Advertisement

ಶಕ್ತಿಕಾಂತ್‌ ರಿಸರ್ವ್ ಬ್ಯಾಂಕ್ ಗವರ್ನರ್‌

05:35 AM Dec 12, 2018 | Team Udayavani |

ಹೊಸದಿಲ್ಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ನ (ಆರ್‌ಬಿಐ) 25ನೇ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ನೇಮಕಗೊಂಡಿದ್ದಾರೆ. ಗವರ್ನರ್‌ ಸ್ಥಾನಕ್ಕೆ ಊರ್ಜಿತ್‌ ಪಟೇಲ್‌ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಸರಕಾರವು ಶಕ್ತಿಕಾಂತ್‌ ದಾಸ್‌ರನ್ನು ನೇಮಕ ಮಾಡಿದೆ. 61 ವರ್ಷದ ಶಕ್ತಿಕಾಂತ್‌ ದಾಸ್‌ ಅವರು 3 ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್‌ ಆಗಿ ಮುಂದುವರಿಯಲಿದ್ದಾರೆ. ಊರ್ಜಿತ್‌ ರಾಜೀನಾಮೆ ನೀಡಿದ ಕಾರಣ ಸರಕಾರವು ಮಧ್ಯಾಂತರ ಗವರ್ನರ್‌ ನೇಮಕ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ ಮಂಗಳವಾರವೇ ಮೋದಿ ನೇತೃತ್ವದ ಸಂಪುಟ ನೇಮಕ ಸಮಿತಿ ದಾಸ್‌ರನ್ನು ನೇಮಕ ಮಾಡಿದೆ. ಈ ಮೂಲಕ 5 ವರ್ಷ ಬಳಿಕ ಅಧಿಕಾರಿಯೊಬ್ಬರು ಆರ್‌.ಬಿ.ಐ. ಗವರ್ನರ್‌ ಹುದ್ದೆಗೇರಿದಂತಾಗಿದೆ. ಅಲ್ಲದೆ ಶುಕ್ರವಾರ ಆರ್‌.ಬಿ.ಐ. ಮಂಡಳಿಯ ಪ್ರಮುಖ ಸಭೆ ನಡೆಯಲಿದ್ದು, ಅದಕ್ಕೂ ಮುನ್ನವೇ ಇವರ ನೇಮಕವಾಗಿರುವುದು ಮಹತ್ವದ್ದಾಗಿದೆ.

Advertisement

ತಮಿಳುನಾಡು ಕೇಡರ್‌ನ 1980ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ದಾಸ್‌ ಅವರು 2015ರಿಂದ 2017ರ ಮೇವರೆಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಅವರನ್ನು ಭಾರತದ ಜಿ-20 ಶೆರ್ಪಾ ಆಗಿನೇಮಕ ಮಾಡಲಾಗಿತ್ತು. ಅಲ್ಲದೆ 15ನೇ ಹಣಕಾಸು ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತಿಹಾಸ ಪದವಿ ಪಡೆದಿರುವ ದಾಸ್‌ ಅವರು 2014ರಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಸರಕಾರ ಅಧಿಕಾರಕ್ಕೇರಿದ ಕೂಡಲೇ ಕೇಂದ್ರ ವಿತ್ತ ಸಚಿವಾಲಯವನ್ನು ಪ್ರವೇಶಿಸಿದ್ದರು.

ತಿಕ್ಕಾಟ ಅಂತ್ಯ ನಿರೀಕ್ಷೆ
ಶಕ್ತಿಕಾಂತ್‌ ದಾಸ್‌ ಅವರು ಅನುಭವಿ ಅಧಿಕಾರಿಯಾಗಿದ್ದು, ಆಡಳಿತಾರೂಢ ಎನ್‌.ಡಿ.ಎ. ಹಾಗೂ ಹಿಂದಿನ ಯುಪಿಎ ಅವಧಿಯಲ್ಲೂ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಇವರ ನೇಮಕವು ಷೇರು ಮಾರುಕಟ್ಟೆಯಲ್ಲೂ ಚೇತರಿಕೆ ಉಂಟುಮಾಡುವ ನಿರೀಕ್ಷೆಯಿದೆ. ಏಕೆಂದರೆ ಆರ್‌ಬಿಐ ಹಾಗೂ ಕೇಂದ್ರ ಸರಕಾರದ ನಡುವಿನ ತಿಕ್ಕಾಟವು ಶಮನವಾಗಬೇಕೆಂಬುದೇ ಹೂಡಿಕೆದಾರರ ಆಶಯವಾಗಿದೆ. ದಾಸ್‌ ನೇಮಕದಿಂದ ಈ ತಿಕ್ಕಾಟಕ್ಕೆ ತೆರೆಬೀಳುವ ಆಶಾಭಾವ ಮೂಡಿದೆ ಎನ್ನುತ್ತಾರೆ ಡಿಬಿಎಸ್‌ ಬ್ಯಾಂಕ್‌ ಕಾರ್ಯಕಾರಿ ನಿರ್ದೇಶಕ ಆಶಿಷ್‌ ವೈದ್ಯ.

Advertisement

Udayavani is now on Telegram. Click here to join our channel and stay updated with the latest news.

Next