ತದೆ. ಇದೊಂದು ಆಕ್ಷನ್,ಥ್ರಿಲ್ಲರ್, ಸೆಸ್ಪನ್ಸ್ ಕಥಾಹಂದರ ಹೊಂದಿರುವ ಚಿತ್ರ. ಅಪರಾಧ ಹಾಗೂ ತನಿಖೆ ಕುರಿತ ಅಂಶವೊಂದು ಚಿತ್ರದಲ್ಲಿದೆ. ಈಗಾಗಲೇ ಶೇಕಡ 70ರಷ್ಟು ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರೇಕ್ಷಕರ ಮುಂದೆ ತರುವ ಆಲೋಚನೆ ಇದೆ’ ಎಂದು ಮಾಹಿತಿ ನೀಡಿದರು.
ಇನ್ನು “ಕೌರ್ಯ’ ಚಿತ್ರದಲ್ಲಿ ನವೀನ್ ತೀರ್ಥಹಳ್ಳಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಶಶಾಂಕ್, ಡಾ.ಲೀಲಾ ಮೋಹನ್, ನೈನಾ, ಅನಿಲ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶಂಕರನಾಗ್ ಅವರ “ಮಿಂಚಿನ ಓಟ’ ಚಿತ್ರದ ನಂತರ ರಮೇಶ್ ಭಟ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮನ್‌ದೀಪ್ ರಾಯ್, ಶೋಭರಾಜ್, ಪ್ರಶಾಂತ್ ಕದಂ, ಕೈಫ್, ಕುಶಾಲ್ ಇತರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅನಿಲ್ ರಾಜಪ್ಪ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹರ್ಷಿತ್ ಸಾಹಿತ್ಯದ ಐದು ಹಾಡುಗಳಿಗೆ ವಿನೋಧ್-ಶ್ರೀಸುಧಾಂಶು ಸಂಗೀತ ನೀಡಿದ್ದಾರೆ. ಉಗಾಂಡ ಮೂಲದ ಪೌಲ್ ಛಾಯಾಗ್ರಹಣ ಚಿತ್ರದಲ್ಲಿದೆ. ದುರ್ಗಪ್ರಸಾದ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಕಾರ್ಯದರ್ಶಿ ಬಾ.ಮ.ಹರೀಶ್, ಲಹರಿ ವೇಲು, ನರಸಿಂಹಲು ಮುಂತಾದವರು “ಕೌರ್ಯ’ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. ಮಂಜುನಾಥ್, ಡಾ.ಅರವಿಂದ್ ಶ್ರೀನಿವಾಸ್ ಮತ್ತು ಆದಿತ್ಯ ಫಿಲಿಂಸ್ ಬಂಡವಾಳ ಹೂಡಿ “ಕೌರ್ಯ’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.