Advertisement

ಶಂಕರಪುರ ಅಂಚೆ ಕಚೇರಿ: ಸಿಬಂದಿ ಕೊರತೆ; ಗ್ರಾಹಕರ ಪರದಾಟ

06:00 AM Jul 12, 2018 | Team Udayavani |

ವಿಶೇಷ ವರದಿ-  ಶಿರ್ವ: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಶಂಕರಪುರ ಉಪ ಅಂಚೆ ಕಚೇರಿಯು ಅತ್ಯಧಿಕ ಗ್ರಾಹಕರನ್ನು ಹೊಂದಿದೆ. ಅಂಚೆ ಕಚೇರಿಯಲ್ಲಿ ಸಿಬಂದಿ ಕೊರತೆಯಿಂದ ಸಕಾಲದಲ್ಲಿ ಸೇವೆ ಸಿಗದೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ

Advertisement

ಗ್ರಾಮೀಣ ಪ್ರದೇಶದ ಬಂಟಕಲ್ಲು ,ಹೇರೂರು ಶಾಖೆಗಳು ಶಂಕರಪುರ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿದ್ದು ಅತ್ಯಧಿಕ ಗ್ರಾಹಕರನ್ನು ಹೊಂದಿದೆ.ದಿನವೊಂದಕ್ಕೆ ಸಾವಿರಾರು ರೂ.ಗಳ ವ್ಯವಹಾರ ನಡೆಸುತ್ತಿರುವ ಅಂಚೆ ಕಚೇರಿಯಲ್ಲಿ ಸಿಬಂದಿಯಿಲ್ಲದೆ ಪೋಸ್ಟ್‌ ಮಾಸ್ಟರ್‌ ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದು ಇದ್ದ ಒಬ್ಬ ಪೋಸ್ಟ್‌ಮ್ಯಾನ್‌ ಕೂಡಾ ವರ್ಗಾವಣೆ ಪಡೆದುಕೊಂಡು ಕುಂದಾಪುರಕ್ಕೆ ತೆರಳಿದ್ದು ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ಸಿಬಂದಿ ಕೊರತೆ
ಗ್ರಾಮೀಣ ಭಾಗದಲ್ಲಿದ್ದರೂ ಹೆಚ್ಚಿನ ಜನರು ವಿದೇಶಗಳಲ್ಲಿ ದುಡಿಯುತ್ತಿದ್ದು ಅಂಚೆ ಕಚೇರಿಯು ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಅಂಚೆ ಸೇವೆಯೊಂದಿಗೆ ಬ್ಯಾಂಕಿಂಗ್‌ ವ್ಯವಹಾರ ಮತ್ತು ಪೋಸ್ಟಲ್‌ ಇನ್ಶೂರೆನ್ಸ್‌ ಸೌಲಭ್ಯವಿದ್ದು ಗ್ರಾಹಕರ ಸಂಖ್ಯೆ ಅಧಿಕವಾಗಿದೆ. ಆದರೆ ಸಿಬಂದಿ ಕೊರತೆಯಿಂದಾಗಿ ಜನರು ಸಕಾಲದಲ್ಲಿ ಸೇವೆ ದೊರೆಯದೆ ಪರದಾಡುತ್ತಿದ್ದಾರೆ. ಅಂಚೆ ಕಚೇರಿಯ ಕೆಲಸ ಮಾತ್ರವಲ್ಲದೆ ಆಧಾರ್‌ ತಿದ್ದುಪಡಿ, ಸುಕನ್ಯಾ ಸಮೃದ್ಧಿ, ಬ್ಯಾಂಕಿಂಗ್‌, ಇನ್ಶೂರೆನ್ಸ್‌ ಜತೆಗೆ ವಿದ್ಯುತ್‌ ಬಿಲ್‌, ದೂರವಾಣಿ ಬಿಲ್‌ಪಾವತಿಗಳ ಸೇವೆಯನ್ನು ಕೂಡಾ ಪೋಸ್ಟ್‌ ಮಾಸ್ಟರ್‌ ಒಬ್ಬರೇ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಐದಾರು ಮಂದಿ ಅಂಚೆ ಉಳಿತಾಯ ಯೋಜನೆಯ ಪ್ರತಿನಿಧಿಗಳಿದ್ದು ಅವರ ಖಾತೆಗಳ ನಿರ್ವಹಣೆಯನ್ನೂ ಒಬ್ಬರೇ ಮಾಡಬೇಕಿದೆ.

