ಚಿಕ್ಕೋಡಿ: ರಾಯಬಾಗ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದು ಶತಸಿದ್ಧ, ಕ್ಷೇತ್ರದ ಜನರ ಸೇವೆ ಮಾಡಲು ಐಎಎಸ್ ಹುದ್ದೆ ತ್ಯಾಗ ಮಾಡಿ ಬಂದಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ದೊರೆಯುತ್ತದೆ ಎಂಬ ವಿಶ್ವಾಸವಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಯಭಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಶಂಭು ಕಲ್ಲೋಳಕರ ಹೇಳಿದರು.
ತಾಲೂಕಿನ ಸುಕ್ಷೇತ್ರ ತೋರಣಹಳ್ಳಿ ಶ್ರೀ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಮತ್ತು ಮಹಿಳೆಯರ ಅರಿಸಿಣ ಕುಂಕುಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಕಾರಿ ಸೇವೆಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿ ಜನ ಸೇವೆ ಮಾಡಲಾಗಿದ್ದು, ಈಗ ರಾಜಕೀಯ ಮೂಲಕ ಹುಟ್ಟಿದ ನಾಡಿನ ಜನರ ಸೇವೆ ಮಾಡುವ ಉದ್ದೇಶದಿಂದ ನಾನು ಉನ್ನತ ಹುದ್ದೆ ತ್ಯೇಜಿಸಿ ರಾಜಕೀಯ ಪ್ರವೇಶ ಮಾಡಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಟರ ಬಳಿ ಮನವಿ ಮಾಡಿಕೊಂಡಿದ್ದು ಅವರಿಂದಲೂ ಸಹ ಸಕಾರಾರತ್ಮಕ ಉತ್ತರ ದೊರಕಿದೆ ಎಂದರು.
ಕಳೆದ ಎರಡು ತಿಂಗಳುಗಳಿಂದ ರಾಯಬಾಗ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದಾಗ ಜನರಿಂದ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ. ಜನರು ಸಹ ನೀವೇ ಈ ಭಾರಿ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಾನು ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಉತ್ಸುಕನಾಗಿದ್ದು, ಸರಕಾರದ ಯೋಜನೆಗಳನ್ನು ಸಾಮಾನ್ಯ ಜನರ ಮನೆ ಬಾಗೀಲಿಗೆ ಮುಟ್ಟಿಸುವ ಮುಖಾಂತರ ಅವರ ಸರ್ವಾಂಗಿಣ ಪ್ರಗತಿಗೆ ಶ್ರಮಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದರು.
ಈ ಭಾಗದಲ್ಲಿ ಹತ್ತು ಹದಿನೈದು ವರ್ಷಗಳಿಂದ ಕಲ್ಲೋಳಕರ ಪೌಂಡೇಶನ್ ಮುಖಾಂತರ ಜನರ ಸೇವೆ ಮಾಡಲಾಗುತ್ತಿದ್ದು, ಸರಕಾರದ ಯೋಜನೆಗಳನ್ನು ತರಬೇಕಾದರೇ ಅಧಿಕಾರದ ಅವಶ್ಯಕತೆ ಇದೆ. ಆದ್ದರಿಂದ ನಾನು ಈ ಬಾರಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಮುಂದಿನ ದಿನಮಾನದಲ್ಲಿ ಈ ಭಾಗದಲ್ಲಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೈಗಾರಿಕೋದ್ಯಮ, ಸರಕಾರಿ ಶಾಲಾ,ಕಾಲೇಜುಗಳನ್ನು ಸ್ಥಾಪಿಸುವುದು. ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಧುಳಗೌಡ ಪಾಟೀಲ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಶಾಂತಾ ಕಲ್ಲೋಳಕರ, ರಾಘವೇಂದ್ರ ಸನದಿ, ರುದ್ರಪ್ಪಾ ಸಂಗಪ್ಪಗೋಳ, ದುಂಡಪ್ಪಾ ಘರಬುಡೆ, ರವಿ ಪಾಶ್ಚಾಪುರೆ, ಎಂ.ಎಚ್.ಪಟೇಲ್, ನಾನಾಗೌಡ ಪಾಟೀಲ, ಬಸವಪ್ರಭು ಕುಂಡ್ರುಕ್, ಬಸು ಮಾಂಜರೆ, ಅಪ್ಪಾಸಾಬ ಬ್ಯಾಳಿ, ರಾವಸಾಹೇಬ ಫಕೀರೆ, ಎಂ.ಆರ್.ಮನ್ನೋಳಿಕರ, ಐ.ಎಂ.ಪಾಟೀಲ, ಭೀಮರಾವ ಲಚ್ಚಪ್ಪಗೋಳ, ಶಿವಾಜಿ ಖಾಡ, ರಾಮಗೌಡ ಲಚ್ಚಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.