ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪ್ರಧಾನಿ ವಿರುದ್ಧ ವಿದ್ಯಾರ್ಥಿಗಳಿಂದ ಅವಹೇಳನ ನಾಟಕ ಪ್ರದರ್ಶನ ಸಂಬಂಧ ನಗರದ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಶನಿವಾರ ಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರನ್ನು ಭೇಟಿ ಮಾಡಿ ಪ್ರಕರಣ ಕುರಿತು ಚರ್ಚಿಸಿದರು.
ಪಕ್ಷದ ಜಿಲ್ಲಾ ಪ್ರಮುಖರೊಂದಿಗೆ ಎಸ್‌ಪಿ ಅವರನ್ನು ಭೇಟಿ ಮಾಡಿದ ಒವೈಸಿ, ಕಾನೂನು ಬದ್ಧವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಸಂಸ್ಥೆ ಮತ್ತು ಅದರ ಮುಖ್ಯಸ್ಥರ ವಿರುದ್ಧ ದಾಖಲಿಸಿರುವ ಕಲಂಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಶ್ರೀಧರ್, ದೂರಿನ ಆಧಾರದ ಮೇಲೆ ಕಾನೂನು ರೀತ್ಯ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಬದ್ಧವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.
ಅವಹೇಳನಕಾರಿ ನಾಟಕ ಪ್ರದರ್ಶನ ಸಂಬಂಧ ಶುಕ್ರವಾರ ಶಾಹೀನ್ ಶಾಲೆಯ ಮುಖ್ಯಗುರು ಮತ್ತು ವಿದ್ಯಾರ್ಥಿನಿಯೊಬ್ಬಳ ತಾಯಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜತೆಗೆ ದೇಶದ್ರೋಹ ಆರೋಪ ಎದುರಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ನಡುವೆ ಒವೈಸಿ ಅವರು ನ್ಯಾಯಾಂಗ ಬಂಧನದಲ್ಲಿರುವ ಮುಖ್ಯಗುರು ಮತ್ತು ವಿದ್ಯಾರ್ಥಿನಿಯ ತಾಯಿಯನ್ನು ಭೇಟಿಯಾದರು.