ಶಹಾಪುರ: ನಗರದಲ್ಲಿ ಶುಕ್ರವಾರ ಸಂಜೆ ಮಳೆ ಸುರಿದ ಪರಿಣಾಮ ಬಸವೇಶ್ವರ ವೃತ್ತ, ಪೊಲೀಸ್ ಠಾಣೆ ಮತ್ತು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಕುಟುಂಬಸ್ಥರು ಪರದಾಡಿದರು.
ಯಾದಗಿರಿ ರಸ್ತೆಗೆ ಹೊಂದಿಕೊಂಡಿದ್ದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯೊಳಗೂ ನೀರು ನುಗ್ಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ನೀರಿನಲ್ಲಿಯೇ ನಡೆದು ಬರುವಂತಾಯಿತು.
ಸುಮಾರು ಒಂದು ಗಂಟೆ ಮಳೆ ಸುರಿದಿದ್ದು, ಬಸವೇಶ್ವರ ವೃತ್ತ ಸೇರಿದಂತೆ ಮಾರುತಿ ರಸ್ತೆ ಸಂಪೂರ್ಣ ನೀರಲ್ಲಿ ಮುಳುಗಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಶಾಲಾ ಮಕ್ಕಳು, ವೃದ್ಧರು ಮಳೆ ನಿಂತ ಮೇಲೆ ಮನೆಗೆ ತೆರಳಲು ಹರಸಾಹಸ ಪಟ್ಟರು.
ನಗರಸಭೆ ಅಧಿಕಾರಿಗಳು ಅಸಮರ್ಪಕ ಚರಂಡಿ ಕಾಮಗಾರಿ ಕೈಗೊಂಡಿರುವ ಕಾರಣ ಮಾರುತಿ ರಸ್ತೆ ಸೇರಿದಂತೆ ಇತರೆಡೆ ಮಳೆ ನೀರು ಸರಾಗವಾಗಿ ಹೋಗದ ಪರಿಣಾಮ ಚರಂಡಿ ತ್ಯಾಜ್ಯ ಸೇರಿದಂತೆ ಹೊಲಸು ನೀರು ರಸ್ತೆ ಆವರಿಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಮತ್ತ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಚರಂಡಿ ಮೇಲೆ ಸಾಕಷ್ಟು ಸಣ್ಣ ಪುಟ್ಟ ಅಂಗಡಿಗಳು ನಿರ್ಮಾಣಗೊಂಡಿರುವ ಪರಿಣಾಮ ಚರಂಡಿ ತ್ಯಾಜ್ಯ ತೆಗೆಯಲು ಆಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ನಗರಸಭೆ ಸಿಬ್ಬಂದಿ.
ವ್ಯಾಪಾರಿಗಳಿಗೆ ನಷ್ಟ: ಮಳೆ ಸುರಿದ ಪರಿಣಾಮ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಹಣ್ಣು, ಹೂವಿನ ವ್ಯಾಪಾರಿಗಳು ಸೇರಿದಂತೆ ಇತರೆ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟವಾಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಮುಖಂಡ ರಾಜು ಹೊಸೂರ ತಿಳಿಸಿದ್ದಾರೆ. ನಗರದ ಲಕ್ಷ್ಮೀ ನಗರದಲ್ಲಿರುವ ಖಾಸಗಿ ಹೋಟೆಲ್ವೊಂದರ ಸೆಪ್ಟಿಕ್ ಟ್ಯಾಂಕ್ ಒಡೆದ ಪರಿಣಾಮ ಶೌಚಾಲಯ ಹೊಲಸು ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಗಬ್ಬು ವಾಸನೆ ಬೀರುತ್ತಿದೆ. ಶೌಚಾಲಯದ ನೀರು ಬಡಾವಣೆಯ ಹಲವು ಮನೆಗಳಿಗೆ ನುಗ್ಗಿದ್ದು, ಹೊಲಸು ಮನೆ ಮುಂದೆ ಬಂದು ನಿಂತಿದ್ದು, ಜನ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.