ರಾಣಿಬೆನ್ನೂರು: ವಾಣಿಜ್ಯನಗರಿ ಹಾಗೂ ಬೀಜೋತ್ಪಾದನೆಗೆ ದೇಶದಲ್ಲೇ ಹೆಸರುವಾಸಿಯಾದ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲೀಗ ಲೋಕಸಭೆ ಚುನಾವಣೆ ಮತದಾನೋತ್ತರ ಲೆಕ್ಕಾಚಾರ ಜೋರಾಗಿದೆ.
ಮತದಾನ ಪೂರ್ವ ಕ್ಷೇತ್ರದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಶಾಸಕ ಆರ್. ಶಂಕರ್ ನಡೆ, ಮತದಾನ ನಂತರವೂ ಕುತೂಹಲ ಉಳಿಸಿಕೊಂಡಿದೆ. ಆರ್. ಶಂಕರ್ ನಡೆ ಕ್ಷೇತ್ರದಲ್ಲಿ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ಕೌತುಕ ಹೆಚ್ಚಾಗಿದೆ. ಪಕ್ಷೇತರ ಶಾಸಕರಾಗಿರುವ ಆರ್. ಶಂಕರ್ ಬಹಿರಂಗವಾಗಿ ಯಾವ ಪಕ್ಷಕ್ಕೂ ಬೆಂಬಲ ಸೂಚಿಸಿರಲಿಲ್ಲ. ಕೊನೆಗೆ ಅವರ ಬಹಳಷ್ಟು ಅಭಿಮಾನಿಗಳು ಬಿಜೆಪಿ ಹಾಗೂ ಕಾಂಗ್ರೆಸ್ ಕಡೆ ಹಂಚಿ ಹೋಗಿದ್ದರು. ಹೀಗಾಗಿ ಆರ್. ಶಂಕರ್ ಪ್ರಭಾವಿತ ಮತಗಳು ಯಾವ ಪಕ್ಷದ ಕಡೆ ಹೆಚ್ಚು ವಾಲಿರಬಹುದು ಎಂಬುದು ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಾಸಕ ಆರ್. ಶಂಕರ್ ಮೊದಲಿನಿಂದಲೂ ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ ಅವರನ್ನು ವಿರೋಧಿಸುತ್ತ ಬಂದಿರುವುದರಿಂದ ಅವರ ಪ್ರಭಾವಿತ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಹೋಗಿರಬಹುದು ಎಂದು ಕೆಲವರು ಲೆಕ್ಕಾಚಾರ ಹಾಕಿದರೆ, ಮತ್ತೆ ಕೆಲವರು ಆರ್. ಶಂಕರ್ ಮತಗಳನ್ನು ಕೆ.ಬಿ. ಕೋಳಿವಾಡ ದೊಡ್ಡ ಮಟ್ಟದಲ್ಲಿ ಸೆಳೆದು ಡಿ.ಆರ್. ಪಾಟೀಲ ಪೆಟ್ಟಿಗೆಗೆ ಹಾಕಿಸಿದ್ದಾರೆ ಎನ್ನುತ್ತಿದ್ದಾರೆ.
ಕ್ಷೇತ್ರದಲ್ಲಿರುವ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಕೆ.ಬಿ. ಕೋಳಿವಾಡ, ರುಕ್ಮೀಣಿ ಸಾಹುಕಾರ ಹಾಗೂ ಜೆಡಿಎಸ್ ಮುಖಂಡ ಶ್ರೀಪಾದ ಸಾಹುಕಾರ ಎಲ್ಲರೂ ರಡ್ಡಿ ಲಿಂಗಾಯತ ಸಮುದಾಯದವರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಅವರ ಸಂಬಂಧಿಕರೂ ಆಗಿದ್ದಾರೆ. ಹೀಗಾಗಿ ಈ ಬಾರಿ ಎಲ್ಲರೂ ಡಿ.ಆರ್. ಪಾಟೀಲ ಅವರ ಗೆಲುವಿಗೆ ಹೆಚ್ಚಿನ ಪ್ರಯತ್ನ ಪಟ್ಟಿದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಾಗಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ವಾದ.
