ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ.ಶಂಕರ್ (82) ಅವರು ಅನಾರೋಗ್ಯದಿಂದ ಶನಿವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಾಲೂಕಿನ ಸೋಮನಹಳ್ಳಿ ಗ್ರಾಮದ ಎಸ್.ಸಿ.ಮಲ್ಲಯ್ಯ ಅವರ 9ನೇ ಪುತ್ರರಾಗಿದ್ದ ಎಸ್.ಎಂ. ಶಂಕರ್ ಅವರು, ಪತ್ನಿ ನಾಗವೇಣಿ, ಪುತ್ರಿ ಚೈತ್ರ, ಪುತ್ರ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅವರನ್ನು ಅಗಲಿದ್ದಾರೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಳೀಯ ಸಂಘ, ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕಿ ಪ್ರಭಾವತಿ ಜಯರಾಂ ವಿರುದ್ಧ ಗೆಲುವು ಸಾಧಿಸಿದ ಎಸ್.ಎಂ.ಶಂಕರ್, 2004 ರಿಂದ 10ರವರೆಗೆ 6 ವರ್ಷಗಳ ಕಾಲ ಶಾಸಕರಾಗಿ ಹಲವಾರು ಸಾಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರ ಅಂತ್ಯಸಂಸ್ಕಾರ ಸೋಮನಹಳ್ಳಿ ಗ್ರಾಮದ ಎಸ್.ಸಿ.ಮಲ್ಲಯ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆರವೇರಿತು. ಪುತ್ರ ಎಸ್.ಗುರುಚರಣ್ ಅಗ್ನಿ ಸ್ಪರ್ಶ ನೆರವೇರಿಸಿದರು.
ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಡಿ.ಕೆ.ಸುರೇಶ್, ಶಾಸಕ ರವೀಂದ್ರ ಶ್ರೀಕಂಠಯ್ಯ, ಎನ್.ಚಲುವರಾಯ ಸ್ವಾಮಿ, ಚಿತ್ರ ನಟಿ ರಕ್ಷಿತಾ, ಪ್ರೇಮ್ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.