ಯಾದಗಿರಿ: ಬಂಧಿತ ಉಗ್ರನೊಂದಿಗೆ ಯಾದಗಿರಿ ಜಿಲ್ಲೆಯ ನಂಟು ಇದೆಯಾ..? ಹೀಗೊಂದು ಅನುಮಾನದ ಜಾಲವನ್ನು ಬೆನ್ನು ಹತ್ತಿದ ಎನ್ ಐಎ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಿಗ್ಗೆ ಶಹಾಪುರಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.
ಯಾದಗಿರಿಯ ಜಿಲ್ಲೆಯ ಶಹಾಪುರದ ಯುವಕ ಖಾಲಿದ್ ಅಹ್ಮದ್ ನೊಂದಿಗೆ ಬಂಧಿತ ಉಗ್ರ ಫೈದಾನ್ ಜತೆ ನಂಟಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆಸಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಹಾಪುರಕ್ಕೆ ತೆರಳಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ರಾಂಚಿ ನಗರದಲ್ಲಿ ಐಸಿಸ್ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು (ಫೈದಾನ್) ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುವಾಗ, ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಯುವಕನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆಸಿದ್ದ ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ತಂಡದ ಅಧಿಕಾರಿಗಳು ಗುರುವಾರ ನಸುಕಿನ ಜಾವ ಶಹಾಪುರ ನಗರದ ಹಳೆಪೇಟೆಯಲ್ಲಿರುವ ಖಾಲಿದ್ ಅಹ್ಮದ್ ಎಂಬಾತನ ಮನೆಗೆ ತೆರಳಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:Rajasthan CM ಗೆಹ್ಲೋಟ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಡಿ.ಕೆ. ಶಿವಕುಮಾರ್
ಖಾಲಿದ್ ಅಹ್ಮದ್ ಮೊಬೈಲ್ ಜಪ್ತಿ ಮಾಡಲಾಗಿದೆ. ಅಲ್ಲದೇ, ಆತನ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದ್ದಾರೆ. ಖಾಲಿದ್ ಅಹ್ಮದ್ ಮನೆ ಮಂದಿಯನ್ನೂ ವಿಚಾರಣೆ ಮಾಡಲಾಗಿದೆ. ಅಧಿಕಾರಿ ಸಚ್ಚಿದಾನಂದ ಶರ್ಮಾ ನೇತೃತ್ವದ ಎನ್.ಐ.ಎ ತಂಡವು ವಿಚಾರಣೆ ನಡೆಸಿದ್ದು, ಯಾದಗಿರಿ ಜಿಲ್ಲೆಯಲ್ಲಿ ಉಗ್ರನೊಂದಿಗೆ ನಂಟಿರುವ ಈ ಮಾಹಿತಿ ಸಂಚಲನ ಮೂಡಿಸಿದೆ.
ಐಸಿಸಿ ಉಗ್ರನ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಎನ್ಐಎ ತಂಡ ಅಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ, ಸೆಪ್ಟೆಂಬರ್ 20ರಂದು ರಾಂಚಿಯಲ್ಲಿನ ಎನ್ಐಎ ಕಚೇರಿಗೆ ಬರುವಂತೆ ನೋಟೀಸ್ ನೀಡಲಾಗಿದೆ ಎಂದು ಹೇಳಲಾಗಿದೆ.