Advertisement
ನೇರ ಪೈಪೋಟಿ ಏರ್ಪಟ್ಟಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ತಮ್ಮದೇ ಪಕ್ಷಕ್ಕೆ ಕ್ಷೇತ್ರದಲ್ಲಿ ಮುನ್ನಡೆಯಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಹಳ್ಳಿ, ನಗರದಗಲ್ಲಿ ಗಲ್ಲಿಗಳಲ್ಲಿ ‘ಈ ಬಾರಿ ಯಾರು ಗೆಲ್ತಾರೆ?’ ಎಂಬ ಪ್ರಶ್ನೆಗಿಂತ ‘ಶಾಸಕ ಆರ್. ಶಂಕರ್ ಮತ ಯಾವ ಕಡೆ ಹೋದ್ವು?’ ಎಂಬ ಪ್ರಶ್ನೆಯೇ ಹೆಚ್ಚು ಕೇಳಿ ಬರುತ್ತಿದೆ. ಆರ್. ಶಂಕರ್ ಮತಗಳು ಬಿಜೆಪಿಗೆ ಹೆಚ್ಚು ಹೋಗಿವೆ ಎಂದು ಹೇಳಿದರೆ ಮತ್ತೆ ಕೆಲವರು ಕಾಂಗ್ರೆಸ್‌ಗೆ ಹೋಗಿವೆ ಎನ್ನುತ್ತಿದ್ದು ಕ್ಷೇತ್ರದ ಫಲಿತಾಂಶ ಭಾರಿ ಕುತೂಹಲ ಕೆರಳಿಸಿದೆ.
Related Articles
Advertisement
ಆರ್. ಶಂಕರ್ ಅವರ ತಟಸ್ಥ ಧೋರಣೆಯಿಂದ ಬಿಜೆಪಿಗೆ ಹೆಚ್ಚು ಲಾಭವಾಗಿದೆ. ಅವರ ಮತಗಳು ಬಿಜೆಪಿ ಕಡೆ ವಾಲಿವೆ. ನಗರದಲ್ಲಂತೂ ಹೆಚ್ಚು ಮತಗಳು ಬಿಜೆಪಿಗೆ ಬಿದ್ದಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ಮೋದಿ ಪ್ರಭಾವಿತರಾಗಿದ್ದು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆಯಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರ ಅಂಬೋಣ.
ಈ ನಡುವೆ ಒಂದಿಷ್ಟು ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆದಿದೆ. ನಗರದಲ್ಲಿ ಹೆಚ್ಚು ಜನ ಬಿಜೆಪಿಯನ್ನು ಬೆಂಬಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಜನ ಹೆಚ್ಚು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆರ್. ಶಂಕರ್ ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದ್ದರಿಂದ ಅವರ ಪ್ರಭಾವಿತ ಮತಗಳೇ ಮರೆಯಾಗಿವೆ ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಯಾರು ಮುಂದೆ, ಯಾರು ಹಿಂದೆ ಎಂದು ಹೇಳುವುದು ಸುಲಭವಾಗಿಲ್ಲ.
ಬೆಟ್ಟಿಂಗ್: ಕ್ಷೇತ್ರದಲ್ಲಿನ ಈ ಕುತೂಹಲದ ಕಾರಣದಿಂದಾಗಿಯೇ ಕ್ಷೇತ್ರದಲ್ಲಿ ಬೆಟ್ಟಿಂಗ್ ಹವಾ ಕೂಡ ಶುರುವಾಗಿದೆ. ಜನರ ಈ ಕುತೂಹಲವನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ತೆರೆಮರೆಯಲ್ಲಿ ಬೆಟ್ಟಿಂಗ್ ದಂಧೆಗೂ ಇಳಿದಿದ್ದು ಇಂಥವರ ಮೇಲೆ ಪೊಲೀಸರು ಸಹ ಹದ್ದಿನ ಕಣ್ಣಿಟ್ಟಿದ್ದಾರೆ.
ಒಟ್ಟಾರೆ ಕ್ಷೇತ್ರದಲ್ಲಿ ಮತದಾನದ ನಂತರ ‘ಯಾರು ಗೆಲ್ತಾರೆ’ ‘ಶಾಸಕ ಶಂಕರ್ ಮತ ಎತ್ತ ಕಡೆ ಹೋದವು’ ಎಂಬ ಕುತೂಹಲದ ಚರ್ಚೆ, ವಾದ ನಡೆಯುತ್ತಿದ್ದು ಈ ಕುತೂಹಲ ತಣಿಯಲು ಮೇ 23ರ ವರೆಗೆ ಕಾಯಲೇಬೇಕಾಗಿದೆ.