Advertisement
ಲಾಕ್‌ಡೌನ್ ಕಾಲದಲ್ಲಿ ಶಂಕರಪುರ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿತ್ತು. ಈಗ ಅದು ಚೇತರಿಕೆ ಕಂಡು 5 ತಿಂಗಳ ಬಳಿಕ ಅಟ್ಟೆಗೆ ಸಾವಿರ ರೂ. ಗಡಿ ದಾಟಿದ್ದು, ಶನಿವಾರ ದರ 1,050 ರೂ. ತಲುಪಿದೆ. ನಾಲ್ಕೈದು ದಿನಗಳಿಂದ ಮಲ್ಲಿಗೆ ದರದಲ್ಲಿ ಏರಿಕೆ ಕಾಣುತ್ತಿರುವುದು ಬೆಳೆಗಾರರಲ್ಲಿ ನೆಮ್ಮದಿ ಮೂಡಿಸಿದೆ.
ಲಾಕ್‌ಡೌನ್ ಸಮಯದಲ್ಲಿ ಉಡುಪಿ ಜಿಲ್ಲೆಯ ಮಾರುಕಟ್ಟೆ ಬಿಟ್ಟು ಬೇರೆ ಕಡೆಗೆ ಮಲ್ಲಿಗೆ ಸಾಗಣೆಯಾಗದೆ ದರ ದಲ್ಲಿ ಭಾರೀ ಕುಸಿತ ಕಂಡು ಅಟ್ಟೆಗೆ 50 ರೂ. ಆಸುಪಾಸಿನಲ್ಲಿತ್ತು. ಎರಡನೇ ಲಾಕ್‌ಡೌನ್ ಹಂತದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕಟ್ಟೆಯೇ ಬಂದ್ ಆಗಿತ್ತು. ಬಳಿಕ ಪ್ರಾರಂಭಗೊಂಡ ಮಲ್ಲಿಗೆ ದರ ಅಟ್ಟೆಗೆ 100 ರಿಂದ 400 ರೂ. ಆಸುಪಾಸಿನಲ್ಲಿ ಇತ್ತು. ಮಲ್ಲಿಗೆ ಬೆಳೆಗಾರರಿಗೆ ವರ್ಷದ ಅತ್ಯಧಿಕ ಆದಾಯ ಸಿಗುವುದು ಎಪ್ರಿಲ್ -ಮೇ ತಿಂಗಳಲ್ಲಿ. ಅದೇ ಸಮಯದಲ್ಲಿ ಕೊರೊನಾ ಲಾಕ್‌ಡೌನ್ ಆಗಿತ್ತು, ಅನ್‌ಲಾಕ್ ಬಳಿಕವೂ ದರದಲ್ಲಿ ಚೇತರಿಕೆ ಕಂಡಿರಲಿಲ್ಲ. ಇಳುವರಿ ಕಡಿಮೆ; ಬೇಡಿಕೆ ಹೆಚ್ಚಳ
ಪ್ರಸ್ತುತ ಮಳೆಯಿಂದಾಗಿ ಮಲ್ಲಿಗೆ ಹೂವಿನ ಇಳುವರಿ ಕಡಿಮೆಯಾಗಿದೆ. ಅಲ್ಲದೆ ಇದು ಶ್ರಾವಣ ಮಾಸವಾಗಿದ್ದು, ಹಬ್ಬ, ಶುಭ ಸಮಾರಂಭಗಳು ಪ್ರಾರಂಭವಾಗಿರುವುದರಿಂದ ಮಲ್ಲಿಗೆ ಹೂವಿಗೆ ಬೇಡಿಕೆ ಏರತೊಡಗಿದೆ.
Related Articles
Advertisement
ಚೌತಿ ಬಳಿಕ ಚೇತರಿಕೆಲಾಕ್ಡೌನ್ ತೆರವಾಗಿ ಗಣೇಶ ಚತುರ್ಥಿಯ ಬಳಿಕ ಇತರ ಹೂ, ಹಣ್ಣು, ತರಕಾರಿ ಮಾರುಕಟ್ಟೆಯೂ ಸಾಕಷ್ಟು ಮಟ್ಟಿನ ಚೇತರಿಕೆ ಪಡೆಯುತ್ತಿದೆ. ಉಡುಪಿ ಭಾಗದಲ್ಲಿ ಸ್ಥಳೀಯ ತರಕಾರಿಗಳೂ ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಾರಂಭಿಸಿದ್ದು, ಬೇಡಿಕೆಯೂ ಹೆಚ್ಚಿದೆ. ಚೌತಿಯ ಬಳಿಕ ತರಕಾರಿಗಳಿಗೆ ಕೆಜಿಯೊಂದರ 20ರಿಂದ 30 ರೂ. ದರ ಏರಿಕೆ ಆಗಿದ್ದರೆ ಬೆಂಡೆ, ಬೀನ್ಸ್‌ನಂಥವುಗಳಿಗೆ 40 ರೂ.ವರೆಗೆ ಧಾರಣೆ ಏರಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಜನವಸತಿ ಪ್ರದೇಶದಲ್ಲೇ ಹಣ್ಣು ತರಕಾರಿ ಮಾರಾಟ ಹೆಚ್ಚಿದ್ದರೆ ಈಗ ಮಾರುಕಟ್ಟೆಗೆ ಸೀಮಿತಗೊಂಡಿರುವುದು ಹೊಸ ಬೆಳವಣಿಗೆ. ಮಂಗಳೂರು ಭಾಗದಲ್ಲಿ ಸ್ಥಳೀಯ ಬೆಂಡೆಗೆ 60ರಿಂದ 70 ರೂ. ಹೀರೆ, ಹಾಗಲ, ಮುಳ್ಳುಸೌತೆ ಇತ್ಯಾದಿ ಕೆಜಿಯೊಂದಕ್ಕೆ ಸರಾಸರಿ 60 ರೂ.ನಲ್ಲಿವೆ. ಕೋವಿಡ್ ನಿಂದಾಗಿ ಶುಭ ಸಮಾರಂಭಗಳಿಲ್ಲದೆ ಕುಸಿತ ಕಂಡಿದ್ದ ಮಲ್ಲಿಗೆ ದರ ಏರಿಕೆ ಕಂಡಿದ್ದು, ಬೆಳೆಗಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಮಲ್ಲಿಗೆ ಗರಿಷ್ಟ ದರ ಕಾಯ್ದುಕೊಂಡು ಬೆಳೆಗಾರರ ಹಿತ ಕಾಯಲಿ ಎಂಬುದು ನಮ್ಮೆಲ್ಲರ ಆಶಯ.
– ಅಣ್ಣಿ ಶೆಟ್ಟಿ, ಶಿರ್ವ ಪದವು, ಮಲ್ಲಿಗೆ ವ್ಯಾಪಾರಿ ಮತ್ತು ಬೆಳೆಗಾರ