ಪೂರ್ಣಕಾಲಿಕ ಪೋಸ್ಟ್‌ಮ್ಯಾನ್‌  ಇಲ್ಲ
ಅಂಚೆ ಕಚೇರಿಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಪೋಸ್ಟ್‌ಮ್ಯಾನ್‌ ವರ್ಗಾವಣೆ ಪಡೆದುಕೊಂಡು ಮೇ 28ರಂದು ಕುಂದಾಪುರಕ್ಕೆ ತೆರಳಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಪೂರ್ಣಕಾಲಿಕ ಪೋಸ್ಟ್‌ಮ್ಯಾನ್‌ ಇರದೆ ಗ್ರಾಮೀಣ ಡಾಕ್‌ ಸೇವೆಯ ಸಿಬಂದಿ ಅಂಚೆ ಬಟವಾಡೆ ಮಾಡುತ್ತಿದ್ದಾರೆ. ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ವೃದ್ಧಾಪ್ಯ ವೇತನದಾರರಿದ್ದು, ವಿಧವಾ ವೇತನ, ಮನಿಯಾರ್ಡರ್‌,ರಿಜಿಸ್ಟರ್ಡ್‌ ಪತ್ರಗಳನ್ನು ಗ್ರಾಮೀಣ ಡಾಕ್‌ ಸೇವೆಯ ಸಿಬಂದಿ ತಾತ್ಕಾಲಿಕವಾಗಿ ಬಟವಾಡೆ ಮಾಡುತ್ತಿದ್ದಾರೆ.ಸುಭಾಸ್‌ನಗರ, ಸರಕಾರಿಗುಡ್ಡೆ ಪ್ರದೇಶದಲ್ಲಿ ಹೆಚ್ಚಿನ ಮನೆಗಳಿದ್ದು ಅವರಿಗೆ ವಿಳಾಸದ ಮಾಹಿತಿ ಕೊರತೆಯಿಂದ ಬಟವಾಡೆಯಾಗಬೇಕಿರುವ ಅಂಚೆ ಪತ್ರ, ಮ್ಯಾಗಜಿನ್‌ಗಳು ಸಕಾಲದಲ್ಲಿ ಬಟವಾಡೆಯಾಗದೆ ಬಾಕಿ ಉಳಿದಿವೆ.

ಸರ್ವರ್‌ ಸಮಸ್ಯೆ ಆಧಾರ್‌ ತಿದ್ದುಪಡಿ ಇಲ್ಲ
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಶಂಕರಪುರ ಅಂಚೆ ಕಚೇರಿಯಲ್ಲಿಯೂ ಆಧಾರ್‌ ತಿದ್ದುಪಡಿ ಕೇಂದ್ರವನ್ನು ತೆರೆಯ ಲಾಗಿತ್ತು. ಆದರೆ ತರಬೇತಿ ಹೊಂದಿದ ನುರಿತ ಸಿಬಂದಿಯ ನೇಮಕವಾಗದೆ ಇರುವ ಸಿಬಂದಿಯೇ ತಿದ್ದುಪಡಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಆದರೆ ಸರ್ವರ್‌ ಸಮಸ್ಯೆಯಿಂದ ಆಧಾರ್‌ ತಿದ್ದುಪಡಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ಇದರಿಂದ ಜನರು ದೂರದ ಉಡುಪಿ, ಕಾಪು ಯಾ ಇನ್ನಿತರ ಪ್ರದೇಶಗಳಿಗೆ ಅಲೆದಾಡಬೇಕಾಗಿದ್ದು ಅಂಚೆ ಇಲಾಖೆ ಪರಿಸರದ ಜನರ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ವಿಫಲವಾಗಿದೆ.ಅಂಚೆ ಇಲಾಖೆ ಪರಿಸರದ ಜನರ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲು ವಿಫಲವಾಗಿದೆ. ಅಂಚೆ ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಬೇಕಾದ ನುರಿತ ಸಿಬಂದಿ ನೇಮಿಸಿ ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕಿದೆ.

