ಬ್ಯಾಂಕಾಕ್ : ಶೇನ್ ವಾರ್ನ್ ಅವರ ಶವಪರೀಕ್ಷೆಯನ್ನು ನಡೆಸಲಾಗಿದ್ದು, ಅವರು ಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಬಂದಿರುವುದಾಗಿ ಥಾಯ್ ಲ್ಯಾಂಡ್ ಪೊಲೀಸರು ಸೋಮವಾರ ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ ಶವಪರೀಕ್ಷೆಯ ವರದಿಯನ್ನು ಸ್ವೀಕರಿಸಲಾಗಿದೆ ಮತ್ತು ವಾರ್ನ್ ಅವರದ್ದು “ನೈಸರ್ಗಿಕ ಸಾವು” ಎಂದು ತೀರ್ಮಾನಿಸಲಾಗಿದೆ ಎಂದು ಥಾಯ್ ಪೊಲೀಸ್ ವಕ್ತಾರ ಕೃತ್ಸಾನಾ ಪಟ್ಟನಾಚರೊಯೆನ್ ಹೇಳಿದ್ದಾರೆ.
ಪೊಲೀಸರು ವಾರ್ನ್ ಕುಟುಂಬ ಮತ್ತು ಆಸ್ಟ್ರೇಲಿಯಾ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಲು ಪ್ರಾಸಿಕ್ಯೂಟರ್‌ಗೆ ವರದಿಯನ್ನು ನೀಡಲಿದ್ದಾರೆ. ಸಾವಿನ ತನಿಖೆಗಾಗಿ ಆಸ್ಟ್ರೇಲಿಯಾದ ರಾಯಭಾರಿ ಥಾಯ್ ಪೋಲೀಸ್ ಮತ್ತು ಸಂಬಂಧಿತ ಇಲಾಖೆಗೆ ಮನವಿ ಮಾಡಿದ್ದರು.
ಇನ್ನೊಂದೆಡೆ ವಾರ್ನ್ ಅವರ ಮೃತದೇಹ ಹೊತ್ತುಕೊಂಡು ತೆರಳುತ್ತಿದ್ದ ಆಂಬ್ಯುಲೆನ್ಸ್‌ಗೆ ಹತ್ತಿದ ಜರ್ಮನ್ ಮಹಿಳೆಯನ್ನು ಪೊಲೀಸರು ಪ್ರತ್ಯೇಕವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ವಾರ್ನ್ ಅವರು ಸಾವನ್ನಪ್ಪಿದ್ದರು. ಸದ್ಯ ಅವರ ಸಂಬಂಧಿಕರು ಥಾಯ್ ಲ್ಯಾಂಡ್ ಗೆ ಆಗಮಿಸಿದ್ದು, ಮೃತದೇಹವನ್ನು ಆಸ್ಟ್ರೇಲಿಯಾಗೆ ಒಯ್ಯುವ ಸಿದ್ಧತೆಯಲ್ಲಿದ್ದಾರೆ.