ವಾಷಿಂಗ್ಟನ್: “ರೋಗಗ್ರಸ್ತ ನಾಯಿಯನ್ನು ಹೊಡೆದು ಕೊಂದಂತೆ ಅಮೆರಿಕವನ್ನು ಸಾಯಿಸುತ್ತೇವೆ, ಜಪಾನ್ ಅನ್ನು ಮುಳುಗಿಸುತ್ತೇವೆ…’
ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ನಿರ್ಬಂಧಕ್ಕೆ ಒಳಗಾಗಿ, ತೀವ್ರ ಮುಖಭಂಗ ಅನುಭವಿಸಿ ಪ್ರಸ್ತುತ ಬಾಲ ಸುಟ್ಟ ಬೆಕ್ಕಿನಂತಾಗಿರುವ ಉತ್ತರ ಕೊರಿಯಾ, ಬೆದರಿಕೆ ಹಾಕಿದ ಪರಿ ಇದು. ಇತ್ತೀಚೆಗೆ ಮನಸೋಯಿಚ್ಛೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾದ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ವಿಧಿಸುವಂತೆ ಅಮೆರಿಕ ಕೈಗೊಂಡ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿತ್ತು. ಈ ಪ್ರಕ್ರಿಯೆಯಲ್ಲಿ ಜಪಾನ್ ಕೂಡ ಅಮೆರಿಕಕ್ಕೆ ಪ್ರಬಲ ಬೆಂಬಲ ವ್ಯಕ್ತಪಡಿಸಿತ್ತು. ಎರಡೂ ದೇಶಗಳ ಈ ನಡೆ ಉತ್ತರ ಕೊರಿಯಾದ ಕೋಪ ನೆತ್ತಿಗೇರುವಂತೆ ಮಾಡಿದೆ.
ಹೊರ ಜಗತ್ತಿನೊಂದಿಗೆ ಉತ್ತರ ಕೊರಿಯಾದ ಸಂಪರ್ಕ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ “ಕೊರಿಯಾ ಏಷ್ಯಾ-ಪೆಸಿಫಿಕ್ ಶಾಂತಿ ಪಾಲನ ಸಮಿತಿ’, ಉತ್ತರ ಕೊರಿಯಾ ಹೀಗೆ ಹೇಳಿದೆ ಎಂದು ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದು, ಕೊರಿಯಾದ ಈ ವರ್ತನೆಯನ್ನು ವಿಶ್ವಸಂಸ್ಥೆ “ಪೈಶಾಚಿಕ ನಡೆ’ ಎಂದು ಕರೆದಿದೆ.
ಕಳೆದ ತಿಂಗಳು ಉತ್ತರ ಜಪಾನ್‌ನ ದ್ವೀಪವೊಂದರ ಮೇಲೆ ಮಧ್ಯಮ ಗಾತ್ರದ ಕ್ಷಿಪಣಿಯೊಂದನ್ನು ಸಿಡಿಸಿದ ಅನಂತರ ಇದೇ ಮೊದಲ ಬಾರಿ ಉತ್ತರ ಕೊರಿಯಾ ಜಪಾನ್‌ಗೆ ಬೆದರಿಕೆ ಒಡ್ಡಿದೆ. “ಜುಚೆ ಅಣು ಬಾಂಬ್ ಹಾಕುವ ಮೂಲಕ ಆ ದ್ವೀಪ ಸಮೂಹದ (ಜಪಾನ್) ನಾಲ್ಕು ದ್ವೀಪಗಳನ್ನು ಸಮುದ್ರದೊಳಗೆ ಮುಳುಗಿಸಿ ಬಿಡುತ್ತೇವೆ. ಜಪಾನ್ ಇನ್ನೆಂದೂ ಅಮೆರಿಕದ ಸಮೀಪದಲ್ಲಿ ಕಾಣಿಸಿ ಕೊಳ್ಳುವುದಿಲ್ಲ,’ ಎಂದು ಸಮಿತಿ ಹೇಳಿರುವುದಾಗಿ ಕೆಸಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಟ್ಟು ಬೂದಿ ಮಾಡುತ್ತೇವೆ: ಇಡೀ ಅಮೆರಿಕವನ್ನು ಸುಟ್ಟು ಬೂದಿಯಾಗಿಸಿ, ಕತ್ತಲೆ ಆವರಿಸುವಂತೆ ಮಾಡುತ್ತೇವೆ. ಇದುವರೆಗೂ ನಾವು ಕೂಡಿಟ್ಟುಕೊಂಡ ಶಕ್ತಿಯನ್ನೆಲ್ಲ ಅಮೆರಿಕದ ಧ್ವಂಸಕ್ಕೆ ಬಳಸುತ್ತೇವೆ’ ಎನ್ನುವ ಮೂಲಕ ಉತ್ತರ ಕೊರಿಯಾ ಕೆಂಡಕಾರಿದೆ.
ಮತ್ತೆ ಪರೀಕ್ಷೆಗೆ ಸಿದ್ಧತೆ: ವಿಶ್ವಸಂಸ್ಥೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಪರ್ವತ ಗಳಿಂದ ಆವೃತ್ತವಾಗಿರುವ ಗುಪ್ತ ಸ್ಥಳ ವೊಂದರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಉತ್ತರ ಕೊರಿಯಾ ಸಿದ್ಧತೆ ನಡೆಸಿದೆ. ಹೊಸ ಸ್ಯಾಟಲೈಟ್ ಚಿತ್ರದಲ್ಲಿ ಸಿದ್ಧತೆಯ ಚಿತ್ರಣ ಕಂಡುಬಂದಿರುವುದಾಗಿ ಅಮೆರಿಕ ಮೂಲದ ತನಿಖಾ ಸಂಸ್ಥೆ ತಿಳಿಸಿದೆ.