Advertisement

ಉತ್ತಮ ಸೇವೆ ನೀಡುವಂತಾಗಲಿ
ಶಾಲಾ ವಿದ್ಯಾರ್ಥಿಗಳ ದಾಖಲೆ ಪತ್ರಗಳು, ಎಲ್‌ಐಸಿ ಹಾಗೂ ವಾಹನ ಪಾಲಿಸಿಗಳ ಕಾಗದ ಪತ್ರಗಳು, ಹಿರಿಯ ನಾಗರಿಕರ ವೃದ್ಧಾಪ್ಯ ವೇತನ, ವಿಧವಾ ವೇತನ ಸಕಾಲದಲ್ಲಿ ಬಟವಾಡೆಯಾಗದೆ ಸಮಸ್ಯೆ ಎದುರಾಗಿದೆ. ಅಂಚೆ ಇಲಾಖೆ ಪರಿಸರದ ಮಾಹಿತಿ ಇರುವ ಪೋಸ್ಟ್‌ಮ್ಯಾನ್‌ ನೇಮಿಸಿ ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಸೇವೆ ನೀಡುವಂತಾಗಲಿ. 
– ಚಂದ್ರ ಪೂಜಾರಿ,ಗ್ರಾಹಕ

ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದೆ
ಸಿಬಂದಿ ಕೊರತೆಯಿಂದ ಗ್ರಾಹಕರಿಗೆ ಸಕಾಲದಲ್ಲಿ ಸೇವೆ ನೀಡಲು ಕಷ್ಟವಾಗುತ್ತಿದೆ.ಸಂಜೆ ಗಂಟೆ 6 ರ ಅನಂತರವೂ ಕಚೇರಿಯಲ್ಲಿದ್ದು ಜನರಿಗೆ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇನೆ.ಗ್ರಾಹಕರಿಂದ ದೂರು ಬರುವ ಹಿನ್ನೆಲೆಯಲ್ಲಿ ಸೂಕ್ತ ಸಿಬಂದಿ ನೇಮಿಸಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
– ಹೇಮಂತ್‌ ಕುಮಾರ್‌, ಪೋಸ್ಟ್‌ ಮಾಸ್ಟರ್‌, ಶಂಕರಪುರ

ಪರಿಶೀಲನೆ ನಡೆಸುತ್ತೇವೆ
ಪೋಸ್ಟ್‌ಮ್ಯಾನ್‌ ಬದಲಿಗೆ ತಾತ್ಕಾಲಿಕ ಸಿಬಂದಿ ಅಂಚೆ ಬಟವಾಡೆ ನಡೆಸುತ್ತಿದ್ದಾರೆ. ಗ್ರಾಹಕರ ಸಮಸ್ಯೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಅಂಚೆ ಕಚೇರಿಯ ಸಿಬಂದಿ ಕೊರತೆಗಾಗಿ ಹೊಸತಾಗಿ ಸಿಬಂದಿ ನೇಮಕ ಮಾಡಿ ಜನರ ಸೇವೆಗೆ ಯಾವುದೇ ಕುಂದು ಬಾರದಂತೆ ಪ್ರಯತ್ನ ಮಾಡುತ್ತೇವೆ.  
– ರಾಜಶೇಖರ ಭಟ್‌,
 ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next