ತಿ.ನರಸೀಪುರ/ ಬನ್ನೂರು: ಜೀವನ ಪರ್ಯಂತ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದರೂ ಆಡಳಿತರೂಢ ಸರ್ಕಾರದಲ್ಲಿ ಯಾವುದೇ ಸ್ಥಾನಮಾನವನ್ನು ನೀಡದೆ ನಿರ್ಲಕ್ಷಿಸಿದ್ದಕ್ಕೆ ಹಾಗೂ ಒಂದೊಂದು ಚುನಾವಣೆಯಲ್ಲೂ ಜನಪ್ರತಿನಿಧಿಯಾಗಲು ಅಪೇಕ್ಷೆಪಟ್ಟಾಗ ಆಕ್ಷೇಪಿಸಿದ್ದಕ್ಕೆ ಬೇಸತ್ತು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದೇನೆ ಎಂದು ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ವಕ್ತಾರ ಎಸ್.ಶಂಕರ್ ಹೇಳಿದರು.
ಪಟ್ಟಣದ ಹಳೇ ತಿರುಮಕೂಡಲಿನಲ್ಲಿರುವ ಶ್ರೀ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ಅ.8ರ ರಾಜಕೀಯ ಶಕ್ತಿ ಪ್ರದರ್ಶನ ಹಾಗೂ ಬೃಹತ್ ಬೆಂಬಲಿಗರ ಸಮಾವೇಶದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ರಾಜಕೀಯವಾಗಿ ನೆಲೆಯನ್ನು ಕಲ್ಪಿಸಿದ ಮಾತೃಪಕ್ಷವಾದ ಕಾಂಗ್ರೆಸ್‌ನಲ್ಲಿ ಹಲವು ದಶಕಗಳ ಕಾಲ ದುಡಿದರೂ ಕೂಡ ಅವಕಾಶ ಕೊಡಲಿಲ್ಲ. ಇತ್ತೀಚೆಗಷ್ಟೇ ಬಂದವರಿಗೆ ಅಧಿಕಾರವನ್ನು ಕೊಡಲಾರಂಭಿಸಿದರು. ಮುಂದಿನ ಅವಕಾಶಕ್ಕೆ ಭರವಸೆ ನೀಡಿದರು ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.
ಅ.8 ರಂದು ಬೃಹತ್ ಸಮಾವೇಶ: ಸಾಮಾಜಿಕ ಮತ್ತು ಸಮುದಾಯ ಸೇವೆಯನ್ನು ಮಾಡುವವರಿಗೆ ರಾಜಕೀಯ ಅಧಿಕಾರ ಬೇಕು. ಜನಪ್ರತಿನಿಧಿಯಾಗಿ ಆಯ್ಕೆಗೊಂಡರೆ ಮಾತ್ರ ನಂಬಿದ ಜನರಿಗೆ ಏನನ್ನಾದರೂ ಮಾಡಲು ಸಾಧ್ಯ. ಆಗಂತ ರಾಜಕೀಯ ಅಧಿಕಾರವನ್ನೇ ಮುಖ್ಯ ಎಂಬ ಭಾವನೆ ನನ್ನಲ್ಲಿಲ್ಲ.
ಬೆಂಬಲಿಗರು ಹಾಗೂ ಹಿತೈಷಿಗಳ ಸಲಹೆಯಂತೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ನಿರ್ಧಾರವನ್ನು ಮುಂದಾಗಿದ್ದೇವೆ. ಈಗಾಗಲೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸುತ್ತೇನೆ. ಅ.8ರಂದು ಬನ್ನೂರು ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ಬೆಂಬಲಿಗರ ಬೃಹತ್ ಸಮಾವೇಶವನ್ನು ನಡೆಸಿ ರಾಜಕೀಯ ಬಲವನ್ನು ಪ್ರದರ್ಶಿಸಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಎಂದರು.
ಸಚಿವರಿಗಿಂತ ಕಮ್ಮಿಯಿಲ್ಲ: ಯಾವುದೇ ರಾಜಕೀಯ ಅಧಿಕಾರ ಇಲ್ಲದಿದ್ದರೂ ಸಮಾಜ ಸೇವೆಯನ್ನು ಬದುಕನ್ನಾಗಿಸಿಕೊಂಡ ನಾನು ಸರ್ಕಾರದಲ್ಲಿನ ಓರ್ವ ಸಚಿವರಿಗೆ ಇರುವಷ್ಟು ಜನಬೆಂಬಲವನ್ನು ಹಾಗೂ ಬೆಂಬಲಿಗರ ಪ್ರೀತಿವಿಶ್ವಾಸ ಮತ್ತು ಅಭಿಮಾನವನ್ನು ಜಿಲ್ಲೆ ಹಾಗೂ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಗಳಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಇದ್ದಂತಹ ನನಗೆ ಆಗಿರುವ ಅನ್ಯಾಯವನ್ನು ಸೆ.8ರ ಸಮಾವೇಶದಲ್ಲಿ ಎಳೆ ಎಳೆಯಾಗಿ ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಎಸ್.ಶಂಕರ್ ತಿಳಿಸಿದರು.
ಸಭೆಯಲ್ಲಿ ತಾಪಂ ಸದಸ್ಯ ಹೆಚ್.ಜವರಯ್ಯ, ತಲಕಾಡು ಗ್ರಾಪಂ ಮಾಜಿ ಅಧ್ಯಕ್ಷ ಸುಂದರ್‌ರಾಜ್, ಬನ್ನೂರು ಪುರಸಭೆ ಮಾಜಿ ಸದಸ್ಯ ಇರ್ಷದ್ ಖಾನ್, ಮುಖಂಡರಾದ ಪಂಚೆ ದೊಳ್ಳಯ್ಯ, ಸಿದ್ದರಾಮನಹುಂಡಿ ಕುಮಾರ, ಶಿವಯ್ಯ, ಸ್ವಾಮಿ, ಕೆಂಪಣ್ಣ, ಪುಟ್ಟಯ್ಯ, ಚಿಕ್ಕಸ್ವಾಮಿ, ಶಿವಣ್ಣ, ರಾಜಣ್ಣ, ಮಾಕನಹಳ್ಳಿ ಕುಮಾರ, ಮಾದಶೆಟ್ಟಿ, ವಾಟಾಳು ನಂಜುಂಡಯ್ಯ, ಶಿವಪ್ರಕಾಶ್, ಬಿ.ವಿ.ರಮೇಶ್, ಶಿವಣ್ಣ, ಬಸವರಾಜು, ವೆಂಕಟೇಶ್, ಬೆಳ್ಳಸ್ವಾಮಿ, ಕೃಷ್ಣ, ಮುತ್ತಣ್ಣ, ಲಿಂಗರಾಜು ಇತರರಿದ್ದರು.